ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದಾರಂತೆ ರಾಗಿಣಿ ಐಪಿಎಸ್..!

PR
ಜಿಮ್‌ಗೆ ಹೋಗೋದಿಲ್ಲಪ್ಪ, ಸಿಕ್ಸ್ ಪ್ಯಾಕಂತೂ ಮಾಡೋದೇ ಇಲ್ಲ ಅಂತ ಕೆಲವು ಸಮಯದ ಹಿಂದೆ ಹೇಳಿದ್ದ ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ಮಾತು ಮರೆತಿದ್ದಾರೆ. ಈಗ ಜಿಮ್‌ಗೆ ಹೋಗಿ ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದಾರಂತೆ. ಕಾರಣ, 'ರಾಗಿಣಿ ಐಪಿಎಸ್' ಚಿತ್ರಕ್ಕೆ ಬೇಕಾದ ಕಟ್ಟುಮಸ್ತು ದೇಹ ಹೊಂದುವುದು!

ಆನಂದ್ ಪಿ. ರಾಜು ನಿರ್ದೇಶನದ 'ರಾಗಿಣಿ ಐಪಿಎಸ್' ಚಿತ್ರ ಘೋಷಣೆಯಾಗಿ ನಾಲ್ಕೈದು ತಿಂಗಳುಗಳೇ ಕಳೆದಿವೆ. ಆದರೆ ಇನ್ನೂ ಚಿತ್ರ ಮುಗಿಯುತ್ತಿಲ್ಲ. ಒಂದಲ್ಲ ಒಂದು ಕಾರಣದಿಂದ ವಿಳಂಬವಾಗುತ್ತಿದೆ.

ಮೂಲಗಳ ಪ್ರಕಾರ, ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಕೆಲವು ಭಾಗಗಳನ್ನು ರಾಗಿಣಿ ಮುಗಿಸಿದ್ದಾರೆ. ಈ ನಡುವೆ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರಂತೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬೇಕಾದ ರೀತಿಯಲ್ಲಿ ದೇಹವನ್ನು ಒಗ್ಗಿಸಿಕೊಳ್ಳಬೇಕಿರುವುದರಿಂದ ದೈಹಿಕ ಕಸರತ್ತು ಅನಿವಾರ್ಯ. ಹಾಗಾಗಿ ಎಂದಿಗಿಂತ ಹೆಚ್ಚು ಸಮಯ ಜಿಮ್‌ನಲ್ಲೇ ಇರುತ್ತಾರೆ.

'ರಾಗಿಣಿ ಐಪಿಎಸ್' ಮುಗಿಯುತ್ತಿದ್ದಂತೆ ಕಿರಣ್ ಗೋವಿ ನಿರ್ದೇಶನದ 'ಒಮ್ಮೊಮ್ಮೆ' ಚಿತ್ರಕ್ಕೆ ರಾಗಿಣಿ ಹೊರಳಲಿದ್ದಾರೆ. ಇದು ಕೂಡ ಆಕ್ಷನ್ ಸಿನಿಮಾ ಎಂಬ ಮಾಹಿತಿಯಿದೆ.

ರಾಗಿಣಿ ನಾಯಕಿಯಾಗಿದ್ದ 'ಬಂಗಾರಿ' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಬಾಯ್ ಫ್ರೆಂಡ್ ಯೋಗೇಶ್ ನಾಯಕನಾಗಿದ್ದ ಈ ಚಿತ್ರಕ್ಕೆ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವ ಪ್ರತಿಕ್ರಿಯೆ ಸಿಕ್ಕಿಲ್ಲ. ಪ್ರೇಕ್ಷಕರು ಚಿತ್ರಮಂದಿರದತ್ತ ಬರಲೇ ಇಲ್ಲ. ಇದರಿಂದಾಗಿ ನಿಜ ಜೀವನದ ಹಿಟ್ ಜೋಡಿಗೆ ಸಿನಿಮಾದಲ್ಲಿ ಭವಿಷ್ಯವಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.

ಸದ್ಯಕ್ಕಂತೂ ರಾಗಿಣಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಐಂದ್ರಿತಾ ರೇ ಮತ್ತು ನಿಧಿ ಸುಬ್ಬಯ್ಯರನ್ನು ಟೀಕಿಸಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದವರು ಈ ಬಾರಿ ಯಾವುದೇ ಕಾಮೆಂಟ್ ಇದುವರೆಗೆ ಮಾಡಿಲ್ಲ. ವಿವಾದ ಬೇಡ, ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಪ್ರೋತ್ಸಾಹಿಸಿದರೆ ಸಾಕು ಎಂಬ ನಿರ್ಧಾರಕ್ಕೆ ರಾಗಿಣಿ ಬಂದಂತಿದೆ.

ವೆಬ್ದುನಿಯಾವನ್ನು ಓದಿ