ಪ್ರಿಯಾಮಣಿ ಎಲ್ಲೂ ಬೇಡವೆಂದಾಗ ಕನ್ನಡವೇ ನಿತ್ಯ!

SUJENDRA
ಬೆಂಗಳೂರಿನಲ್ಲೇ ಬೆಳೆದರೂ ಕನ್ನಡ ಚಿತ್ರಗಳಲ್ಲಿ ನಟಿಸಲು ಆಹ್ವಾನ ನೀಡಿದಾಗ, ಇನ್ನೂ ಕಾಲ ಬಂದಿಲ್ಲ ಅಂತ ಪ್ರಿಯಾಮಣಿ ಹೇಳುವ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಪರಭಾಷಿಗರು ಪ್ರಿಯಾಮಣಿಯನ್ನು ಮರೆತಿದ್ದಾರೆ. ಈಗ ಪ್ರಿಯಾಮಣಿಯದ್ದು ಏನಿದ್ದರೂ ಕನ್ನಡವೇ ನಿತ್ಯ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ಪ್ರಿಯಾಮಣಿ ಮಾತ್ರ ಈ ಆರೋಪವನ್ನು ಒಪ್ಪಿಕೊಳ್ಳುವುದಿಲ್ಲ. ಕನ್ನಡದಲ್ಲಿ ನಟಿಸಲು ತಾನು ಹಿಂದೆ ಮುಂದೆ ನೋಡಿದ್ದೇನೆ ಎಂಬ ಆರೋಪಗಳು ನಿಜವಲ್ಲ ಅಂತ ವಾದಿಸುತ್ತಾರೆ.

ತಮಿಳಿನ 'ಪರುತ್ತಿ ವೀರನ್'ನ ನಟನೆಗಾಗಿ ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಂತರವಂತೂ ಅವರನ್ನು ಹಿಡಿಯುವವರೇ ಇರಲಿಲ್ಲ. ಬೆಂಗಳೂರಿನಲ್ಲೇ ಮನೆ ಮಾಡಿಕೊಂಡಿದ್ದರೂ, ಕನ್ನಡ ಚಿತ್ರಗಳಿಗೆ ತನ್ನ ಕಾಲ್‌ಶೀಟಿನಲ್ಲಿ ಜಾಗವಿಲ್ಲ ಎಂದು ನಿರ್ಧರಿಸಿದ್ದರು. ಅದು ಬದಲಾಗಿದ್ದು, 2009ರಲ್ಲಿ. ಪುನೀತ್ ರಾಜ್‌ಕುಮಾರ್ ನಾಯಕರಾಗಿದ್ದ ರಾಮ್ ಚಿತ್ರದಲ್ಲಿ ಪ್ರಿಯಾಮಣಿ ಆಗ ಒಪ್ಪಿಕೊಂಡಿದ್ದರು. ಇದರಲ್ಲಿ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡದ್ದೂ ಆಯ್ತು.

ಈ ಹೊತ್ತಿಗೆ ಅತ್ತ ತಮಿಳು-ತೆಲುಗುಗಳ ನಿರ್ದೇಶಕ-ನಿರ್ಮಾಪಕರು ಇತರ ನಾಯಕಿಯರ ಹಿಂದೆ ಬಿದ್ದರು. ಪ್ರಿಯಾಮಣಿ ನಿಧಾನವಾಗಿ ಮೂಲೆ ಗುಂಪಾದರು. ಕನ್ನಡ ಚಿತ್ರಗಳು ಅನಿವಾರ್ಯವೆನಿಸಿದವು. ಹಾಗೆ ನಟಿಸಿದ್ದು ಗಣೇಶ್ ನಾಯಕರಾಗಿದ್ದ ಏನೋ ಒಂಥರಾ ಚಿತ್ರ.

ಪ್ರಸಕ್ತ ಪ್ರಿಯಾಮಣಿ ಕೈಯಲ್ಲಿ ಒಂದೇ ಒಂದು ತಮಿಳು ಚಿತ್ರವಿಲ್ಲ. ತೆಲುಗಿನಲ್ಲಿ 'ಕ್ಷೇತ್ರಂ' ಒಂದು ಬಿಟ್ಟರೆ, ಇನ್ನೊಂದಿರುವುದು ಮಲಯಾಳಂನ 'ಗ್ರಾಂಡ್‌ಮಾಸ್ಟರ್'. ಅಚ್ಚರಿಯೆಂದರೆ, ಒಂದು ಕಾಲದಲ್ಲಿ ಪರಭಾಷೆಗಳಲ್ಲೇ ಬ್ಯುಸಿಯಾಗಿದ್ದ ಇದೇ ಪ್ರಿಯಾಮಣಿ, ಇಂದು ಕನ್ನಡದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀನಗರ ಕಿಟ್ಟಿ ಜತೆಗಿನ ಖೋ ಖೋ, ಶಿವರಾಜ್ ಕುಮಾರ್ 'ಲಕ್ಷ್ಮಿ', ಕಿಚ್ಚ ಸುದೀಪ್ ನಾಯಕರಾಗಿರುವ ವಿಷ್ಣುವರ್ಧನ ಮತ್ತು ಪುನೀತ್ ರಾಜ್‌ಕುಮಾರ್ 'ಅಣ್ಣಾ ಬಾಂಡ್'ಗಳಲ್ಲಿ ಈಕೆಯೇ ನಾಯಕಿ.

ಪರಭಾಷೆಗಳಲ್ಲಿ ತಾನು ಬೇಡಿಕೆ ಕಳೆದುಕೊಂಡಿರುವ ನಟಿ ಎಂಬುದನ್ನು ಪ್ರಿಯಾಮಣಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. "ತಮಿಳಿನ ಯಾವುದೇ ಚಿತ್ರಗಳು ಕೈಯಲ್ಲಿಲ್ಲ ಅನ್ನುವುದು ನಿಜ. ಆದರೆ ಇದೇನು ನನಗೆ ಚಿಂತೆಯನ್ನುಂಟು ಮಾಡಿಲ್ಲ. ನನಗೆ ವರ್ಷಕ್ಕೆ ಒಂದು ಅರ್ಥಪೂರ್ಣ ಚಿತ್ರ ಕೊಟ್ಟರೂ ಸಾಕು. ಅಷ್ಟಕ್ಕೂ ಖಾಲಿ ಕುಳಿತಿಲ್ಲ. ತೆಲುಗು-ಮಲಯಾಳಂಗಳಲ್ಲಿ ಒಂದೊಂದು ಸಿನಿಮಾ ಮಾಡುತ್ತಿದ್ದೇನೆ. ಮೋಹನ್ ಲಾಲ್ ಜತೆ ಮೊದಲ ಬಾರಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ನಾಲ್ಕು ಚಿತ್ರಗಳಿವೆ" ಎಂದಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ