ಭಾರತಿ ಅಪ್‌ಸೆಟ್, ಚಿತ್ರಕ್ಕೆ 'ವಿಷ್ಣುವರ್ಧನ' ಹೆಸರಿಡಲು ಬಿಡಲ್ಲ: ಬಸಂತ್

MOKSHA
ದ್ವಾರಕೀಶ್ ನಿರ್ಮಾಣ ಮಾಡಲೆಂದು ಹೊರಟ ವಿಷ್ಣುವರ್ಧನ ಚಿತ್ರಕ್ಕೆ ಸ್ವತಃ ಭಾರತೀ ವಿಷ್ಣುವರ್ಧನ್ ಅವರ ವಿರೋಧ ಬಂದಿರುವ ಜೊತೆಗೆ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ, ಈ ಚಿತ್ರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಆ ಮೂಲಕ ವಿಷ್ಣುವರ್ಧನ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ವಿಷ್ಣುವರ್ಧನ ಹೆಸರಿನಲ್ಲಿ ಚಿತ್ರ ಮಾಡುತ್ತೇವೆ. ಅನುಮತಿ ಕೊಡಿ ಎಂಬ ಅರ್ಜಿ ಬಂದಿದೆ. ಆದರೆ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಹೆಸರಾಂತ ವ್ಯಕ್ತಿಗಳು, ಗಣ್ಯರು ಹಾಗೂ ರಾಜಕೀಯ, ಸಂಘ ಸಂಸ್ಥೆಗಳ ಹೆಸರನ್ನು ಸಿನಿಮಾಕ್ಕೆ ಇಡಬಾರದು. ಹಾಗಾಗಿ ನಿಯಮಗಳ ಪ್ರಕಾರ ವಿಷ್ಣುವರ್ಧನ್ ಹೆಸರಿಡಲು ನಾವು ಬಿಡುವುದಿಲ್ಲ. ಜೊತೆಗೆ ಭಾರತಿ ವಿಷ್ಣುವರ್ಧನ್ ಕೂಡಾ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಾವು ದ್ವಾರಕೀಶ್ ಅವರಿಗೆ ಈ ಹೆಸರಿಡಲು ಬಿಡೋದಿಲ್ಲ. ನಮ್ಮ ನಿಯಮ ಮೀರಿ ಹೆಸರಿಟ್ಟರೆ ಅದು ಕಾನೂನು ರೀತಿಯ ಅಪರಾಧವಾಗುತ್ತದೆ ಎಂದಿದ್ದಾರೆ.

ಭಾರತಿ ಆಕ್ರೋಷ: ಇನ್ನೊಂದೆಡೆ ಭಾರತೀ ವಿಷ್ಣುವರ್ಧನ್ ಅವರು, ವಿಷ್ಣುವರ್ಧನ್ ಅವರು ನಮ್ಮನಗಲಿ ಇನ್ನೂ ಆರು ತಿಂಗಳೂ ಸಂದಿಲ್ಲ. ಇಡೀ ರಾಜ್ಯವೇ ಅವರು ಸತ್ತಾಗ ಶೋಕತಪ್ತವಾಗಿತ್ತು. ನಾವಿನ್ನೂ ಅವರ ಸಾವಿನ ಶಾಕ್‌ನಿಂದ ಹೊರಬಂದಿಲ್ಲ. ಆದರೆ ಇದೀಗ ನನ್ನ ಗಂಡನ ಹೆಸರನ್ನು ಬಳಸಿ ಚಿತ್ರ ಮಾಡಲು ಹೊರಟಿದ್ದಾರೆ. ಇದು ಒಳ್ಳೆಯದಲ್ಲ. ವ್ಯಾಪಾರದ ಉದ್ದೇಶದಿಂದ ನನ್ನ ಗಂಡನ ಹೆಸರನ್ನು ಸಿನಿಮಾಕ್ಕೆ ಯಾಕಿಡಬೇಕು ಹೇಳಿ ಅವರು? ಇದನ್ನು ನಾನು ಖಂಡಿಸುತ್ತೇನೆ. ಈ ಬೆಳವಣಿಗೆ ನನಗೆ ನೋವು ತಂದಿದೆ ಎಂದಿದ್ದಾರೆ.

ವಿಷ್ಣುವರ್ಧನ ಎಂದು ಚಿತ್ರಕ್ಕೆ ಹೆಸರಿಡುವ ಮುನ್ನ ನಮ್ಮನ್ನು ಅವರು ಕೇಳಿಲ್ಲ. ಯಾರ ಅನುಮತಿಯನ್ನೂ ಪಡೆದಿಲ್ಲ. ಚಿತ್ರವೊಂದಕ್ಕೆ ವಿಷ್ಣುವರ್ಧನರ ಹೆಸರಿಡುವ ಈ ಸುದ್ದಿ ಕೇಳಿ ಸಾವಿರಾರು ವಿಷ್ಣು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು ಭಾರತಿ.

ಹೆಸರು ಹೇಳಲಿಚ್ಛಿಸದ ಸಿನಿಮಾ ರಂಗದ ಗಣ್ಯರೊಬ್ಬರು ಹೇಳುವ ಪ್ರಕಾರ, ಹಲವಾರು ಬಾರಿ ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರ ಕಾಲೆಳೆದಿದ್ದಾರೆ. ಹಲವಾರು ಬಾರಿ ನೇರವಾಗಿ ಮಾಧ್ಯಮಗಳ ಎದುರು ವಿಷ್ಣು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಪ್ತರಕ್ಷಕ ಶೂಟಿಂಗ್ ಸಂದರ್ಭ ವಿಷ್ಣು ಕುದುರೆಯಿಂದ ಬಿದ್ದು ಹಾಸಿಗೆಯಲ್ಲಿ ಮಲಗಿದ್ದಾಗಲೂ ಅವರ ವಿರುದ್ಧ ಮಾತಾಡಿದ್ದಾರೆ. ವಿಷ್ಣುವರ್ಧನ್ ಅವರು ತಾವು ಬಿದ್ದುದಕ್ಕೂ ನಾಗವಲ್ಲಿ ಕಾಟಕ್ಕೂ ಸಂಬಂಧ ಕಲ್ಪಿಸುವ ಮೂಲಕ ಪಬ್ಲಿಸಿಟಿ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ದ್ವಾರ್ಕಿ ದೂರಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ವೆಬ್ದುನಿಯಾವನ್ನು ಓದಿ