ಗಣೇಶ್ ಅದ್ಧೂರಿ ಮದುವೆ; ವೀಕಾದ ಜಗ್ಗೇಶ್ ಬಾಡಿ

SUJENDRA
ಮುಂಗಾರು ಮಳೆಯಂತಹ ಇನ್ನೊಂದು ಚಿತ್ರ ಬೇಕು ಅಂತ ತಪಸ್ಸು ಮಾಡಿದವರಂತೆ ಕಾದು ಕುಳಿತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮುಖದಲ್ಲಿ ನಿರ್ಮಲ ನಗು ಲಾಸ್ಯವಾಡುತ್ತಿದೆ. ಆದರೆ ತನಗೆ ಹೊಂದದ ಪಾತ್ರಕ್ಕೆ ಒಗ್ಗಿಕೊಳ್ಳಲು ಯತ್ನಿಸಿದ ನವರಸ ನಾಯಕ ಜಗ್ಗೇಶ್‌ರದ್ದು ಬಲವಂತದ ನಗು. ಇದು ಕಳೆದ ವಾರದ ಬಹುನಿರೀಕ್ಷಿತ ಎರಡು ಚಿತ್ರಗಳ ಬಾಕ್ಸಾಫೀಸ್ ರಿಪೋರ್ಟ್.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಗೆ ನೋಡಿದರೆ ಗಣೇಶ್ ನೆಟ್ಟಗೆ ಗೆಲುವಿನ ಮುಖ ನೋಡಿ ಹಲವು ವರ್ಷಗಳೇ ಕಳೆದಿವೆ. ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ ಮತ್ತು ಗಾಳಿಪಟ ಚಿತ್ರಗಳ ನಂತರ ಅವರು ಮಂಕಾಗಿದ್ದರು. ಅರಮನೆ, ಬೊಂಬಾಟ್, ಸಂಗಮ, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂಥರಾ, ಕೂಲ್, ಸರ್ಕಸ್ ಮಾಡಿದರೂ ಅವರು ಗೆದ್ದಿರಲಿಲ್ಲ. ಅವುಗಳಲ್ಲಿ ಹೆಚ್ಚಿನವು ಗೆಲ್ಲುವ ಚಿತ್ರಗಳೂ ಆಗಿರಲಿಲ್ಲ ಅನ್ನೋದು ಬೇರೆ ಮಾತು.

ಆದರೆ ಈ ಬಾರಿ ಸ್ವಮೇಕ್ 'ಮದುವೆ ಮನೆ'ಯಲ್ಲಿ ಅವರ ಗೆಲುವನ್ನು ಬಹುಶಃ ತಡೆಯುವುದು ಕಷ್ಟ. ಅಂತಹ ಮೋಡಿ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಮಾಡಿದ್ದಾರೆ. ಗಣೇಶ್‌ಗೆ ಸೂಕ್ತವಾದ ಪಾತ್ರವೊಂದನ್ನು ಸೃಷ್ಟಿಸಿ, ವಿಭಿನ್ನ ನಿರೂಪನೆಯೊಂದಿಗೆ 'ತಾಳಿ ಕಟ್ಟುವ ಶುಭ ವೇಳೆ'ಯಲ್ಲಿ ತೆರೆಗೆ ತಂದಿದ್ದಾರೆ.

ನಿರ್ಮಾಪಕ ರೆಹಮಾನ್ ಚಿತ್ರವನ್ನು ಬಿಡುಗಡೆ ಮಾಡುವುದು ಕಷ್ಟ ಅಂತ ಕೈ ಚೆಲ್ಲಿ ಕುಳಿತಿದ್ದಾಗ, ಕೆ. ಮಂಜು ನೀಡಿದ ಸಹಕಾರದ ಸಂದರ್ಭದಲ್ಲೇ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು. ಇದನ್ನು ಪ್ರೇಕ್ಷಕ ಮಹಾಶಯನೂ ಅಹುದಹುದು ಎಂದಿದ್ದಾನೆ. ಶುಕ್ರವಾರ, ಶನಿವಾರ, ಭಾನುವಾರಗಳ ಮೂರೂ ದಿನ ಚಿತ್ರಮಂದಿರಗಳಲ್ಲಿ 'ಮದುವೆ ಮನೆ'ಗೆ ಜನ ಸಾಲುಗಟ್ಟಿ ನಿಂತಿದ್ದಾರೆ. ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಗಣೇಶ್ ಅಂತೂ ಮತ್ತೆ ತನ್ನ ಹಿಂದಿನ ಚಾರ್ಮನ್ನು ಪಡೆದ ಸಂತಸದಲ್ಲಿದ್ದಾರೆ.

ಆದರೆ ಇದೇ ಮಾತನ್ನು ಜಗ್ಗೇಶ್ ರಿಮೇಕ್ 'ಬಾಡಿಗಾರ್ಡ್'ಗೆ ಹೇಳುವಂತಿಲ್ಲ. ಜಗ್ಗೇಶ್‌ರ ಇಮೇಜ್‌ಗೂ ಪಾತ್ರಕ್ಕೂ ಯಾವುದೇ ರೀತಿಯಿಂದ ತಾಳೆಯಾಗದೇ ಇರುವುದು ಅವರ ಅಭಿಮಾನಿಗಳಿಗೂ ಬೇಸರ ತರಿಸಿರಬೇಕು. ಚಿತ್ರಮಂದಿರಗಳಲ್ಲಿ ಭಾನುವಾರ ಜನಸಂದಣಿಯಿದ್ದರೂ, ಆರಂಭದ ಎರಡೂ ದಿನಗಳಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಚಿತ್ರವನ್ನು ನಿರ್ಮಿಸಿರುವ ಜಗ್ಗೇಶ್‌ಗೆ ಇದು ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.

ಇನ್ನು ಮದುವೆ ಮನೆ ಮತ್ತು ಬಾಡಿಗಾರ್ಡ್ ಚಿತ್ರಗಳಲ್ಲಿ ಕಂಡು ಬಂದಿರುವ ಹೋಲಿಕೆಗಳು ಮತ್ತು ಕಾಕತಾಳೀಯ ಅಂಶಗಳು. ಮದುವೆ ಮನೆಯಲ್ಲಿ ಶ್ರದ್ಧಾ ಆರ್ಯ ಹಾಗೂ ಬಾಡಿಗಾರ್ಡ್‌ನಲ್ಲಿ ಡೈಸಿ ಶಾ ನಾಯಕಿಯರು. ಇವರಿಬ್ಬರೂ ಮುಂಬೈ ಬೆಡಗಿಯರು. ಕನ್ನಡದ ಹುಡುಗಿ ಸ್ಫೂರ್ತಿ ಎರಡೂ ಚಿತ್ರಗಳಲ್ಲಿರುವುದು ಮತ್ತು ಎರಡರಲ್ಲೂ ಅವರು ಸಾಯುವುದು ಇನ್ನೊಂದು ವಿಶೇಷ. ಸುನಿಲ್ ಕುಮಾರ್ ಸಿಂಗ್ ಮತ್ತು ಟಿ.ಎ. ಆನಂದ್ ಇಬ್ಬರೂ ಇದೇ ಮೊದಲ ಬಾರಿ ಆಕ್ಷನ್-ಕಟ್ ಹೇಳಿದ್ದಾರೆ. ಒಂದು ಸ್ವಮೇಕ್, ಇನ್ನೊಂದು ರಿಮೇಕ್.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ