'ದಂಡುಪಾಳ್ಯ'ವೀಗ 'ಕರಿಮೇಡು': ತಮಿಳಿನಲ್ಲೂ ಪೂಜಾ ಗಾಂಧಿ!

ಸೋಮವಾರ, 13 ಮೇ 2013 (15:44 IST)
PR
ಕನ್ನಡದಲ್ಲಿ 'ದಂಡುಪಾಳ್ಯ' ಚಿತ್ರ ಬಿಡುಗಡೆಗೂ ಮೊದಲು, ನಂತರ ಎದುರಾದ ಅಡ್ಡಿ ಆತಂಕ ಅಷ್ಟಿಷ್ಟಲ್ಲ. ಸಾಕಷ್ಟು ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದವು. ಮೊದಲನೇ ಕಾರಣ, ಪೂಜಾ ಗಾಂಧಿ ಅರೆಬೆತ್ತಲಾಗಿದ್ದಾರೆ ಎನ್ನುವುದು. ಎರಡನೇ ಕಾರಣ, ಹಿಂಸೆಯನ್ನು ವೈಭವೀಕರಿಸಲಾಗುತ್ತದೆ ಎನ್ನುವುದು!

ವಾಸ್ತವದಲ್ಲಿ ಕನ್ನಡದಲ್ಲಿ 'ದಂಡುಪಾಳ್ಯ' ಚಿತ್ರ ಕುರಿತ ಪೋಸ್ಟರುಗಳು ಅಥವಾ ಟ್ರೇಲರುಗಳು ಅಷ್ಟಾಗಿ ಹಸಿಹಸಿ ಹಿಂಸೆ ಅಥವಾ ಅಶ್ಲೀಲತೆಯನ್ನು ಬಿಂಬಿಸಿರಲಿಲ್ಲ. ಆದರೆ ತೆಲುಗಿಗೆ 'ದಂಡುಪಾಳ್ಯಂ' ಹೆಸರಿನಲ್ಲಿ ಹೋದಾಗ ಗಡಿದಾಟಿದ ಖುಷಿಯಲ್ಲಿ ಒಂಚೂರು ಹೆಚ್ಚು ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಈಗ ತಮಿಳಿನ ಸರದಿ. ಅಲ್ಲಂತೂ ಎಗ್ಗಿಲ್ಲದೆ ಹಸಿಬಿಸಿ ದೃಶ್ಯಗಳನ್ನು ಪೋಸ್ಟರುಗಳಲ್ಲಿ ಹಾಕಲಾಗುತ್ತಿದೆ. ಆ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ.

ಅಂದ ಹಾಗೆ, ತಮಿಳಿನಲ್ಲಿ 'ದಂಡುಪಾಳ್ಯ' ಚಿತ್ರ ಡಬ್ ಆಗಿ 'ಕರಿಮೇಡು' ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಯಾವಾಗ ಬಿಡುಗಡೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕು. ಆದರೆ ಈ ಸಂಬಂಧ ಸಾಕಷ್ಟು ಪ್ರಚಾರ ನಡೆಯುತ್ತಿದೆ. ಚಿತ್ರದಲ್ಲಿ ಪೂಜಾ ಗಾಂಧಿಯ ಹಾಟ್ ಫೋಟೊಗಳನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ. ಇಂಟರ್ನೆಟ್ ಮಾಧ್ಯಮದಲ್ಲಿ ಫೋಟೊಗಳು ಹರಿದಾಡುತ್ತಿವೆ.

ಶ್ರೀನಿವಾಸ ರಾಜು ನಿರ್ದೇಶನದ 'ದಂಡುಪಾಳ್ಯ' ಚಿತ್ರವನ್ನು ನಿರ್ಮಿಸಿರುವುದು ಗಿರೀಶ್ ಮತ್ತು ಪ್ರಶಾಂತ್. ತಾರಾಗಣದಲ್ಲಿ ಪೂಜಾ ಗಾಂಧಿ, ಮಕರಂದ್ ದೇಶಪಾಂಡೆ, ರವಿಕಾಳೆ, ರವಿಶಂಕರ್, ಶ್ರೀನಿವಾಸ ಮೂರ್ತಿ, ರಘು ಮುಖರ್ಜಿ, ನಿಶಾ ಕೊಟ್ಟಾರಿ, ಸುಧಾರಾಣಿ, ಭವ್ಯ, ಹರೀಶ್ ರೈ, ಬುಲೆಟ್ ಪ್ರಕಾಶ್, ರಮೇಶ್ ಭಟ್, ದೊಡ್ಡಣ್ಣ ಮುಂತಾದವರಿದ್ದಾರೆ.

ಈ ಚಿತ್ರದಲ್ಲಿ ಪೂಜಾ ಗಾಂಧಿ ಘಾಟಿ ಹೆಂಗಸು ಲಕ್ಷ್ಮಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಟೀಕೆಗಳ ನಡುವೆಯೂ ಒಬ್ಬ ನಟಿಯಾಗಿ ಅವರ ಅಭಿನಯಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಅದರಲ್ಲೂ ಮಕರಂದ ದೇಶಪಾಂಡೆಯವರ ಪಾತ್ರ, ಅವರು ಹೊರಡಿಸುವ ಧ್ವನಿ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು.

ತೆಲುಗಿನಲ್ಲಿ 'ದಂಡುಪಾಳ್ಯಂ' ಹೆಸರಿಲ್ಲಿ ಹಿಟ್ ಆಗಿರುವ ಚಿತ್ರ ತಮಿಳಿನಲ್ಲಿ 'ಕರಿಮೇಡು'ವಾಗಿ ಯಾವ ಮಟ್ಟಿಗಿನ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ