ಪ್ರೇಕ್ಷಕರ ಕೊರತೆ: ಅಂದರ್ ಬಾಹರ್, ಬಚ್ಚನ್‌ ಚಿತ್ರಗಳಿಗೆ ಕೊಕ್!

ಶುಕ್ರವಾರ, 19 ಏಪ್ರಿಲ್ 2013 (13:49 IST)
PR
PR
ಇದೊಂದು ರೀತಿಯಲ್ಲಿ ಕನ್ನಡ ಚಿತ್ರಪ್ರೇಮಿಗಳಿಗೆ ನಿರಾಸೆಯ ಸುದ್ದಿ. ಇತ್ತೀಚೆಗಷ್ಟೇ ಬಿಡುಗಡೆಯಾದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 'ಅಂದರ್ ಬಾಹರ್' ಮತ್ತು ಕಿಚ್ಚ ಸುದೀಪ್ 'ಬಚ್ಚನ್' ಎರಡೂ ಚಿತ್ರಗಳಿಗೆ ಬೆಂಗಳೂರು ನಗರದಲ್ಲಿ ಪ್ರೇಕ್ಷಕರೇ ಇಲ್ಲ ಎಂಬ ಕಾರಣ ನೀಡಿರುವ ಚಿತ್ರಮಂದಿರದ ಮಾಲೀಕರು, ಬೇರೆ ಚಿತ್ರಗಳನ್ನು ತರಲು ರೆಡಿಯಾಗಿದ್ದಾರೆ!

ಏಪ್ರಿಲ್ 5ರಂದು ಬಿಡುಗಡೆಯಾಗಿದ್ದ, ಪಾರ್ವತಿ ಮೆನನ್ ನಾಯಕಿಯಾಗಿದ್ದ 'ಅಂದರ್ ಬಾಹರ್' ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳೇ ಬಂದಿದ್ದವು. ಖಂಡಿತಾ ಈ ಚಿತ್ರ ಗೆಲ್ಲುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಂದಿರುವುದು ಮಾತ್ರ ಶಾಕಿಂಗ್ ನ್ಯೂಸ್.

ಬೆಂಗಳೂರಿನ ಪ್ರಮುಖ ಚಿತ್ರಮಂದಿರ 'ಸಂತೋಷ್'ನಲ್ಲಿ ಎರಡು ವಾರವಷ್ಟೇ 'ಅಂದರ್ ಬಾಹರ್' ಪ್ರದರ್ಶನವಾಗಿದೆ. ಈಗ ಆ ಜಾಗಕ್ಕೆ ಬಂದಿರುವುದು ಅಲ್ಲು ಶಿರಿಶ್ ನಾಯಕನಾಗಿರುವ 'ಗೌರವಂ' ತೆಲುಗು ಚಿತ್ರ.

ಚಿತ್ರಮಂದಿರದಿಂದ 'ಅಂದರ್ ಬಾಹರ್' ಚಿತ್ರವನ್ನು ತೆಗೆಯಲು ಚಿತ್ರದ ನಿರ್ಮಾಪಕರೂ ಒಪ್ಪಿಗೆ ನೀಡಿದ್ದಾರೆ. ಬಾಕ್ಸಾಫೀಸ್ ಗಳಿಕೆಯಿಂದ ತೀವ್ರ ನಿರಾಸೆಗೊಂಡಿರುವ ನಿರ್ಮಾಪಕರು, ಚಿತ್ರವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

'ಸಂತೋಷ್' ಚಿತ್ರಮಂದಿರ ಹೊರತುಪಡಿಸಿ ಉಳಿದೆಡೆ ರಾಜ್ಯದಾದ್ಯಂತ 'ಅಂದರ್ ಬಾಹರ್' ಸರಾಸರಿ ಗಳಿಕೆ ಮಾಡುತ್ತಿದ್ದು, ಇನ್ನೂ ಕೆಲವು ವಾರಗಳ ಕಾಲ ಓಡುವ ಸಾಧ್ಯತೆಗಳು ಕಾಣುತ್ತಿವೆ.

ಅತ್ತ ಕಿಚ್ಚ ಸುದೀಪ್ ನಾಯಕನಾಗಿದ್ದ, ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರಕ್ಕಂತೂ ದೊಡ್ಡ ಶಾಕ್. ಬಿಡುಗಡೆಯಾದ ಒಂದೇ ವಾರದಲ್ಲಿ ಬೆಂಗಳೂರಿನ ಕೆಲವು ಚಿತ್ರಮಂದಿರಗಳಿಂದ ಓಟ ಕಿತ್ತಿದೆ. ಆ ಜಾಗಕ್ಕೆ ಕನ್ನಡ ಹಾಗೂ ಹಿಂದಿ ಚಿತ್ರಗಳು ಬರುತ್ತಿವೆ. ಕಾರಣ, ಪ್ರೇಕ್ಷಕರ ಕೊರತೆ.

ಕಲಾಸಿಪಾಳ್ಯ ಪ್ರದೇಶದ ಚಿತ್ರಮಂದಿರವೊಂದು 'ಬಚ್ಚನ್' ಜಾಗಕ್ಕೆ ಹಿಂದಿ ಚಿತ್ರವೊಂದನ್ನು ತಂದಿದೆ. ಅದೇ ರೀತಿ ಇನ್ನೊಂದು ಚಿತ್ರಮಂದಿರ 'ಪರಾರಿ' ಕನ್ನಡ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಚಿತ್ರಮಂದಿರಗಳ ಮಾಲೀಕರ ದೂರು, ವಾರಾಂತ್ಯದ ದಿನಗಳನ್ನು ಬಿಟ್ಟು ಬೇರೆ ದಿನ ಪ್ರೇಕ್ಷಕರು ಬರುತ್ತಿಲ್ಲ ಎನ್ನುವುದು.

ಈ ಬಗ್ಗೆ ಅವರು ಏನು ಹೇಳುತ್ತಾರೆ, ಕೇಳಿ: ಬಚ್ಚನ್ ಆಕ್ಷನ್ ಚಿತ್ರ. ಮೊದಲ ಮೂರು ದಿನ ಗಳಿಕೆ ಚೆನ್ನಾಗಿತ್ತು. ಆದರೆ ನಂತರ ಏನೂ ಇಲ್ಲ. ಹಾಗಾಗಿ ಬೇರೆ ಚಿತ್ರಗಳನ್ನು ತರಲು ನಿರ್ಧಾರ ಮಾಡಿದ್ದೇವೆ.

'ಅಂದರ್ ಬಾಹರ್'ನಂತೆ 'ಬಚ್ಚನ್' ಚಿತ್ರಕ್ಕೂ ಬೆಂಗಳೂರಿನ ಕೆಲವು ಕಡೆ ಹಿನ್ನಡೆಯಾಗಿರುವುದನ್ನು ಬಿಟ್ಟರೆ, ಉಳಿದಂತೆ ರಾಜ್ಯದಾದ್ಯಂತ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ