ಬ್ಯಾಂಕ್ ಜನಾರ್ದನ್ ಪುತ್ರನ 'ಅಗ್ನಿಮುಷ್ಠಿ'ಯಲ್ಲಿ ನವೀನ್

SUJENDRA
ಹೆಸರು ಗುರುಪ್ರಸಾದ್. ಇವರನ್ನು ಬ್ಯಾಂಕ್ ಜನಾರ್ದನ್ ಪುತ್ರ ಎನ್ನುವುದಕ್ಕಿಂತಲೂ ಇಂಜಿನಿಯರ್ ಎನ್ನುವುದೇ ಸೂಕ್ತ. ಇತ್ತೀಚಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರು ಯಶಸ್ವಿಯಾಗುತ್ತಿರುವುದರಿಂದ ಕೊಂಚ ತೂಕ ಹೆಚ್ಚೆಂದೇ ಹೇಳಬಹುದು. ಇರಲಿ, ಇವರ 'ಅಗ್ನಿಮುಷ್ಠಿ'ಯಲ್ಲೀಗ ನವೀನ್ ಕೃಷ್ಣ ನಾಯಕ.

ನಾಯಕನಾಗಿ ಹಲವು ಪ್ರಯತ್ನಗಳನ್ನು ಮಾಡಿದರೂ ಗೆಲ್ಲಲಾಗದ ನವೀನ್ ಕೃಷ್ಣ ಸಾಹಸ ಸಿಂಹ ಡಾ. ವಿಷ್ಣುವರ್ಧನ್ 'ಕದಂಬ' ಚಿತ್ರದ ನಂತರ ಮಾಡುತ್ತಿರುವ ಗಂಭೀರ ಪಾತ್ರ. ಇವರ ಜತೆ 'ಯುವ' ಖ್ಯಾತಿಯ ಕಾರ್ತಿಕ್ ಇನ್ನೊಂದು ಮುಖ್ಯ ಪಾತ್ರವನ್ನು ಮಾಡುತ್ತಿದ್ದಾರೆ.

ಮಗ ನಿರ್ದೇಶಕನಾಗುತ್ತಿರುವ ಖುಷಿಯಲ್ಲೇ ಮಾತನಾಡಿದ ಬ್ಯಾಂಕ್ ಜನಾರ್ದನ್, ಶುಭವಾಗಲಿ ಎಂದು ಹಾರೈಸಿದರು. ಇಷ್ಟು ವರ್ಷ ಮಾಧ್ಯಮಗಳು ನನ್ನನ್ನು ಚೆನ್ನಾಗಿಯೇ ಬಿಂಬಿಸಿವೆ. ಈ ಹಾರೈಕೆ ನನ್ನ ಮಗನ ಮೇಲೂ ಇರಲಿ ಎಂದು ಕೇಳಿಕೊಂಡರು.

ನನ್ನ ಅದೃಷ್ಟ ಚೆನ್ನಾಗಿದ್ದರೆ ಇಲ್ಲೇ ಉಳಿಯುತ್ತೇನೆ. ಇಲ್ಲದಿದ್ದರೆ ಇದ್ದೇ ಇದೆಯಲ್ಲ ಸಾಫ್ಟ್‌ವೇರ್ ವೃತ್ತಿ ಎಂದು ನಕ್ಕರು ನಿರ್ದೇಶಕ ಗುರುಪ್ರಸಾದ್.

ಅಗ್ನಿಮುಷ್ಠಿ ಹೆಸರೇ ಹೇಳುವಂತೆ ಭಯೋತ್ಪಾದನೆಯ ಅಗ್ನಿ ಜತೆಗಿನ ಆಟ. ಆಕ್ಷನ್, ಸಸ್ಪೆನ್ಸ್ ತುಂಬಿರುವ ಥ್ರಿಲ್ಲರ್ ಸಿನಿಮಾ ನೀಡುವುದು ನಿರ್ದೇಶಕರ ಉದ್ದೇಶ. ಇದರಲ್ಲಿ ತ್ರಿಕೋನ ಪ್ರೇಮಕತೆಯನ್ನೂ ಹೆಣೆದಿದ್ದಾರಂತೆ ನಿರ್ದೇಶಕರು.

ಟೆನಿಸ್ ಕೃಷ್ಣ, ಸುರೇಶ್ ರೈ, ಸಾಗರ್, ನಚಿಕೇತ್, ಕುಣಿಗಲ್ ನಾಗಭೂಷಣ್ ಮುಂತಾದವರೂ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ