'ಪ್ಯಾರ್ಗೆ ಆಗ್ಬಿಟ್ಟೈತೆ'ಗೆ ಜಿಂಕೆ ಮರಿ ರೇಖಾ ಕೋಪ

SUJENDRA
ಈ ಜಿಂಕೆ ಮರಿ ಎಲ್ಲಿ ಹೋಯ್ತಪ್ಪಾ ಅಂತ ಹುಡುಕಿ ಸುಸ್ತಾದವರಿಗೆ ಗುಡ್ ನ್ಯೂಸ್ ಬಂದಿದೆ. ಆಕೆ ಮತ್ತೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬೆಂಗಳೂರಿನಿಂದ ಮರೆಯಾಗಿ ಕಷ್ಟ-ನಷ್ಟ ಮಾಡಿಕೊಂಡಿದ್ದಾರೆ. ಕಾರಣ, ಪ್ರಚಾರಕ್ಕೆ ಬರದೇ ಇರೋದು!

ಕಾಮಿಡಿ ಹೀರೋ ಕೋಮಲ್ ನಾಯಕರಾಗಿರುವ 'ಗೋವಿಂದಾಯ ನಮಃ' ಚಿತ್ರದಲ್ಲಿ ನಮ್ಮ ರೇಖಾನೂ ಒಬ್ಬ ನಾಯಕಿ. ಆದರೆ ಆರಂಭದಿಂದಲೂ ಚಿತ್ರದಲ್ಲಿ ಪಾರುಲ್ ಯಾದವ್ ಮತ್ತು ಅನ್ನಾ ಜಾರ್ಜಿಯಾರೇ ಎದ್ದು ಕಾಣುತ್ತಿದ್ದಾರೆ. 'ಪ್ಯಾರ್ಗೆ ಆಗ್ಬಿಟ್ಟೈತೆ' ಹಾಡು ಹಿಟ್ಟಾದ ನಂತರವಂತೂ ರೇಖಾ ಆ ಚಿತ್ರದಲ್ಲಿದ್ದಾರೆ ಅನ್ನೋದನ್ನೇ ಎಲ್ಲರೂ ಮರೆತು ಬಿಟ್ಟಿದ್ದರು.

ರೇಖಾ ಗರಂ ಆಗೋದಿಕ್ಕೆ ಇಷ್ಟೇ ಸಾಕಾಗಿದೆ. 'ಗೋವಿಂದಾಯ ನಮಃ' ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕೆ.ಎ. ಸುರೇಶ್ ಸೇರಿದಂತೆ ಇಡೀ ಟೀಮ್ ಮೇಲೆ ಮುಗಿ ಬಿದ್ದಿದ್ದಾರೆ. ಅಲ್ಲಿ-ಇಲ್ಲಿ ಹೋದಲ್ಲೆಲ್ಲ ಏನೇನೋ ಹೇಳಿಕೊಂಡು ಬರುತ್ತಿದ್ದಾರಂತೆ. ಅದರಲ್ಲೂ ಪಾರುಲ್ ಯಾದವ್‌ಳನ್ನು ನಾಯಕಿ ಎಂದು ಬಿಂಬಿಸುತ್ತಿರುವುದು ರೇಖಾಗೆ ಒಂಚೂರೂ ಇಷ್ಟವಾಗಿಲ್ವಂತೆ.

ಚಿತ್ರದ ಪ್ರಚಾರಕ್ಕೂ ನನ್ನನ್ನು ಕರೆದಿಲ್ಲ. ಎಲ್ಲಾ ಕಡೆ ನನ್ನನ್ನು ನಿರ್ಲಕ್ಷಿಸಲಾಗಿದೆ. ಟಿವಿಗಳಲ್ಲಿ ಬರೋ ಪ್ರೋಮೋಗಳಲ್ಲಂತೂ ನನ್ನ ಕ್ಲಿಪ್ ಬಿಡಿ, ಹೆಸರೇ ಇಲ್ಲ. ಪತ್ರಿಕೆಗಳಲ್ಲಿ ಬರುತ್ತಿರುವ ಜಾಹೀರಾತುಗಳಲ್ಲಿ ನಾನು ನಟಿಸಿರುವ ಸುಳಿವೇ ಇಲ್ಲ ಎಂದೆಲ್ಲ ತಕರಾರು ತೆಗೆದಿದ್ದಾರಂತೆ. ಇದೇ ಕಾರಣದಿಂದ ಇತ್ತೀಚೆಗಷ್ಟೇ ನಡೆದ ಆಡಿಯೋ ಬಿಡುಗಡೆ ಸಮಾರಂಭಕ್ಕೂ ರೇಖಾ ಬಂದಿಲ್ವಂತೆ.

ಇದು ನಿಜಾನಾ ಅಂತ ರೇಖಾರನ್ನೇ ಕೇಳಿದ್ರೆ, ಎಲ್ಲಾ ಸುಳ್ಳು ಸುದ್ದಿರೀ.. ಚಿತ್ರಕ್ಕೆ ಪ್ರಚಾರ ಸಿಗ್ಲಿ ಅಂತ ನಿರ್ಮಾಪಕ-ನಿರ್ದೇಶಕರು ಹೀಗೆ ಪ್ಲಾನ್ ಮಾಡಿದ್ದಾರೆ. ನನ್ನ ಹೆಸರಿನಿಂದ ಅವರಿಗೆ ಲಾಭ ಆಗೋದಿದ್ರೆ ನನ್ನಿಂದ ಯಾವುದೇ ಅಭ್ಯಂತರವಿಲ್ಲ. ಹೇಗೆ ಬೇಕಾದ್ರೂ ಹೇಳಿಕೊಳ್ಳಲಿ ಅಂತ ಕಿಡಿ ಕಾರಿದ್ರು.

ನಂತರ ಕೂಲಾದ ರೇಖಾ, ನಡೆದಿರುವ ಸಂಗತಿಯನ್ನೂ ವಿವರಿಸಿದ್ದಾರೆ. ಬೆಂಗಳೂರು ಬಿಟ್ಟು ಪ್ರಸಕ್ತ ಮುಂಬೈ ನಿವಾಸಿಯಾಗಿರುವ ಅವರಿಗೆ ಚಿತ್ರದ ಪ್ರಚಾರಕ್ಕೆಂದು ಬರೋದು ಸಾಧ್ಯವಾಗ್ಲಿಲ್ವಂತೆ. ಕಾರಣ, ಇದ್ದಕ್ಕಿದ್ದಂತೆ ಚಿತ್ರತಂಡ ಅವರನ್ನು ಕರೆದಿರುವುದು. ಪ್ರೋಮೋ ಶೂಟಿಂಗ್‌ಗೆ ಅಂತ ತರಾತುರಿಯಲ್ಲಿ ಕರೆದಾಗ ಬರಲಾಗಲಿಲ್ಲವಂತೆ.

ಪಾರುಲ್ ಒಬ್ಬಳೇ ನಾಯಕಿ ಅಂತ ಬಿಂಬಿಸಲಾಗ್ತಿರೋದು ರೇಖಾಗೆ ಅಸಮಾಧಾನ ತಂದಿದೆ ಅನ್ನೋದನ್ನು ನಿರ್ಮಾಪಕ ಸುರೇಶ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಅದು ಆಕೆಯದೇ ತಪ್ಪು ಅನ್ನೋದು ಅವರ ಒಟ್ಟು ಮಾತು. ಪ್ರಚಾರಕ್ಕೆಂದು ಕರೆದಾಗ ಆಕೆ ಬಂದಿಲ್ಲ. ಅಲ್ಲದೆ, ಆಕೆ ತನ್ನ ಮೊಬೈಲ್ ನಂಬರ್ ಕೂಡ ಬದಲಾಯಿಸಿದ್ದಾಳೆ. ಡಿಸೆಂಬರ್ ನಂತರ ಆಕೆಯ ಜತೆ ಮಾತಾಡೇ ಇಲ್ಲ. ನೋಡೋಣ, ಮುಂದಿನ ಹಂತದ ಪ್ರಚಾರಕ್ಕಾದರೂ ಬರಬಹುದು ಅನ್ನುತ್ತಾರೆ.

ವೆಬ್ದುನಿಯಾವನ್ನು ಓದಿ