'ಜೋಗಯ್ಯ' ಫ್ಲಾಪ್ ಆದ್ರೂ ಶಿವಣ್ಣಂಗೆ ಪ್ರಶಸ್ತಿ?

SUJENDRA
'ಜೋಗಯ್ಯ' ಬಾಕ್ಸಾಫೀಸಿನಲ್ಲಿ ಅಂಗಾತನೆ ಮಗುಚಿ ಬಿದ್ದಿತ್ತು. ಸಾಕಷ್ಟು ಗಿಮಿಕ್ ಮಾಡಿದ್ದ ನಿರ್ದೇಶಕ ಪ್ರೇಮ್‌ಗೆ ಪ್ರೇಕ್ಷಕರು ಹಿಡಿಶಾಪವನ್ನೂ ಹಾಕಿದ್ರು. ಆದರೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಬಗ್ಗೆ ಯಾರೊಬ್ಬರೂ ಚಕಾರ ಎತ್ತಿರಲಿಲ್ಲ. ಅದೇ ಕಾರಣಕ್ಕೆ ಈಗ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಶಿವಣ್ಣರನ್ನು ಅರಸಿಕೊಂಡು ಬರಲಿದೆಯೇ?

ಇಂತಹ ಶಂಕೆಗಳು ಬಲವಾಗಲು ಕಾರಣ, ಶಿವಣ್ಣ ದುಬೈಗೆ ಹೊರಟಿರುವುದು. ಸಾಮಾನ್ಯವಾಗಿ ಪ್ರಶಸ್ತಿಗಳು ಯಾರಿಗೆ ಸಲ್ಲುತ್ತವೆ ಅನ್ನೋದನ್ನು ಆಯೋಜಕರು ಸಂಬಂಧಪಟ್ಟವರಿಗೆ ಮೊದಲೇ ತಿಳಿಸಿರುತ್ತಾರೆ. ಇದು ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಸಲುವಾಗಿ ಅನುಸರಿಸಲಾಗುವ ಸರಳ ವಿಧಾನ.

ಅದರಂತೆ ಜೂನ್ 21ರಂದು ದುಬೈಯಲ್ಲಿ ನಡೆಯುವ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (ಎಸ್ಐಐಎಂಎ) ಸಮಾರಂಭಕ್ಕೆ ಶಿವಣ್ಣ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಇದು ಖಚಿತವಾಗಿಲ್ಲ. ಮೂಲಗಳ ಮಾಹಿತಿಯನ್ನು ನಂಬುವುದಾದರೆ, ಶಿವಣ್ಣನಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಲ್ಲುತ್ತಿರುವುದು ಹೌದು.

ಶಿವಣ್ಣ ಜತೆ ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ದಿಗಂತ್ ಮುಂತಾದವರ ಹೆಸರುಗಳೂ ಪ್ರಶಸ್ತಿಗೆ ನಾಮಕರಣಗೊಂಡಿವೆ. ಇವರಲ್ಲಿ ನಿಜಕ್ಕೂ ಯಾರು ಪ್ರಶಸ್ತಿ ಬಾಚಿಕೊಳ್ಳುತ್ತಾರೆ ಅನ್ನೋದು ಜೂನ್ 21ರಂದು ಗೊತ್ತಾಗಲಿದೆ.

ಶಿವಣ್ಣ 100ನೇ ಚಿತ್ರ 'ಜೋಗಯ್ಯ'ದಲ್ಲಿ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಭಾರೀ ಪ್ರಚಾರವಿದ್ದರೂ, ಜೊಳ್ಳು ಕಥೆ ಮತ್ತು ನಿರ್ದೇಶನದಿಂದಾಗಿ ಚಿತ್ರ ಸೋತಿತ್ತು.

ವೆಬ್ದುನಿಯಾವನ್ನು ಓದಿ