ಕೋಟಿ ರೂ. ವೆಚ್ಚದಲ್ಲಿ ದೇವಭಾಷೆಯ 'ಪ್ರಬೋಧ ಚಂದ್ರೋದಯಂ'

PR
ಹನ್ನೊಂದನೆ ಶತಮಾನದ ನಾಟಕ ಕರ್ತೃ ಶ್ರೀಕೃಷ್ಣ ಯತಿಮಿಶ್ರ ರಚಿಸಿದ್ದ 'ಪ್ರಬೋಧ ಚಂದ್ರೋದಯಂ' ಎಂಬ ಸಂಸ್ಕೃತ ವೇದಾಂತ ನಾಟಕವನ್ನು ಆಧರಿಸಿ ಅದೇ ಹೆಸರಿನಲ್ಲಿ ಸಂಸ್ಕೃತ ಚಲನಚಿತ್ರವನ್ನು ನಿರ್ಮಿಸಲಾಗುತ್ತಿದೆ.

ನಟ, ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವಿ) ಈ ಸಂಸ್ಕೃತ ಚಿತ್ರದ ನಿರ್ದೇಶನ ಹೊಣೆ ವಹಿಸಿಕೊಂಡಿದ್ದಾರೆ. ಕೋಟಿ ರೂಪಾಯಿ ಬಜೆಟ್‌ನ ಚಿತ್ರಗಳು ಕನ್ನಡದಲ್ಲಿ ಸಾಲು ಸಾಲಾಗಿ ಬರುತ್ತಿರುವಾಗ ಸಂಸ್ಕೃತಿಭರಿತ ಪ್ರಾಚೀನ ದೇವಭಾಷೆಯೆನ್ನಲಾದ ಸಂಸ್ಕೃತದಲ್ಲಿ ಒಂದಾದರೂ ಕೋಟಿ ಬಜೆಟ್‌ನ ಚಿತ್ರ ಬರದಿದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದಕ್ಕೆ ಮುನ್ನವೇ ಶಿವಮೊಗ್ಗದ ಸನಾತನ ಧರ್ಮ ವರ್ಧಿನಿ ಟ್ರಸ್ಟ್ ಈ ಚಿತ್ರದ ನಿರ್ಮಾಣ ಸಾಹಸಕ್ಕೆ ಮುಂದಾಗಿದೆ.

ಸುಗುಣ ಮತ್ತು ದುರ್ಗುಣದ ನಡುವಿನ ಸಂಘರ್ಷವೇ ಕಥಾವಸ್ತು ಆಗಿರುವ ಈ ಚಿತ್ರದಲ್ಲಿ ದೊಡ್ಡಣ್ಣ, ಸಿಹಿಕಹಿ ಚಂದ್ರು, ಪವಿತ್ರಾ ಲೋಕೇಶ್ ಮಾತ್ರವಲ್ಲದೆ ರಾಜ್ಯದ ಅನೇಕ ಸಂಸ್ಕ್ಕತ ಮಹಾ ಪಾಠಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿವಮೊಗ್ಗದ ಹಲವರು ನಟಿಸುತ್ತಿದ್ದಾರೆ.

ನೂರು ನಿಮಿಷಗಳಾವಧಿಯ ಈ ಚಿತ್ರಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಅರ್ಚನಾ ಉಡುಪ ಮತ್ತಿತರರ ಹಿನ್ನೆಲೆ ಗಾಯನವಿದೆ. ಭಾಸ್ಕರ್ ಅವರ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ ನಿರ್ದೇಶನ, ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರ ಸಂಭಾಷಣೆ ಹಾಗೂ ಸುರೇಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಈಗಾಗಲೇ ಮುಹೂರ್ತ ಕಂಡ ಈ ಚಿತ್ರದ ಹೊರಾಂಗಣ ಚಿತ್ರೀಕರಣ ಏಪ್ರಿಲ್ ಕೊನೆಯ ವಾರದಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಬಳಿಯ ಕಲ್ಯಾಣಿ ಚೌಕದ ಶರಾವತಿ ಹಿನ್ನೀರಿನ ದಡದಲ್ಲಿ ನಡೆಯಲಿದೆ.

ಹೊರಾಂಗಣ ಚಿತ್ರೀಕರಣಕ್ಕಾಗಿ ಈ ಭಾಗದಲ್ಲಿ ಎಂಟನೇ ಶತಮಾನದ ವಾರಣಾಸಿ ಹಾಗೂ ಕಾಶಿ ಪಟ್ಟಣಗಳನ್ನು ನೆನಪಿಸುವ ಸೆಟ್ ಅನ್ನು ಅಂತಾರಾಷ್ಟ್ತ್ರೀಯ ಖ್ಯಾತಿಯ ನೀತೀಶ್ ರಾಯ್ ನೇತೃತ್ವದ ಕಲಾ ತಂಡ ನಿರ್ಮಿಸುತ್ತಿದೆ. ಸೆಟ್ ನಿರ್ಮಾಣ ಕಾರ್ಯ ಏಪ್ರಿಲ್ 25ಕ್ಕೆ ಪೂರ್ಣಗೊಳ್ಳಲಿದ್ದು ಮೇ ಒಂದರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ.

ಡಾ. ಸದಾನಂದ ಮಯ್ಯ, ಉದ್ಯಮಿ ದಯಾನಂದ ಪೈ, ಹೊಸಪೇಟೆ ಗೋಪಾಲ್ ಸಿಂಗ್, ಹಾಸನದ ಸಿ.ಎಸ್. ಕೃಷ್ಣಸ್ವಾಮಿ, ಡಾ.ಸಿ.ಎಸ್. ಜಗದೀಶ್ ಬಹಾಮ, ಅಮೆರಿಕದಲ್ಲಿನ ಗೋಪಾಲ ಅಯ್ಯಂಗಾರ್ ಮುಂತಾದವರು ಚಿತ್ರ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ್ದಾರೆ.

ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರಕ್ಕೆ ಇದುವರೆಗೆ 60 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹಿಸುವವರು ಒಂದು ರೂಪಾಯಿ ನೀಡಿ ಸಹಕರಿಸಬೇಕು ಎಂದು ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ವಿನಂತಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಸದಸ್ಯರು ದೇಣಿಗೆ ಸಂಗ್ರಹಿಸಿ ಟ್ರಸ್ಟ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಚಿತ್ರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಸಂಘ ಸಂಸ್ಥೆ, ಶಾಲೆಗಳು ಹಾಗೂ ದಾನಿಗಳಿಗೆ ಚಿತ್ರದ ಒಂದು ಡಿ.ವಿ.ಡಿ.ಉಚಿತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿವರಗಳಿಗೆ ಸಂಪರ್ಕ ವಿಳಾಸ:- ಅ.ನ.ವಿಜಯೇಂದ್ರ ರಾವ್, ಕಾರ್ಯದರ್ಶಿ, ಸನಾತನ ಧರ್ಮ ವರ್ಧಿನಿ ಟ್ರಸ್ಟ್, ಜೆ. ಸುಬ್ಬರಾವ್ ಭವನ, ಕೆ.ಆರ್.ಪುರ ರಸ್ತೆ, ಶಿವಮೊಗ್ಗ. ಫೋನ್: 94487 90127

ವೆಬ್ದುನಿಯಾವನ್ನು ಓದಿ