ಗಾಂಧಿನಗರದಲ್ಲಿ ಗನ್ ಹಿಡಿದು ಕೂತ ಹರೀಶ್ ರಾಜ್

MOKSHA
ಕೆಲ ಸಮಯದ ಹಿಂದೆ ಕಲಾಕಾರ್ ಎಂಬ ಚಿತ್ರ ಬಂದಿತ್ತು. ಬಹುಶಃ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವೂ ಕೇಳಿ ಬಂದಿತ್ತು. ಅಚ್ಚುಕಟ್ಟಾದ ಕಥೆ, ಅದಕ್ಕೆ ತಕ್ಕ ನಿಯಮಿತ ಚಿತ್ರಕಥೆ, ನವಿರಾದ ಸಂಭಾಷಣೆ, ಮಾತಿಗೆ ನಿಲುಕುವ ನಿರೂಪಣೆ, ಸಹಜ ನಟನೆ... ಎಲ್ಲವೂ ಚೆನ್ನಾಗಿತ್ತು. ಆದರೆ, ಸಿನಿಮಾ ಜನಕ್ಕೆ ತಲುಪಲೇ ಇಲ್ಲ. ಹಾಗಾಗಿ ನಿರ್ದೇಶಕ ಹರೀಶ್ ರಾಜ್ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ.

ಆ ಚಿತ್ರ ಯಾಕೆ ಸೋತಿತು ಎಂಬ ವಿಷಯದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡಿರುವ ಹರೀಶ್, ಈಗ 'ಗನ್' ಹಿಡಿದು ನಿಂತಿದ್ದಾರೆ. ನಿರ್ದೇಶನದ ಜವಾಬ್ದಾರಿಯ ಜತೆಗೆ ನಾಯಕನ ಸ್ಥಾನವನ್ನೂ ತುಂಬಿದ್ದಾರೆ. ವಸಂತ್ ನಗರ್ ನಿವಾಸಿಯಾಗಿರುವ ಹರೀಶ್‌ಗೆ ಎರಡನೇ ಚಿತ್ರ ನಿರ್ದೇಶಿಸುವಂತೆ ಬೆಂಬಲಿಸಿದ್ದು ಅದೇ ಏರಿಯಾದ ಕೆ. ಮುರಳಿಯವರಂತೆ. 'ನಿನ್ನ ಕಲಾಕಾರ್ ಚಿತ್ರ ನೋಡಿದ್ದೇನೆ. ಚೆನ್ನಾಗಿ ಮಾಡಿದ್ದೀರಿ. ನಿಮಗೆ ಉತ್ತಮ ಭವಿಷ್ಯ ಇದೆ' ಎಂದು ಹಿಂದೊಮ್ಮೆ ಬೆನ್ನುತಟ್ಟಿದ್ದ ಅದೇ ಮುರಳಿ, ಈಗ ಗನ್ ಚಿತ್ರದ ನಿರ್ಮಾಪಕ. ಹರೀಶ್ ರಾಜ್ ಜತೆ ಸೇರಿ ಗನ್ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

MOKSHA
ಅಬ್ಬೇಪಾರಿ ಹುಡುಗನೊಬ್ಬನ ಕೈಗೆ ಗನ್ ಸಿಕ್ಕಾಗ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಉಂಡಾಡಿಗುಂಡನ ಬದುಕು ಮೂರಾಬಟ್ಟೆಯಾಗುತ್ತದೆ. ಅದೇ ಗನ್ ಮುಂದೆ ಕ್ಲೈಮ್ಯಾಕ್ಸ್ ಮುನ್ನುಡಿ ಬರೆಯುತ್ತದೆ ಎನ್ನುತ್ತಾರೆ ಹರೀಶ್. ಚಿತ್ರಕ್ಕೆ ನಾಯಕಿಯಾಗಿ ಮಲ್ಲಿಕಾ ಕಪೂರ್ ಅವರನ್ನು ಮುಂಬಯಿಯಿಂದ ಕರೆಸಲಾಗಿದೆ. ಮಲ್ಲಿಕಾ ಕಪೂರ್ ನೆನಪಿರಲ್ ಪ್ರೇಮ್ ಜೊತೆ ಸವಿ ಸವಿ ನೆನಪು ಚಿತ್ರದಲ್ಲಿ ಹೆಜ್ಜೆ ಹಾಕಿದ್ದರು.

ಎಚ್.ಎಮ್. ರಾಮಚಂದ್ರ ಛಾಯಾಗ್ರಹಣವಿದ್ದು, ಬೆಂಗಳೂರು ಸುತ್ತಮುತ್ತ 35 ದಿನಗಳ ಚಿತ್ರೀಕರಣ. ಸಂಭಾಷಣೆಯಲ್ಲಿ ಸದಾ ಹೊಸತನ ತೋರುವ ಮಂಜು ಮಾಂಡವ್ಯ ಕಥೆ ವಿಸ್ತಾರ ಮಾಡಿ, ಡೈಲಾಗ್ ಬರೆದಿದ್ದಾರೆ. ರಚನಾ ಮೌರ್ಯ ಒಂದು ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ. ಕೇರಳ ಮೂಲದ ರೋನಿ ಸಂಗೀತವಿದೆ. ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜನೆ ಮಾಡಲಿದ್ದಾರೆ. ನಾಯಕನ ತಂದೆಯ ಪಾತ್ರವನ್ನು ಹಿರಿಯ ಪೋಷಕ ನಟ ಶಂಕರ್ ಭಟ್ ಮಾಡುತ್ತಿದ್ದಾರೆ. ಕಾಮಿಡಿಗೆ ಎಮ್.ಎಸ್. ಉಮೇಶ್ ಇದ್ದಾರೆ. ತನ್ನ ಕಷ್ಟದ ದಿನಗಳಲ್ಲಿ ಸಹಾಯ ಮಾಡಿ, ಚಿತ್ರೋದ್ಯಮದ ಹಾದಿ ತೋರಿ ತೋರಿದ ಸುಂದರಶ್ರೀ ಅವರಿಗೆ ವಿಶೇಷ ಪಾತ್ರ ಕೊಡುವ ಮೂಲಕ ಹರೀಶ್ ರಾಜ್ ಋಣ ಮುಕ್ತರಾಗಿದ್ದಾರೆ!

ವೆಬ್ದುನಿಯಾವನ್ನು ಓದಿ