ದರ್ಶನ್ ಸ್ಯಾಂಡಲ್‌ವುಡ್‌ನ ನಂ.1 ನಾಯಕ: ಕಿಚ್ಚ ಸುದೀಪ್

ಶುಕ್ರವಾರ, 31 ಮೇ 2013 (14:44 IST)
PR
PR
ವರನಟ ಡಾ. ರಾಜ್‌ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್‌ರನ್ನು ಕಳೆದುಕೊಂಡು ನಾವಿಕನಿಲ್ಲದ ನಾವೆಯಂತಾಗಿರುವ ಕನ್ನಡ ಚಿತ್ರರಂಗದ ನಂಬರ್ 1 ಹೀರೋ ಯಾರು ಎಂದು ಕೇಳಿದರೆ ಕೆಲವರ ಬಾಯಿಂದ ಹಲವು ಹೆಸರುಗಳು ಉದುರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಆ ಸ್ಥಾನಕ್ಕೆ ಕೇಳಿ ಬರುವ ಹೆಸರುಗಳು ಎರಡೇ ಎರಡು. ಒಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಇನ್ನೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್!

ಆದರೆ ಕಿಚ್ಚ ಸುದೀಪ್ ತನ್ನ ಆಪ್ತಮಿತ್ರ ದರ್ಶನ್ ನಂ.1 ಎಂಬ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಬುಲ್ ಬುಲ್ ಚಿತ್ರದ ಯಶಸ್ಸಿಗೆ ಟ್ವಿಟ್ಟರಿನಲ್ಲಿ ಅಭಿನಂದಿಸುತ್ತಾ ಸುದೀಪ್ ಹೀಗೆಂದಿದ್ದಾರೆ.

"Congrats to the team of Bulbul for a wonderful success. I had predicted that my buddy was knocking the door of being # 1, Well "D,, was I wrong''?!

ಬಾಕ್ಸಾಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ದರ್ಶನ್ ಚಿತ್ರಗಳ ಓಪನಿಂಗ್ ಅದ್ಭುತವಾಗಿರುತ್ತದೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ದರ್ಶನ್‌ರಷ್ಟು ಅಭಿಮಾನಿ ಬಳಗ, ಅದರಲ್ಲೂ ಮಾಸ್ ಪ್ರೇಕ್ಷಕರನ್ನು ಹೊಂದಿರುವ ಬೇರೆ ಯಾವ ನಟನೂ ಇದ್ದಂತಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗಷ್ಟೇ ಸ್ವತಃ ದರ್ಶನ್ ಮತ್ತು ಅವರ ಸಹೋದರ ದಿನಕರ್ ತೂಗುದೀಪ್ 'ಬುಲ್ ಬುಲ್' ಚಿತ್ರದ ಗಳಿಕೆಯ ಲೆಕ್ಕ ಕೊಟ್ಟಿದ್ದರು.

ಈ ನಡುವೆ ಕಿಚ್ಚ ಸುದೀಪ್ ಇಂತಹದ್ದೊಂದು ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.

ಒಂದು ಕಾಲದಲ್ಲಿ ಸ್ವತಃ ಸುದೀಪ್ ಮತ್ತು ದರ್ಶನ್ ತೀವ್ರ ಪೈಪೋಟಿ ನಡೆಸುತ್ತಿದ್ದವರು. ಇಬ್ಬರ ನಡುವೆ ಮುಸುಕಿನ ಗುದ್ದಾಟವೇ ನಡೆಯುತ್ತಿತ್ತು. ವಾಸ್ತವ ಮಾತುಗಳಿಗೆ ಸಿನಿಮಾಗಳಲ್ಲಿ ಉತ್ತರ ನೀಡುವ ಪ್ರಸಂಗಗಳೂ ನಡೆಯುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ತೀರಾ ಹತ್ತಿರವಾಗಿರುವ ಇಬ್ಬರು, ಆತ್ಮೀಯರಾಗಿ ಬೆಳೆದಿದ್ದಾರೆ. ಅದು ಎಲ್ಲಿಯವರೆಗೆ ಎಂದರೆ, ದರ್ಶನ್‌ರನ್ನು ಸುದೀಪ್ 'ಡಿ' ಎಂದೂ, ಸುದೀಪ್‌ರನ್ನು ದರ್ಶನ್ 'ಚಿನ್ನಾ' ಎಂದೂ ಕರೆಯುವಷ್ಟು!

ವೆಬ್ದುನಿಯಾವನ್ನು ಓದಿ