ನಾಯಕ ಕೋಮಲ್‌ಗೆ ತುಂಡು ಬಟ್ಟೆಗಳ ಮೋಹವೇ?

WD
ಇಂತಹದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ, ಈ ಹಿಂದೆ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದಲ್ಲಿ ನಿಧಿ ಸುಬ್ಬಯ್ಯ ಇದೇ ವಿಚಾರದಲ್ಲಿ ತಗಾದೆ ಎತ್ತಿದ್ದು. ಅದು ಮುಗಿಯಿತೆನ್ನುವಾಗ, 'ಕರೋಡ್‌ಪತಿ' ಚಿತ್ರದ ನಾಯಕಿ ಪ್ರಿಯಾ ಸಿಡಿದೆದ್ದಿದ್ದಾರೆ. ತುಂಡು ಲಂಗ ಹಾಕೋದಿಲ್ಲ ಅಂತ ಸಿನಿಮಾಕ್ಕೆ ಗುಡ್ ಬೈ ಹೇಳಿದ್ದಾರೆ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೋಮಲ್ ನಾಯಕರಾಗಿರುವ ಚಿತ್ರಗಳಲ್ಲಿ ತುಂಡು ಬಟ್ಟೆ ಹಾಕೋದು ಕಡ್ಡಾಯನಾ? ಅವರ ಚಿತ್ರಗಳ ಹಾಡುಗಳು ಮತ್ತು ನಾಯಕಿಯರ ಕಂಪ್ಲೇಂಟುಗಳನ್ನು ನೋಡಿದಾಗ ಇಲ್ಲವೆಂದು ಹೇಳಲಾಗದು.

ಕೋಮಲ್ ನಾಯಕರಾಗಿರುವ 'ಕರೋಡ್‌ಪತಿ' ಚಿತ್ರದಲ್ಲಿ ಪ್ರಿಯಾ ಮತ್ತು ಮೀರಾ ನಾಯಕಿಯರು ಎಂದು ಮೊನ್ನೆ ತಾನೇ ನಿರ್ದೇಶಕ ಶ್ರೀ ರಮೇಶ್ ಪರಿಚಯಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಎಲ್ಲವೂ ಉಲ್ಟಾ ಆಗಿದೆ. ಪ್ರಿಯಾ ಜಾಗಕ್ಕೆ ಮುಂಬೈ ಹುಡುಗಿ ಜಾಸ್ಮಿನ್ ಬಾಸಿನ್ ಬಂದಿದ್ದಾರೆ.

ಕರೋಡ್‌ಪತಿ ಚಿತ್ರೀಕರಣದಲ್ಲಿ ಪ್ರಿಯಾ ಅವರಿಗೆ ಮಿನಿ ಸ್ಕರ್ಟುಗಳನ್ನು ಹಾಕಲು ಹೇಳಲಾಯ್ತಂತೆ. ಹಾಟ್ ಪ್ಯಾಂಟುಗಳನ್ನು ಹಾಕಿ ಅಂತ ಬಲವಂತ ಮಾಡಲಾಯ್ತಂತೆ. ಇದನ್ನು ಸಹಿಸದ ಪ್ರಿಯಾ ಬೆನ್ನು ಹಾಕಿ ಹೊರಟು ಹೋಗಿದ್ದಾರೆ. ನೆಟ್ಟಗೆ ಒಂದು ದಿನವೂ ಚಿತ್ರೀಕರಣ ನಡೆಸದೆ ವಾಪಸ್ಸಾಗಿದ್ದಾರೆ.

ನಿಮಗೆ ಯಾಕೆ ಮಿನಿಗಳ ಮೋಹ ಎಂದು ನಿರ್ದೇಶಕ ಶ್ರೀ ರಮೇಶ್‌ರನ್ನೇ ಕೇಳಿದರೆ, ಹಾಗೇನಿಲ್ಲ. ನಮ್ಮ ಕಥೆಗೆ ಅದು ಬೇಕಾಗಿತ್ತು. ಚಿತ್ರೀಕರಣಕ್ಕೆ ಮೊದಲೇ ಪಾತ್ರದ ಬಗ್ಗೆ ವಿವರಿಸಲಾಗಿತ್ತು. ಈ ಪಾತ್ರ ಆಧುನಿಕ ದಿರಿಸುಗಳನ್ನು ತೊಡಬೇಕಾಗುತ್ತದೆ ಎಂದು ಹೇಳಿದ್ದೆವು. ಅದಕ್ಕೆ ಪ್ರಿಯಾ ಒಪ್ಪಿಕೊಂಡಿದ್ದರು. ಆದರೆ ಸೆಟ್‌ಗೆ ಬಂದ ಮೇಲೆ ನಿರಾಕರಿಸಿದರು ಎಂದು ತನ್ನ ವಾದ ಮಂಡಿಸಿದರು.

ನಿರ್ದೇಶಕರ ಪ್ರಕಾರ, ಪ್ರಿಯಾಗೆ ತುಂಡು ಬಟ್ಟೆಗಳನ್ನು ಹಾಕಲು ಯಾವುದೇ ಆಕ್ಷೇಪಗಳಿರಲಿಲ್ಲ. ಇದ್ದದ್ದು ಆಕೆಯ ಹೆತ್ತವರಿಂದ. ಅವರು ಒಪ್ಪಿಗೆ ಸೂಚಿಸದೇ ಇದ್ದುದರಿಂದ ಪ್ರಿಯಾ ಚಿತ್ರದಿಂದ ಹಿಂದಕ್ಕೆ ಸರಿದರು. ಹಾಗಂತ ಸ್ವತಃ ಪ್ರಿಯಾ ಅವರೇ ನಿರ್ದೇಶಕ ರಮೇಶ್ ಬಳಿ ಹೇಳಿಕೊಂಡರಂತೆ.

ಎರಡೇ ದಿನದಲ್ಲಿ ಪ್ರಿಯಾ ಜಾಗಕ್ಕೆ ಹೊಸ ಹುಡುಗಿ ಬಂದಿದ್ದಾಳೆ. ತಮಿಳಿನ 'ವಾನಂ' ಖ್ಯಾತಿಯ ಜಾಸ್ಮಿನ್ ಬಾಸಿನ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಿರ್ದೇಶಕ ರಮೇಶ್ ಇಷ್ಟೆಲ್ಲ ಹೇಳಿದರೂ, ಪ್ರಿಯಾ ಒಪ್ಪಿಕೊಳ್ಳುತ್ತಿಲ್ಲ. ಇದು ಕೌಟುಂಬಿಕ ಪಾತ್ರ ಅಂತ ಹೇಳಿದ್ದ ನಿರ್ದೇಶಕರು, ಚಿತ್ರೀಕರಣ ಸಂದರ್ಭದಲ್ಲಿ ಬಣ್ಣ ಬದಲಾಯಿಸಿದರಂತೆ. ನನಗೆ ಸೆಕ್ಸಿ ಪಾತ್ರಗಳನ್ನು ಮಾಡಲು ಆಸಕ್ತಿಯಿಲ್ಲ. ಅಲ್ಲದೆ, ಈ ಚಿತ್ರದಲ್ಲಿ ನಾನೊಬ್ಬಳೇ ನಾಯಕಿ ಅಂತ ಆರಂಭದಲ್ಲಿ ಹೇಳಲಾಗಿತ್ತು. ಆದರೆ ಬೆಂಗಳೂರಿಗೆ ಬಂದು ನೋಡಿದರೆ, ಎಲ್ಲವೂ ಉಲ್ಟಾ-ಪಲ್ಟಾ ಎಂದು ಆರೋಪಿಸುತ್ತಾರೆ ಚೆನ್ನೈ ಹುಡುಗಿ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ತುಂಡು ಬಟ್ಟೆಗಳಿಂದಲೇ ಸುದ್ದಿಯಾಗುತ್ತಿರುವುದು ಕನ್ನಡಿಗರ ದುರದೃಷ್ಟವಲ್ಲವೇ?!

ವೆಬ್ದುನಿಯಾವನ್ನು ಓದಿ