ನನ್ನ ಮಕ್ಕಳೇ ಮುಂದಿನ ಕ್ರೇಜಿ ಸ್ಟಾರ್‌ಗಳು: ರವಿಚಂದ್ರನ್

ಶುಕ್ರವಾರ, 31 ಮೇ 2013 (14:16 IST)
PR
PR
ಕ್ರೇಜಿ ಸ್ಟಾರ್ ಎಂಬ ಬಿರುದು ಬೇರೆ ಯಾರಿಗೂ ಹೊಂದುವುದಿಲ್ಲ. ಹೊಂದುವಷ್ಟು ಕ್ರೇಜಿಯಾಗಿ ಬೇರೆ ಯಾರೂ ಕಾಣಿಸುತ್ತಿಲ್ಲ. ಅದನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ರವಿಚಂದ್ರನ್ ಮುಂದುವರಿಸುತ್ತಿದ್ದಾರೆ!

ಪುರಾತನ ಕಾಲದಲ್ಲಿ ಆರಂಭವಾದ 'ಮಂಜಿನ ಹನಿ' ಅದೆಷ್ಟು ಬಾರಿ ರೀಶೂಟ್ ಆಗಿದೆಯೋ ಗೊತ್ತಿಲ್ಲ. ಇನ್ನೂ ಬಿಡುಗಡೆಯಾಗುತ್ತಿಲ್ಲ. ಅವರದ್ದೇ ನಿರ್ದೇಶನದ ರಿಮೇಕ್ ಚಿತ್ರ ಕ್ರೇಜಿ ಸ್ಟಾರ್ ಕೂಡ ಬಿಡುಗಡೆಗೆ ಕಾಯುತ್ತಿದೆ. ಈ ನಡುವೆ ಮಕ್ಕಳನ್ನು ಬೆಳ್ಳಿತೆರೆಗೆ ಪರಿಚಯಿಸುವ ಗುಂಗಿಗೆ ಬಿದ್ದಿದ್ದಾರೆ. ಇಬ್ಬರೂ ಕನ್ನಡ ಚಿತ್ರರಂಗದ ಸೂಪರ್ ಸ್ಟಾರುಗಳಾಗುತ್ತಾರೆ ಎಂದು ನಂಬಿದ್ದಾರೆ. ಅದಕ್ಕಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ವಿಭಿನ್ನ ಶೀರ್ಷಿಕೆಗಳು ತೇಲಿ ಬರುತ್ತಿವೆ.

ಮನೋರಂಜನ್ ಅಂದು:
ಇಬ್ಬರೂ ಮಕ್ಕಳನ್ನು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳನ್ನಾಗಿ ಮಾಡಲೆಂದು ಹೊರಟಿರುವ ರವಿಚಂದ್ರನ್ ಈಗ ಎರಡೆರಡು ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ. ಮೊದಲನೆಯದ್ದು 'ಅಂದು'. ಅದು ಮುಗಿದ ನಂತರ 'ಅವಳು ಆವರಿಸಿದಳು'. ಎರಡೂ ಚಿತ್ರಗಳಲ್ಲಿ ಹಿರಿಯ ಪುತ್ರ ಮನೋರಂಜನ್ ನಾಯಕ.

ಕಿರಿಯ ಪುತ್ರ ವಿಕ್ರಮ್ ಓದಿನಲ್ಲಿ ಮಗ್ನನಾಗಿರುವುದರಿಂದ ಆತನಿಗೆ ಎರಡನೇ ಕಂತಿನಲ್ಲಿ ಅವಕಾಶ ನೀಡಲು ರವಿ ನಿರ್ಧರಿಸಿದ್ದಾರೆ.

ಮನೋರಂಜನ್ ಹೊಸ ಚಿತ್ರಕ್ಕೆ ಜಯಮಾಲಾ ಪುತ್ರ ಸೌಂದರ್ಯಾ ನಾಯಕಿಯಾಗುವ ಸಾಧ್ಯತೆಗಳಿವೆ. ಈ ಸಂಬಂಧ ಮಾತುಕತೆ ನಡೆದಿದೆ. ಇದೊಂದು ರೀತಿಯ ಹೊಸ ಸಿನಿಮಾ. ಯಾವುದೇ ತಯಾರಿ ಇಲ್ಲದೆ ಚಿತ್ರೀಕರಣ. ಕಥೆ, ಚಿತ್ರಕಥೆ ಏನೂ ಇರುವುದಿಲ್ಲ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂಬಂತಿರುತ್ತದೆ ಶೂಟಿಂಗ್ ಎಂದು ರವಿಚಂದ್ರನ್ ವಿವರಣೆ ನೀಡಿದ್ದಾರೆ.

ಅಂದ ಹಾಗೆ, 'ಅಂದು' ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಅದೊಂದು ದಿನ ಬೆಳಗ್ಗೆ ಮಗನಿಗೆ ಮೇಕಪ್ ಹಾಕಲು ಹೇಳಿದ ರವಿ, ಏಳೆಂಟು ಜನರನ್ನು ಕರೆದುಕೊಂಡು ಹೋಗಿ ನೇರವಾಗಿ ಚಿತ್ರೀಕರಣ ಆರಂಭಿಸಿದರಂತೆ. ಯಾರಿಗೂ ಇದು ಏನೆಂದು ಗೊತ್ತಿರಲಿಲ್ಲ. ಸ್ವತಃ ರವಿಚಂದ್ರನ್ ಕೈಯಿಂದಲೇ ಕ್ಲಾಪ್ ಮಾಡಿ ಚಿತ್ರಕ್ಕೆ ಮುಹೂರ್ತ ಮಾಡಿದ್ದರು. ಇದೊಂದು ರೀತಿಯಲ್ಲಿ ಪ್ರಯೋಗಾತ್ಮಕ ಚಿತ್ರ ಎಂದು ಕ್ರೇಜಿ ಸ್ಟಾರ್ ಹೇಳಿಕೊಂಡಿದ್ದಾರೆ.

ನನಗೆ ವಯಸ್ಸಾಗಿದೆ. 50 ಕಳೆದಿದ್ದೇನೆ. ಇನ್ನು ನನ್ನ ಮಕ್ಕಳೇ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರುಗಳು. ಅವರನ್ನು ಯಶಸ್ವಿ ನಾಯಕರನ್ನಾಗಿ ಮಾಡುವುದೇ ನನ್ನ ಗುರಿ. ಅವರು ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಅದಕ್ಕೆ ಬೇಕಾದ ತರಬೇತಿಗಳನ್ನು ಕೊಡಿಸಿದ್ದೇನೆ ಎಂದಿದ್ದಾರೆ.

ಪಾರುಲ್ ಬಲೆಗೆ:
ವಯಸ್ಸಾಗಿದೆ ಎಂಬ ಕಾರಣಕ್ಕೆ ರವಿಚಂದ್ರನ್ ಜತೆ ನಟಿಸಲು ಪಾರುಲ್ ಯಾದವ್ ಹಿಂದೇಟು ಹಾಕಿದ್ದಾರೆ ಎಂದು ಕೆಲದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಕೊನೆಗೂ ಪಾರುಲ್ ಸೈ ಎಂದಿದ್ದಾರೆ. ರವಿಚಂದ್ರನ್‌ಗೆ ಅವರು ನಾಯಕಿಯಾಗಿ ನಟಿಸಲಿದ್ದಾರೆ. ಆ ಚಿತ್ರದ ಹೆಸರು 'ಅಪೂರ್ವ'. ಚಿತ್ರದಲ್ಲಿ ಪಾರುಲ್ 19ರ ಹುಡುಗಿಯ ಪಾತ್ರ ಮಾಡಿದರೆ, ರವಿಚಂದ್ರನ್ 60ರ ಅಜ್ಜ. ಇಬ್ಬರ ನಡುವಿನ ಸಂಬಂಧವೇ ಚಿತ್ರದ ಕಥೆ.

ವೆಬ್ದುನಿಯಾವನ್ನು ಓದಿ