ತಮಿಳು 'ಪೈಯಾ'ನನ್ನೂ ಬಿಡದ ಸ್ಯಾಂಡಲ್‌ವುಡ್: ಚಿರು ಹೀರೋ

PR
ತಮಿಳು, ತೆಲುಗಿನಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗಲಿ, ಅದನ್ನು ರಿಮೇಕ್ ಮಾಡಲೆಂದೇ ಕೆಲವು ನಿರ್ಮಾಪಕರು ಕಾದು ಕುಳಿತಿರುತ್ತಾರೆ. ಆ ಸಾಲಿಗೆ ಲೇಟೆಸ್ಟ್ ಸೇರ್ಪಡೆ 2010ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ 'ಪೈಯಾ'. ತಮಿಳಿನಲ್ಲಿ ಪೈಯಾ ಎಂದರೆ ಹುಡುಗ ಎಂದರ್ಥ. ಅದೀಗ 'ಅಜಿತ್' ಎಂಬ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗುತ್ತಿದೆ!

'ಪೈಯಾ' ಕನ್ನಡಕ್ಕೆ ರಿಮೇಕ್ ಆಗುತ್ತಿದೆ ಎಂಬುದೇನೂ ಖುಷಿಯ ವಿಚಾರವಲ್ಲ. ಅಷ್ಟಕ್ಕೂ ಆ ಚಿತ್ರ ಅಷ್ಟೊಂದು ಶ್ರೇಷ್ಠ ಚಿತ್ರವೂ ಅಲ್ಲ. ಸುಮಾರಾಗಿತ್ತು, ಬಾಕ್ಸಾಫೀಸಿನಲ್ಲೂ ಅದೇ ಮಟ್ಟದ ಯಶಸ್ಸು ಕಂಡಿತ್ತು. ಕಾರ್ತಿ ಮತ್ತು ತಮನ್ನಾ ನಾಯಕ-ನಾಯಕಿಯಾಗಿದ್ದ ಈ ಚಿತ್ರದಲ್ಲಿ ಬೆಂಗಳೂರಿನದ್ದೇ ಕಥೆಯಿದ್ದುದರಿಂದ ಹಲವರಿಗೆ ಇಷ್ಟವಾಗಿತ್ತು.

ಈ ಚಿತ್ರದ ರಿಮೇಕ್ ಹಕ್ಕುಗಳಿಗೆ 20 ಲಕ್ಷ ರೂ. ಕೊಟ್ಟು ಕನ್ನಡಕ್ಕೆ ತಂದವರು ಹೊಸ ನಿರ್ಮಾಪಕ ಪ್ರೇಮ್. ನಿರ್ದೇಶನದ ಹೊಣೆ 'ಮೊದಲಾಸಲ' ಖ್ಯಾತಿಯ ಪುರುಷೋತ್ತಮ್‌ಗೆ ವಹಿಸಲಾಗಿತ್ತು. ಆದರೆ ಅವರಿಗೆ ಈಗ ಕೊಕ್ ನೀಡಲಾಗಿದೆ. ಆ ಜಾಗಕ್ಕೆ 'ಪ್ರೇಮ್ ಅಡ್ಡ' ಖ್ಯಾತಿಯ ಮಹೇಶ್ ಬಾಬು ಬಂದಿದ್ದಾರೆ. ಸುಂದರನಾಥ ಸುವರ್ಣ ಕ್ಯಾಮರಾಮ್ಯಾನ್. ಯುವನ್ ಶಂಕರ್ ರಾಜಾ ನೀಡಿದ್ದ ಮೂಲ ಸಂಗೀತವನ್ನೇ ಇಲ್ಲೂ ಭಟ್ಟಿ ಇಳಿಸಲಾಗುತ್ತಿದೆ.

ಈ ಚಿತ್ರವನ್ನು ರಿಮೇಕ್ ಮಾಡುವ ಯೋಚನೆ ಹುಟ್ಟಿದಲ್ಲಿಂದ ಜತೆಯಾಗಿದ್ದ ಪುರುಷೋತ್ತಮ್‌ರನ್ನು ಬದಲಾಯಿಸಲು ಕಾರಣವೇನು ಅನ್ನೋದು ಗೊತ್ತಾಗಿಲ್ಲ. ಈ ನಡುವೆ ಅವರು ನಾಯಕಿಯ ಹುಡುಕಾಟದಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ತಂತ್ರಜ್ಞರ ತಂಡವನ್ನೇ ಬದಲಾಯಿಸಲಾಗಿದೆ.

ಇನ್ನು ಈ ಚಿತ್ರದಲ್ಲಿ ಫ್ಲಾಪ್ ಹೀರೋ ಚಿರಂಜೀವಿ ಸರ್ಜಾ ನಾಯಕ. 'ವರದನಾಯಕ' ಚಿತ್ರದ ಮೂಲಕ ಕಿಚ್ಚ ಸುದೀಪ್ ಪ್ರಭೆಯ ಅಡಿಯಲ್ಲಿ ಯಶಸ್ಸಿನ ನಿರೀಕ್ಷೆಯಲ್ಲಿರುವ ಚಿರು ಇತ್ತೀಚೆಗೆ ಒಪ್ಪಿಕೊಂಡಿರುವ ಎರಡನೇ ರಿಮೇಕ್ ಸಿನಿಮಾವಿದು. ಕೆಲ ದಿನಗಳ ಹಿಂದಷ್ಟೇ 'ಪಿಜ್ಜಾ' ಚಿತ್ರದ ಕನ್ನಡಕ್ಕೆ ಚಿರು ಹೆಸರು ಘೋಷಣೆಯಾಗಿತ್ತು.

'ಅಜಿತ್' ಚಿತ್ರಕ್ಕೆ ನಾಯಕಿ ಯಾರು ಅನ್ನೋದು ಇನ್ನೂ ಅಂತಿಮವಾಗಿಲ್ಲ. ಮಹೇಶ್ ಬಾಬು ನೇತೃತ್ವದ ತಂಡ ಹೊಸದಾಗಿ ಹುಡುಕಾಟ ಶುರು ಮಾಡಿದೆಯಂತೆ.

ಅಂದ ಹಾಗೆ ಇಲ್ಲಿ ಹೇಳಲೇಬೇಕಾದ ಇನ್ನೊಂದು ಸಂಗತಿಯಿದೆ. ಅದು 'ಪೈಯಾ' ಚಿತ್ರದಲ್ಲಿ ಕನ್ನಡಿಗರನ್ನು ನಿಂದಿಸಿದ್ದು. ಈಗ ಭಟ್ಟಿ ಇಳಿಸುತ್ತಿರುವ 'ಅಜಿತ್' ಚಿತ್ರದಲ್ಲಿ ನಮ್ಮವರು ಯಾರನ್ನು ನಿಂದಿಸುತ್ತಾರೋ?

ವೆಬ್ದುನಿಯಾವನ್ನು ಓದಿ