ಪತ್ರಕರ್ತರ ಮುತ್ತಿಗೆ - ಬಳಲಿ ಬೆಂಡಾದ ಹರಿಪ್ರಿಯಾ

SUJENDRA
ಒಂದು ಹಂತದವರೆಗೆ ಸಿನಿಮಾ ಮಂದಿ ಪ್ರಚಾರಕ್ಕಾಗಿ ಏನನ್ನೂ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಪತ್ರಕರ್ತರನ್ನು ಕಂಡಲ್ಲೆಲ್ಲ ಮಾತನಾಡಿಸಿ, ಕ್ಯಾಮರಾ ಎದುರು ಸಿಕ್ಕಾಗಲೆಲ್ಲ ಹಲ್ಕಿರಿಯುತ್ತಾರೆ. ಆದರೆ ತಮ್ಮ ವೈಯಕ್ತಿಕ ಜೀವನವೂ ಬಟಾ ಬಯಲಾಗುತ್ತಿದೆ ಅನ್ನೋವಾಗ ಎಲ್ಲಿಂದಲೋ ಕೋಪ ಬಂದು ಬಿಡುತ್ತದೆ. ಈಗ ಕನ್ನಡದ ಹುಡುಗಿ ಹರಿಪ್ರಿಯಾಗೂ ಆಗಿರುವುದು ಇದೇ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹರಿಪ್ರಿಯಾ ಇನ್ನೂ ಕನ್ನಡ ಚಿತ್ರರಂಗದ ಉದ್ದಗಲವನ್ನು ಅಂದಾಜಿಸಲು ತಿಣುಕಾಡುತ್ತಿರುವ ನಟಿ. ಏಳೆಂಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರೂ, ನಿರ್ಮಾಪಕರು ಅಥವಾ ನಿರ್ದೇಶಕರು ಇನ್ನೂ ಈಕೆಯನ್ನು ಹೀರೋಯಿನ್ ಅಂತ ಕರೆಯದ ಸ್ಥಿತಿ. ಹೀಗಿದ್ದಾಕೆಗೆ ಮಾಧ್ಯಮಗಳೆಂದರೆ ಇಷ್ಟವಾಗುವ ಕ್ಷಣಗಳಿದ್ದವು. ತನ್ನ ಹಿಂದೆ ಪತ್ರಕರ್ತರ ದಂಡಿರಬೇಕು, ಕ್ಯಾಮರಾ ಕಣ್ಣುಗಳು ಮುಖದ ತುಂಬಾ ಬೆಳಕು ಚೆಲ್ಲಬೇಕು ಅಂತ ನಿರೀಕ್ಷಿಸುವ ದಿನಗಳಿದ್ದವು.

ಆದರೆ ಹರಿಪ್ರಿಯಾ ಯಾವತ್ತು ಆಂಧ್ರ-ತಮಿಳುನಾಡು-ಕೇರಳದತ್ತ ಹೊರಟರೋ, ಎಲ್ಲವೂ ಬದಲಾಗಿತ್ತು. ಕರ್ನಾಟಕ ಮಾತ್ರ ಯಾಕೆ? ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಈಸಿ ಜಯಿಸುತ್ತೇನೆ ಎಂಬ ಹುಂಬತನದ ಪರಿಣಾಮವೋ ಏನೋ? ತೆಲುಗಿನ 'ಪಿಲ್ಲಾ ಜಮೀನ್ದಾರ್' ಹಿಟ್ ಆಗುತ್ತಿದ್ದಂತೆ ಹರಿಪ್ರಿಯಾ ಎಂಬ ಹೆಸರಿಗೆ ಭಾರೀ ಬೇಡಿಕೆ ಕುದುರುತ್ತಿದೆ. ನಿರ್ಮಾಪಕ-ನಿರ್ದೇಶಕರು ತಮ್ಮ ಚಿತ್ರಗಳ ಸಂಭಾವ್ಯ ನಾಯಕಿಯರ ಪಟ್ಟಿಗೆ ಈಕೆಯ ಹೆಸರನ್ನೂ ಸೇರಿಸಿದ್ದಾರೆ.

ಈ ನಡುವೆ ತನ್ನ ಕುಟುಂಬದ ಜತೆ ತಿರುಪತಿಗೆ ತೆರಳಿದ್ದ ಹರಿಪ್ರಿಯಾರಿಗೆ ತೆಲುಗು ಪತ್ರಕರ್ತರು ಮುತ್ತಿಗೆ ಹಾಕಿದ್ದಾರೆ. ಅದು-ಇದು ಅಂತ ಹಲವು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಟಿವಿ ಚಾನೆಲ್ಲುಗಳ ಕ್ಯಾಮರಾ ಕಣ್ಣುಗಳು ಅತ್ತಿಂದಿತ್ತ ಇತ್ತಿಂದತ್ತ ಹರಿಪ್ರಿಯಾರನ್ನು ಸೆರೆ ಹಿಡಿದಿವೆ. ಅಷ್ಟರಲ್ಲಿ ಅಭಿಮಾನಿಗಳೂ ಸುತ್ತುವರಿದಿದ್ದಾರೆ.

ಹರಿಪ್ರಿಯಾ ಬೆಂಗಳೂರಿನಿಂದ ತಿರುಪತಿ ತಲುಪುವ ಹೊತ್ತಿಗೆ ಅಲ್ಲಿ ಪತ್ರಕರ್ತರು ಹೇಗೋ ಸುಳಿವು ಪಡೆದು ಜಮಾಯಿಸಿದ್ದಾರೆಂದರೆ ತಮಾಷೆಯೇ? ಆದರೆ ಹರಿಪ್ರಿಯಾ ಕಣ್ಣು ಕೆಂಪಗಾಗಲು ಇಷ್ಟೇ ಸಾಕಾಗಿತ್ತು. ಮುನಿದು ಮುಳ್ಳಾದಾಕೆ ಒಂದೂ ಮಾತನ್ನಾಡದೆ ಸೀದಾ ಬಿರಬಿರನೆ ಹೊರಟು ಹೋದರು.

ನಂತರ ತನ್ನ ಆಪ್ತರಲ್ಲಿ ತೆಲುಗು ಪತ್ರಕರ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಂತೆ. ನನಗೊಂದು ಖಾಸಗಿ ಬದುಕೇ ಇಲ್ಲವೇ? ಯಾಕೆ ಮಾಧ್ಯಮಗಳು ಈ ರೀತಿಯಾಗಿ ವರ್ತಿಸುತ್ತಿವೆ? ಕನಿಷ್ಠ ತೀರ್ಥಕ್ಷೇತ್ರಗಳಲ್ಲಾದರೂ ಸುಮ್ಮನಿರಬಾರದೇ ಅಂತ ಹೇಳಿಕೊಂಡರಂತೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ