ಜೆಡಿಎಸ್‌ನಿಂದ ಬಿಬಿಎಂಪಿ ಕಣಕ್ಕೆ ಬುಲೆಟ್ ಪ್ರಕಾಶ್!

EVENT
ಸಿನಿಮಾದಲ್ಲಿ ಹಾಸ್ಯವನ್ನಷ್ಟೇ ಮಾಡುತ್ತಿದ್ದ ಬುಲೆಟ್ ಪ್ರಕಾಶ್ ಕೊಂಚ ಸೀರಿಯಸ್ ಆಗಿರಲು ನಿರ್ಧರಿಸಿದ್ದಾರೆ. ನಕ್ಕು ನಕ್ಕು ಸುಸ್ತಾಗಿರುವವರನ್ನು ಆರೈಕೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಓಕೆ ಅಂತ ಹೇಳಿ ಮುಂದಕ್ಕೆ ತಳ್ಳಿರುವುದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಚಲನಚಿತ್ರಗಳಲ್ಲೇ ಆರಾಮಾಗಿದ್ದ ಬುಲೆಟ್‌ಗೆ ಇದ್ಯಾಕೆ ಬೇಕಿತ್ತು ಅಂತ ಕೇಳ್ತಿದ್ದೀರಾ? ಬಿಡಿ, ಅವರೀಗ ಕೇಳುವ ಸ್ಥಿತಿಯಲ್ಲಿಲ್ಲ. ಅಷ್ಟಕ್ಕೂ ಅವರೇನು ರಾಜಕೀಯಕ್ಕೆ ಇದೇ ಮೊದಲು ಬಂದಿರೋದಲ್ಲ. ಈ ಹಿಂದೆಯೇ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅನುಭವ ಹೊಂದಿದವರು. ಸೋತಿದ್ದರು ಅನ್ನೋದು ಅನುಭವದ ಪಟ್ಟಿಯಲ್ಲಿದೆ.

ಅಂದ ಹಾಗೆ ಅವರು ಜೆಡಿಎಸ್‌ನಿಂದ ಸ್ಪರ್ಧಿಸಲು ಹೊರಟಿರುವುದು ಕಾರ್ಪೊರೇಟರ್ ನಟರಾಜ್ ಹತ್ಯೆಯಿಂದ ಖಾಲಿಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿನಗರ ವಾರ್ಡಿನಿಂದ. ಈ ಸಂಬಂಧ ಕುಮಾರಸ್ವಾಮಿಯವರನ್ನು ಭೇಟಿಯಾಗಿ, ಗ್ರೀನ್ ಸಿಗ್ನಲ್ ಕೂಡ ಪಡೆದುಕೊಂಡಿದ್ದಾರೆ ಅಂತ ಕಾವೇರಿಪುರ ಕಾರ್ಪೊರೇಟರ್ ಆರ್. ಪ್ರಕಾಶ್ ಹೇಳಿದ್ದಾರೆ.

ಸದಾಶಿವನಗರದ ಸಿವಿ ರಾಮನ್ ರೋಡ್‌ನಲ್ಲಿ ಬುಲೆಟ್ ಪ್ರಕಾಶ್ ಅವರು ಬುಧವಾರ ಕುಮಾರಸ್ವಾಮಿಯವರನ್ನು ಕಂಡು ಸಮಾಲೋಚನೆ ನಡೆಸಿದರು. ಗಾಂಧಿನಗರ ವಾರ್ಡಿನಲ್ಲಿ ತೆರವಾಗಿರುವ ಕಾರ್ಪೊರೇಟರ್ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್‌ನಿಂದ ಟಿಕೆಟ್ ಕೊಡುವಂತೆ ಮನವಿ ಮಾಡಿಕೊಂಡರು. ಆಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಲಾಗಿದೆ.

ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬುಲೆಟ್ ಸೋಲಲು ಕಾರಣ, ಆಗ ಈಗಿನಷ್ಟು ಜನಪ್ರಿಯರಾಗಿರದೇ ಇದ್ದುದು. ಆದರೆ ಈಗ ಹಾಗಲ್ಲ. ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಗೊತ್ತು. ಎಲ್ಲರ ಸ್ನೇಹ ಸಂಪಾದಿಸಿದ್ದಾರೆ. ಹಾಗಾಗಿ ಗೆಲುವು ಕಷ್ಟವಲ್ಲ ಅನ್ನೋದು ಜೆಡಿಎಸ್ ನಾಯಕರ ಅಂಬೋಣ. ಇದಕ್ಕೆ ಬೆಂಬಲ ವ್ಯಕ್ತಪಡಿಸಿ, ಕುಮಾರಣ್ಣನಲ್ಲಿ ವಶೀಲಿಬಾಜಿ ಮಾಡಿದ್ದು ಚಿಕ್ಕಪೇಟೆಯ ಮಾಜಿ ಶಾಸಕ ಪಿ.ಸಿ. ಪ್ರಕಾಶ್.

ಜೆಡಿಎಸ್ ಮೂಲಗಳ ಪ್ರಕಾರ, ಗಾಂಧಿನಗರ ವಾರ್ಡ್ ಉಪ ಚುನಾವಣೆಗೆ ಬುಲೆಟ್ ಪ್ರಕಾಶ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಗಾಂಧಿನಗರ ನಿವಾಸಿ ದುನಿಯಾ ವಿಜಯ್‌ರಂತಹ ಜನಪ್ರಿಯ ತಾರೆಯೂ ಜತೆಗಿರುವುದರಿಂದ ಇಂತಹ ತೀರ್ಮಾನಕ್ಕೆ ಬರಲಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ