ಕ್ಷಮೆ ಕೇಳಿದ್ರು ಸೂರಪ್ಪ; ಕ್ಷಮಿಸಿದ್ರು ಮೀನಾ ತೂಗುದೀಪ

PR
ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರನ್ನು ನಿಂದಿಸಿ ಭಾರೀ ಆಕ್ರೋಶಕ್ಕೆ ತುತ್ತಾಗಿದ್ದ ನಿರ್ಮಾಪಕ ಸೂರಪ್ಪ ಬಾಬು ನಿರಾಳರಾಗಿದ್ದಾರೆ. ಅವರು ಕ್ಷಮೆ ಕೇಳಿದ್ದಾರೆ, ದರ್ಶನ್-ದಿನಕರ್ ತಾಯಿ ಮೀನಾ ತೂಗುದೀಪ ಕ್ಷಮಿಸಿದ್ದಾರೆ. ಅಲ್ಲಿಗೆ ಬೈಯ್ಗುಳ ಪ್ರಕರಣ ಸುಖಾಂತ್ಯ ಕಂಡಿದೆ.

ತೂಗುದೀಪ ಶ್ರೀನಿವಾಸ್ ವಿರುದ್ಧ ಮೂರು ವರ್ಷಗಳ ಹಿಂದೆ ಕುಡಿದ ಅಮಲಿನಲ್ಲಿ ಸೂರಪ್ಪ ಬಾಬು ಕೆಟ್ಟ ಪದಗಳನ್ನು ಬಳಸಿದ್ದರು. ಆ ವೀಡಿಯೋದ ತುಣುಕೊಂದು ಯೂಟ್ಯೂಬ್ ಸೇರಿ ಆವಾಂತರವಾಗಿತ್ತು. ದರ್ಶನ್ ಅಭಿಮಾನಿಗಳು ಸೂರಪ್ಪ ಬಾಬು ಅವರಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸುತ್ತಿದ್ದರು. ಅವರಿಗೆ ಕ್ಷಮೆ ಬೇಕೆಂದಾದರೆ, ಮೀನಾ ತೂಗುದೀಪ ಅವರ ಪದತಲಕ್ಕೆರಗಬೇಕು ಎಂದು ಆಗ್ರಹಿಸಿದ್ದರು.

ಆದರೆ ಈ ವಿವಾದ ಸೋಮವಾರ ಸಂಜೆ ಇತ್ಯರ್ಥವಾಗಿದೆ. ಮೀನಾ ತೂಗುದೀಪ್, ಪುತ್ರ ದಿನಕರ್ ತೂಗುದೀಪ್ ಅವರು ಸೂರಪ್ಪ ಬಾಬು ಅವರನ್ನು ಕ್ಷಮಿಸಿದ್ದಾರೆ. ಅಭಿಮಾನಿಗಳನ್ನೂ ಸಂತೈಸಿದ್ದಾರೆ.

ಕಾಲಿಗೆ ಬೇಕಾದ್ರೆ ಬೀಳ್ತೀನಿ...
ಕುಡಿಯಲು ಕೂತಾಗ ಇಂತಹ ಹದತಪ್ಪಿದ ಮಾತುಗಳು ಸಹಜ. ಆದರೆ ನನ್ನ ಉದ್ದೇಶ ಯಾರನ್ನೋ ನೋಯಿಸುವುದಾಗಲೀ, ಅವಮಾನಿಸುವುದಾಗಲೀ ಆಗಿರಲಿಲ್ಲ. ತೂಗುದೀಪ ಅವರ ಪತ್ನಿ ಮೀನಾ ನನಗೆ ತಾಯಿ ಇದ್ದಂತೆ. ನೀವು ಹೇಳಿದಂತೆ ಬೇಕಾದರೆ, ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಇನ್ನು ಯಾವತ್ತೂ ಹೀಗಾಗೋದಿಲ್ಲ. ನನ್ನಿಂದ ತಪ್ಪಾಗಿದೆ. ಇನ್ನು ತಿದ್ದಿಕೊಳ್ಳುತ್ತೇನೆ ಎಂದು ಸೂರಪ್ಪ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಹಿರಂಗ ಕ್ಷಮೆ ಯಾಚಿಸಿದರು.

ಅಭಿಮಾನಿಗಳು ಕ್ಷಮಿಸಿದರೆ ಮುಗೀತು..
ಇದರಿಂದ ನಮಗೆ ತುಂಬಾ ನೋವಾಗಿದೆ. ಅಭಿಮಾನಿಗಳೂ ಬೇಸರಗೊಂಡಿದ್ದಾರೆ. ಅವರು ನಿಮ್ಮನ್ನು ಕ್ಷಮಿಸಿದರೆ ನಾನೂ ಕ್ಷಮಿಸಿದಂತೆ. ಇನ್ನು ಮುಂದೆ ಯಾವತ್ತೂ ಹೀಗಾಗಬಾರದು. ಯಾವ ಕಲಾವಿದರಿಗೂ ಅವಮಾನವಾಗಬಾರದು ಎಂದು ಸೂರಪ್ಪ ಬಾಬುವನ್ನು ಕ್ಷಮಿಸಿದ ಮೀನಾ ತೂಗುದೀಪ ಹೇಳಿದರು.

ಇಷ್ಟಾದರೂ ಕೆಲವು ಅಭಿಮಾನಿಗಳು ಮಾತ್ರ ಸೂರಪ್ಪ ಬಾಬು ಅವರಿಗೆ ಕನ್ನಡ ಚಿತ್ರರಂಗದಿಂದ ನಿಷೇಧ ಹೇರಬೇಕು ಎಂಬ ಪಟ್ಟನ್ನು ಸಡಿಲಿಸಲಿಲ್ಲ. ಮೀನಾ ಕಾಲಿಗೆ ಬೀಳಲೇ ಬೇಕು ಎಂದು ಕೂಗುತ್ತಿದ್ದರು. ಆಗ ಮಧ್ಯ ಪ್ರವೇಶಿಸಿದ ದಿನಕರ್, ಇದು ಸರಿಯಲ್ಲ; ಸಿನಿಮಾದವರಿಗೆ ಸಿನಿಮಾವೇ ಎಲ್ಲವೂ ಆಗಿರುತ್ತದೆ. ಹಾಗಾಗಿ ನಿಷೇಧದ ಮಾತು ಬೇಡ ಎಂದು ಸಮಾಧಾನಪಡಿಸಿದರು.

ವೆಬ್ದುನಿಯಾವನ್ನು ಓದಿ