ನಕಲಿ ಆಡಿಯೋ ವಿರುದ್ಧ ಉಪೇಂದ್ರ 'ಸೂಪರ್' ಹೋರಾಟ

PR
ಆಡಿಯೋ ಪೈರಸಿ ವಿರುದ್ಧ ರಾಜ್ಯ ಸರಕಾರವು ಗೂಂಡಾ ಕಾಯ್ದೆಯನ್ನು ತಂದಿದ್ದರೂ, ಅದರ ಲಾಭವನ್ನು ಕನ್ನಡ ಚಿತ್ರರಂಗ ಪಡೆದುಕೊಂಡಿರುವುದು ಅಷ್ಟರಲ್ಲೇ ಇದೆ. ಆದರೆ ಉಪೇಂದ್ರ ನಟನೆ-ನಿರ್ದೇಶನದ 'ಸೂಪರ್' ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವ ಮಧು ಬಂಗಾರಪ್ಪ ಸುಮ್ಮನೆ ಕುಳಿತಿಲ್ಲ. ನಕಲಿಗಳ ವಿರುದ್ಧ ಹೋರಾಡಲು ತನ್ನದೇ ಸ್ವಂತ ಪಡೆಯನ್ನು ಕಟ್ಟಿಕೊಂಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದಕ್ಕೆ ಸಾಥ್ ನೀಡಿರುವುದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಇಬ್ಬರೂ ಸೇರಿಕೊಂಡು ಹತ್ತಕ್ಕೂ ಹೆಚ್ಚು ಮಂದಿಯ ಬ್ಲ್ಯಾಕ್‌ಕ್ಯಾಟ್ ಕಮಾಂಡೋ ರೀತಿಯ ಪಡೆಯನ್ನು ಕಟ್ಟಿದ್ದಾರೆ. 'ಸೂಪರ್' ಚಿತ್ರದ ನಕಲಿ ಸಿಡಿಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚುವುದೇ ಈ ಪಡೆಯ ಕೆಲಸ.

'ಸೂಪರ್' ಪಡೆಯ ಕಣ್ಣು ಕೆಲವು ಅಂತರ್ಜಾಲ ತಾಣಗಳ ಮೇಲೂ ಬಿದ್ದಿದೆ. kannadaxxxxxx, bangalorelxxxxxxx ಎಂಬ ಕೆಲವು ವೆಬ್‌ಸೈಟುಗಳು ಸೂಪರ್ ಚಿತ್ರದ ಹಾಡುಗಳನ್ನು, ಆಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ವಿರೋಧಿಸಿ ದೂರನ್ನೂ ನೀಡಲಾಗಿದೆ.

ಅಚ್ಚರಿಯ ವಿಚಾರವೆಂದರೆ ಪೊಲೀಸರಿಗೆ ದೂರು ನೀಡಿದ ಗಂಟೆಯೊಳಗೆ ಒಂದು ಸೈಟ್ ಸ್ಥಗಿತಗೊಂಡಿರುವುದು. ಆದರೆ ಮತ್ತೊಂದು ಸೈಟು ಯಥಾ ಪ್ರಕಾರವಾಗಿ MP3 ಡೌನ್‌ಲೋಡ್ ಮಾಡಲು ಅವಕಾಶ ನೀಡಿದೆ.

ಪಾಕಿಸ್ತಾನ ಮೂಲದ ವೆಬ್‌ಸೈಟಿನಲ್ಲೂ ಕನ್ನಡ ಚಿತ್ರಗಳ MP3 ಹಾಡುಗಳ ಡೌನ್‌ಲೋಡ್ ಸಾಧ್ಯವಿದೆ. ಹಲವು ಬ್ಲಾಗುಗಳಲ್ಲೂ ಹೊಚ್ಚ ಹೊಸ ಕನ್ನಡ ಚಿತ್ರಗಳ ಹಾಡುಗಳು ಲಭ್ಯವಿದೆ. ಇದಕ್ಕೆ ಸೂಪರ್ ಕೂಡ ಹೊರತಲ್ಲ. ಇವುಗಳ ವಿರುದ್ಧವೂ ರಾಕ್‌ಲೈನ್ ತಂಡವು ದೂರು ನೀಡಿದೆಯೇ ಎಂಬುದು ಖಚಿತಗೊಂಡಿಲ್ಲ.

ಮೂಲಗಳ ಪ್ರಕಾರ ಮಧು ಬಂಗಾರಪ್ಪನವರ 'ಆಕಾಶ್ ಆಡಿಯೋ' ಸಂಸ್ಥೆಯು ಸೂಪರ್ ಚಿತ್ರದ ಆಡಿಯೋ ಹಕ್ಕುಗಳನ್ನು 1.25 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಚಿತ್ರತಂಡದ ಪ್ರಕಾರ ಆಡಿಯೋ ಸೂಪರ್ ಹಿಟ್ ಆಗಿದೆ. ಆದರೆ ಪೈರಸಿಯೇ ದೊಡ್ಡ ಸಮಸ್ಯೆಯಾಗಿದೆ.

'ಆಡಿಯೋ ವಿತರಣೆಗೆ ನಾನು ಯಾರಿಗೂ ಅನುಮತಿ ನೀಡಿಲ್ಲ. ಈಗ ಪೈರಸಿ ನಡೆಯುತ್ತಿರುವುದು ಸಂಪೂರ್ಣವಾಗಿ ಅಕ್ರಮ. ನಾನು ಸಾಕಷ್ಟು ಮೊತ್ತ ನೀಡಿ ಆಡಿಯೋ ಹಕ್ಕನ್ನು ಖರೀದಿಸಿದ್ದೇನೆ. ಆದರೆ ಲೂಟಿಕೋರರು ಸಂಗೀತ ಕಳ್ಳತನ ಮಾಡುತ್ತಿದ್ದಾರೆ. ನಾನು ಆಡಿಯೋ ಮಾರಾಟದಲ್ಲಿ ವಿಫಲನಾದರೆ ನಿರ್ಮಾಪಕರಿಗೆ ಪೂರ್ತಿ ಹಣ ಕೊಡುವುದು ಸಾಧ್ಯವಾಗದು. ಇಂತಹ ನಕಲಿ ದಂಧೆಯನ್ನು ನಿಲ್ಲಿಸಬೇಕಾಗಿದೆ' ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ಪೈರಸಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇದನ್ನು ತಡೆಯಲು ಪೊಲೀಸರ ಸಹಕಾರದೊಂದಿಗೆ ನಮ್ಮದೇ ಆದ ಪಡೆಯ ಅಗತ್ಯವಿದೆ ಎಂದು ರಾಕ್‌ಲೈನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ