ಕೋ ಕೋ ಬಿಡುಗಡೆಯ ಮರುದಿನವೇ ಹಿಟ್!

PR


ಸಿನಿಮಾ ಗೆದ್ದಿದೆ ಅಂತ ಹೇಳಲು ಆ ಸಿನಿಮಾ ಬಿಡುಗಡೆಯಾಗಿ ಕನಿಷ್ಠ ಎಷ್ಟು ದಿನ ಆಗಿರಬೇಕು? ಕನಿಷ್ಠ 50 ದಿನವಾದರೂ ಓಡಬೇಕು ಎಂಬ ಕಾಲ ತುಂಬಾ ಹಳೆಯದು. ಈಗ ಬಿಡುಗಡೆಯಾದ ಮರುದಿನವೇ ಚಿತ್ರ ಗೆದ್ದಿದೆ ಅಂತ ಹೇಳಲಾಗುತ್ತಿದೆ. ಕೋ ಕೋ ಚಿತ್ರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ಚಿತ್ರ ಬಿಡುಗಡೆಯಾಗಿದ್ದು ಶುಕ್ರವಾರ. ಮರುದಿನ ಅಂದರೆ, ಶನಿವಾರವೇ ಚಿತ್ರ ಹಿಟ್ ಆಯ್ತಂತೆ. ಹಾಗಂತ ಚಿತ್ರತಂಡ ಜಾಹೀರಾತು ನೀಡಿದೆ!

ಒಂದೇ ದಿನದಲ್ಲಿ ಸಿನಿಮಾವೊಂದು ಹಿಟ್ ಆಗುತ್ತಾ? ಹೇಗೆ ನೋಡಿದರೂ ಅದು ಸಾಧ್ಯವಿಲ್ಲ. ಆದರೆ ತಾಜ್‌ಮಹಲ್, ಪ್ರೇಮ್ ಕಹಾನಿ, ಮೈಲಾರಿ ಖ್ಯಾತಿಯ ಆರ್. ಚಂದ್ರು, ತಮ್ಮ ನಿರ್ದೇಶನದ ಕೋ ಕೋ ಹಿಟ್ ಆಗಿದೆ ಎಂಬ ಜಾಹೀರಾತು ಬಿಡುಗಡೆಯ ಮರುದಿನವೇ ಪ್ರಕಟವಾಗಿದೆ. 'ಧನ್ಯವಾದಗಳು, ಕೋ ಕೋ ಚಿತ್ರವನ್ನು ಗೆಲ್ಲಿಸಿದ್ದಕ್ಕೆ' ಎಂದು ಅದರಲ್ಲಿ ಬರೆಯಲಾಗಿದೆ.

ಕೋ ಕೋ ಚಿತ್ರ ಒಂದು ಉದಾಹರಣೆ ಮಾತ್ರ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಇದೇ. ಚಿತ್ರದಲ್ಲಿ ಏನೂ ಇರದಿದ್ದರೂ, ಪ್ರೇಕ್ಷಕರು ಥಿಯೇಟರಿನತ್ತ ಸುಳಿಯದೇ ಇದ್ದರೂ ಸೂಪರ್ ಹಿಟ್ ಅಂತ ಸ್ವಯಂ ಘೋಷಣೆ ಮಾಮೂಲಿ. ಚಿತ್ರ ಬಿಡುಗಡೆಗೂ ಮೊದಲೇ ಶತ ದಿನೋತ್ಸವ ಆಚರಿಸಿದ ಭೂಪರು ನಮ್ಮಲ್ಲಿಲ್ಲವೇ?!

ಚಿತ್ರ ಹಿಟ್ ಆಗ ಬೇಕಾದರೆ ಹೀಗೆಲ್ಲ ಮಾಡಲೇಬೇಕಾ? ಹೀಗೆ ಮಾಡಿದರೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಾರಾ? ಗೊತ್ತಿಲ್ಲ. ಹಾಗಂತ ಗಿಮಿಕ್ಕುಗಳನ್ನು ಮಾಡುತ್ತಿರುವುದಂತೂ ಹೌದು. ಸಿನಿಮಾ ಬಿಡುಗಡೆಗೆ ಇನ್ನೇನು 15 ದಿನ ಇದೆ ಅನ್ನೋವಾಗ, ಯಾವುದಾದರೂ ಒಂದು ಪತ್ರಿಕೆಯನ್ನು ಗುತ್ತಿಗೆ ಪಡೆದುಕೊಂಡಂತೆ ಪ್ರತಿದಿನ ಸುದ್ದಿಯ ರೂಪದಲ್ಲಿ ಜಾಹೀರಾತು ಪ್ರಕಟಿಸುವುದು ಕೂಡ ಈಗೀಗ ಜಾಸ್ತಿಯಾಗುತ್ತಿದೆ.

ಅತ್ತ ನಾಯಕ ಶ್ರೀನಗರ ಕಿಟ್ಟಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಿಟ್ಟಿ ಗೆಳೆಯರ ಬಳಗ ಆಯೋಜಿಸಿದ್ದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದಾರೆ. ಚಿತ್ರ ಮೊದಲ ದಿನ ಯಶಸ್ವಿಯಾಗಿರುವ ಸಂತೋಷವನ್ನು ಹಂಚಿಕೊಳ್ಳಲು ಇದನ್ನು ಆಯೋಜಿಸಲಾಗಿತ್ತು. ಮಾಧ್ಯಮದವರಿಗೂ ಆಹ್ವಾನವಿತ್ತು.

ನಿರ್ದೇಶಕ ಆರ್. ಚಂದ್ರು, ಹರ್ಷಿಕಾ ಪೂಣಚ್ಚ ಮುಂತಾದವರು ಇದರಲ್ಲಿ ಪಾಲ್ಗೊಂಡಿದ್ದರು. ಕನ್ನಡ ಸಿನಿಮಾಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸಲಾಗುತ್ತಿಲ್ಲ ಎಂಬ ಕುರಿತು ಒಂದಷ್ಟು ಚರ್ಚೆಯೂ ನಡೆಯಿತು. ಕನ್ನಡ ಸಿನಿಮಾ ಪ್ರದರ್ಶಿಸದೇ ಇರುವುದಕ್ಕೆ ಬಳ್ಳಾರಿಯಲ್ಲಿ ಚಿತ್ರಮಂದಿರವೊಂದಕ್ಕೆ ನಡೆದಿರುವ ದಾಳಿಯನ್ನು ಚಂದ್ರು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ವೆಬ್ದುನಿಯಾವನ್ನು ಓದಿ