'ಕೊಲವೆರಿ ಡಿ' ಆಯ್ತು, ಈಗ 'ಪ್ಯಾರ್‌ಗೆ ಆಗ್ಬಿಟ್ಟೈತಿ'..!

SUJENDRA
ಯೂಟ್ಯೂಬ್‌ನಲ್ಲಿ ಕನ್ನಡ ಹಾಡೊಂದಕ್ಕೆ 85,000ಕ್ಕೂ ಹೆಚ್ಚು ಹಿಟ್ ಸಿಗೋದಂದ್ರೆ ಸುಲಭನಾ? ಅದೂ ಅಪ್‌ಲೋಡ್ ಮಾಡಿದ ಕೇವಲ ಐದೇ ದಿನದಲ್ಲಿ. ಹೌದು, ಕನ್ನಡದ ಸಿನಿಮಾ ಹಾಡೊಂದು ಇಂತಹ ಸಾಧನೆ ಮಾಡಿದೆ. ಕೋಮಲ್ ಕುಮಾರ್ ನಾಯಕರಾಗಿರುವ 'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್‌ಗೆ ಆಗ್ಬಿಟ್ಟೈತಿ...' ಎಂಬ ಹಾಡು ಹೀಗೆ ಗಲಭೆ ಎಬ್ಬಿಸುತ್ತಿದೆ.

ಕೆಲವು ಹಾಡುಗಳೇ ಹಾಗೆ. ಯಾವಾಗ, ಹೇಗೆ ಹಿಟ್ಟಾಗುತ್ತೆ ಅನ್ನೋದನ್ನು ಊಹಿಸುವುದೂ ಸಾಧ್ಯವಾಗೋದಿಲ್ಲ. ಹಿಟ್ಟಾದರೂ ಈ ಪರಿಯ ಹಿಟ್ ಯಾರೂ ನಿರೀಕ್ಷಿಸಿರೋದಿಲ್ಲ. ಅದೇ ಭಾವದಲ್ಲಿದೆ 'ಗೋವಿಂದಾಯ ನಮಃ' ಚಿತ್ರತಂಡ. ಕೊಂಚ ಡಿಫರೆಂಟ್ ಆಗಿರಲಿ ಅಂತ ಹಳೆಯ ಶೈಲಿಯಲ್ಲಿ ಹಾಡನ್ನು ಮಾಡಿರುವುದು ಹೌದಾದರೂ, ಹೀಗೆ ಕ್ರೇಜ್ ಎಬ್ಬಿಸುತ್ತದೆ ಅಂತ ಯಾರೂ ಅಂದುಕೊಂಡಿರಲಿಲ್ಲ.

'ಪ್ಯಾರ್‌ಗೆ ಆಗ್ಬಿಟ್ಟೈತಿ ನಮ್ದೂಕೆ ಜಾನ್‌ಗೆ ಹೋಗ್ಬಿಟ್ಟೈತಿ...' ಹಾಡು ಈ ಪರಿ ಹಿಟ್ಟಾಗಲು ಕಾರಣವೇನು? ಹಳೆಯ ಸಂಗೀತ, ಅದಕ್ಕೆ ತಕ್ಕಂತೆ ಉರ್ದು-ಕನ್ನಡ ಮಿಶ್ರಿತ ಸಾಹಿತ್ಯ, ಹಳೆಯ ಕಾಲಕ್ಕೆ ಹೊಂದಾಣಿಕೆಯಾಗುವ ಲುಕ್, ಹಾಡು ಹೇಳಿರುವ ಶೈಲಿ. ಈ ಎಲ್ಲವೂ ಸೇರಿಕೊಂಡು ವೀಕ್ಷಕರನ್ನು ಗಿಟ್ಟಿಸಿಕೊಳ್ಳುತ್ತಿದೆ.

ಈ ಹಾಡಿನ ಸಾಹಿತ್ಯ ಬರೆದಿರುವುದು ಚಿತ್ರದ ನಿರ್ದೇಶಕ ಪವನ್ ಒಡೆಯರ್. ಗುರುಕಿರಣ್ ನೀಡಿರುವ ಸಂಗೀತಕ್ಕೆ ದನಿಯಾಗಿರುವುದು ಚೇತನ್ ಮತ್ತು ಇಂದು ನಾಗರಾಜ್. ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆ ಕೇಳುತ್ತಿರುವ ಗುರುಕಿರಣ್ ಕಾಲುಗಳು ನೆಲದಲ್ಲಿಲ್ಲ. ಇಡೀ ಚಿತ್ರತಂಡವೇ ಫುಲ್ ಜೋಶ್‌ನಲ್ಲಿದೆ. ಇದನ್ನೇ ಚಿತ್ರದ ಯಶಸ್ಸಿನ ಮೊದಲ ಹೆಜ್ಜೆ ಅಂತ ನಿರ್ಮಾಪಕ ಸುರೇಶ್ ಪೂರ್ತಿಯಾಗಿ ನಂಬಿದ್ದಾರೆ.

ಈ ಹಾಡಿನಲ್ಲಿ ಕೋಮಲ್‌ಗೆ ನಾಯಕಿಯಾಗಿರೋದು ಯಾರು ಗೊತ್ತಾ? ಪಕ್ಕನೆ ನೋಡಿದರೆ ಬಾಲಿವುಡ್ ಸುಂದರಿಯಿರಬೇಕು ಅಂತ ಯಾರಾದರೂ ಹೇಳಬಹುದು. ಆದರೆ ಅದು ನಿಜವಲ್ಲ. ಜಾರ್ಜಿಯಾದ ಅನಾ ಎಂಬಾಕೆಯೇ ಇಲ್ಲಿ ಹೀರೋಯಿನ್.

ಇನ್ನೇನು ಬಿಡುಗಡೆಯಾಗಲಿರುವ 'ಗೋವಿಂದಾಯ ನಮಃ' ಚಿತ್ರದ ಹಾಡು ಇಷ್ಟೊಂದು ಹಿಟ್ಟಾಗಿರುವುದು ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕಾದ ಸಂಗತಿಯೇ ಸರಿ. ಇನ್ಯಾಕೆ ತಡ, ಆ ಹಾಡನ್ನು ನೋಡಿಲ್ಲ-ಕೇಳಿಲ್ಲವೆಂದಾದರೆ ಯೂಟ್ಯೂಬ್‌ನಲ್ಲಿ ನೀವೂ ಜಾಲಾಡಿ.

ವೆಬ್ದುನಿಯಾವನ್ನು ಓದಿ