ಬೆನ್ನು ಮೊದಲೇ ತೋರಿಸಿದ್ದೆ, ಈಗ್ಯಾಕೆ ತಕರಾರು?: ಪೂಜಾ

SUJENDRA
'ದಂಡುಪಾಳ್ಯ' ಚಿತ್ರಕ್ಕೆ ಶನಿಕಾಟ ದಿನೇದಿನೇ ಜಾಸ್ತಿಯಾಗುತ್ತಿದೆ. ಒಂದು ಕಡೆಯಿಂದ ಕೃತಿಚೌರ್ಯದ ಆರೋಪ, ಇನ್ನೊಂದು ಕಡೆಯಿಂದ ಪೂಜಾ ಗಾಂಧಿಗೆ ಲೆಫ್ಟ್-ರೈಟ್. ಈಗ ಪ್ರತಿಭಟನೆ ಬೇರೆ. ಇದರಿಂದ ರೋಸಿ ಹೋಗಿರುವ ಅವರು, ನಾನು ಬೆನ್ನು ತೋರಿಸಿರುವುದು ಇದೇ ಮೊದಲೇನಲ್ಲ. ಆಗ ಇಲ್ಲದವರು ಈಗ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೌದೇ? ಪೂಜಾ ಗಾಂಧಿ ಹೀಗೆ ಇಡಿ ಇಡಿಯಾಗಿ ಬೆತ್ತಲೆ ಬೆನ್ನನ್ನು ತೋರಿಸಿರುವ ಸಿನಿಮಾ ಯಾವುದು ಅಂತ ಕೇಳ್ತೀರಾ? ಮುಂಗಾರು ಮಳೆಯಂತೆ!

ಆ ಚಿತ್ರದಲ್ಲಿ (ಮುಂಗಾರು ಮಳೆ) ನಾನು ಧರಿಸಿದ್ದ ಬಟ್ಟೆಯೊಂದರಲ್ಲಿ ಬೆನ್ನು ಪೂರ್ತಿ ಎಂದರೆ ಪೂರ್ತಿಯಾಗಿ ಕಾಣುತ್ತಿತ್ತು. ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ಆಕ್ಷೇಪಿಸಲಿಲ್ಲ. ಆಗ ಇಲ್ಲದ ಆಕ್ಷೇಪಣೆ ಈಗ ಯಾಕೆ? ಅಷ್ಟಕ್ಕೂ 'ದಂಡುಪಾಳ್ಯ' ಚಿತ್ರದಲ್ಲಿ ನಾನು ಗ್ಲಾಮರಸ್ ಆಗಿ ಕಾಣಲು ಹೊರಟಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇಲ್ಲಿ ನಾನು ಹಂತಕಿ. ಪೊಲೀಸರು ಚಿತ್ರಹಿಂಸೆ ನೀಡುವ ಸಂದರ್ಭದಲ್ಲಿ ಮಾನ ಮುಚ್ಚಿಕೊಳ್ಳುವ ದೃಶ್ಯ. ಬಿಚ್ಚುವ ದೃಶ್ಯವಲ್ಲ ಎಂದು ಪೂಜಾ ಗಾಂಧಿ ಕಿಡಿ ಕಾರುತ್ತಾರೆ.

ಅಂದ ಹಾಗೆ, ಪೂಜಾ ಗಾಂಧಿ ಹೀಗೆ ಯದ್ವಾತದ್ವಾ ಕೋಪಗೊಳ್ಳಲು ಕಾರಣ ಶನಿವಾರ ಅಂಬೇಡ್ಕರ್ ಕ್ರಾಂತಿ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿರುವುದು. ಚಿತ್ರದಲ್ಲಿನ ಅರೆಬೆತ್ತಲೆ ಪೋಸ್ಟರುಗಳ ವಿರುದ್ಧ ಈ ಸಂಘಟನೆಯ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದರು. ಘೋಷಣೆಗಳನ್ನು ಕೂಗಿದ್ದರು. 'ದಂಡುಪಾಳ್ಯ' ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.

ಈ ನಡುವೆ ಮೈಸೂರಿನ ಪತ್ರಕರ್ತ ಶ್ರೀನಾಥ್ ನಿರ್ದೇಶಕ ಶ್ರೀನಿವಾಸ ರಾಜು ಮೇಲೆ ಕೃತಿಚೌರ್ಯ ಆರೋಪ ಹೊರಿಸಿದ್ದಾರೆ. ತಾನು ಹತ್ತು ವರ್ಷಗಳ ಹಿಂದೆ ಬರೆದ 'ದಂಡುಪಾಳ್ಯ ಹಂತಕರು' ಎಂಬ ಬರಹವನ್ನೇ ಆಧರಿಸಿ ಚಿತ್ರ ನಿರ್ಮಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನು ನಿರ್ದೇಶಕ ಶ್ರೀನಿವಾಸ್ ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಬ್ಬರನ್ನೂ ಕರೆಸಿ ಸಂಧಾನ ಮಾಡಲು ಯತ್ನಿಸಿದರೂ ಯಶಸ್ವಿಯಾದಂತಿಲ್ಲ. ತಮ್ಮ ತಮ್ಮ ವಾದಗಳಿಗೆ ಇಬ್ಬರೂ ಅಂಟಿಕೊಂಡಿದ್ದಾರೆ. ಶ್ರೀನಾಥ್ ಅವರಂತೂ ಹೈಕೋರ್ಟಿಗೆ ಹೋಗುವುದಾಗಿ ಹೇಳಿದ್ದಾರೆ.

ಇದಿಷ್ಟು ದಂಡುಪಾಳ್ಯ ಚಿತ್ರಕ್ಕೆ ಇದುವರೆಗೆ ಬಂದಿರುವ ಅಡೆ-ತಡೆಗಳು. ಇನ್ನು ಮುಂದೆ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ