'ಮದುವೆ ಮನೆ'ಯಲ್ಲಾದ್ರೂ ಗಣೇಶ್ ಗ್ರಹಚಾರ ಬಿಡುತ್ತಾ?

PR
ಕಳೆದೆರಡು ವರ್ಷಗಳಿಂದ ಸಾಲು ಸಾಲು ಸೋಲುಗಳನ್ನು ಕಂಡು ಮುಖ ಊದಿಸಿಕೊಂಡಿರುವ ಪುರಾತನ ಗೋಲ್ಡನ್ ಸ್ಟಾರ್ ಗಣೇಶ್ 'ಮದುವೆ ಮನೆ'ಯಲ್ಲಾದರೂ ನಗುತ್ತಾರಾ? ಈ ಬಾರಿಯಾದರೂ ಗೆಲುವಿನ ಸವಿಯನ್ನು ಉಣ್ಣುತ್ತಾರಾ? ಸ್ಯಾಂಡಲ್‌ವುಡ್ ಪಂಡಿತರ ಪ್ರಕಾರ ಖಚಿತ. ಗಣೇಶ್ ಮುಖದ ಮೊರದಗಲ ನಗುವನ್ನು ಈ ಬಾರಿ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದಕ್ಕೆ ಕಾರಣ, 'ಮದುವೆ ಮನೆ' ಅಷ್ಟೊಂದು ಚೆನ್ನಾಗಿ ಮೂಡಿ ಬಂದಿರೋದು. 'ತಾಳಿ ಕಟ್ಟುವ ಶುಭ ವೇಳೆ' ಎಂಬ ಅಡಿ ಬರಹ ಹೊಂದಿರುವ ಚಿತ್ರ ಬಿಡುಗಡೆಗೆ ಇಷ್ಟೊಂದು ತಿಣುಕಾಡಿದರೂ, ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ನಾಗಾಲೋಟವಾಗಲಿದೆ ಎಂಬ ನಿರೀಕ್ಷೆಗಳಿವೆ.

ಗಣೇಶ್‌, ಶ್ರದ್ಧಾ ಆರ್ಯ ನಾಯಕ-ನಾಯಕಿಯಾಗಿರುವ ಚಿತ್ರದಲ್ಲಿ ಯಾವುದೇ ಕಟ್ ಮಾಡದ ಸೆನ್ಸಾರ್ ಯು ಪ್ರಮಾಣ ಪತ್ರ ನೀಡಿದೆ. ಪಾಪಿ ಸಮುದ್ರ ಹೊಕ್ಕರೂ ಮೊಣಕಾಲು ನೀರು ಎಂಬಂತೆ, ಮತ್ತೆ ಕಾಡಿರುವುದು ಥಿಯೇಟರ್ ಸಮಸ್ಯೆ. ಹಾಗಾಗಿ ಬಿಡುಗಡೆ ದಿನಾಂಕ ಇನ್ನೊಮ್ಮೆ ಬದಲಾಗಿದೆ. ಈಗ ಬಿಡುಗಡೆಗೆ ಫಿಕ್ಸ್ ಆಗಿರುವ ದಿನಾಂಕ ನವೆಂಬರ್ 4.

'ಮದುವೆ ಮನೆ'ಗೆ ಆಕ್ಷನ್-ಕಟ್ ಹೇಳಿರುವುದು ಧಾರಾವಾಹಿಗಳ ಪಂಡಿತ ಸುನಿಲ್ ಕುಮಾರ್ ಸಿಂಗ್. ಬೆಳ್ಳಿತೆರೆಯಲ್ಲಿ ಮೊದಲ ಪ್ರಯತ್ನ. ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಎಲ್ಲವೂ ಅವರದ್ದೇ. ಚೊಚ್ಚಲ ನಿರ್ದೇಶನದಲ್ಲೇ ತಪಸ್ಸು ಫಲಿಸಿದೆ ಎಂಬ ಮಾತುಗಳು ಜೋರಾಗಿರುವುದರಿಂದ ಸ್ವತಃ ಸುನಿಲ್ ಖುಷಿಯಲ್ಲಿದ್ದಾರೆ. ಜತೆಗೆ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕವೂ ಇದೆ.

ಆದರೂ ಗಣೇಶ್ ನಟನೆಯ ಬಗ್ಗೆ ಎರಡು ಮಾತಿಲ್ಲವಂತೆ. ಅವರು ಡಬ್ಬಿಂಗ್ ಮಾಡುವಾಗಲೂ ಅಳುತ್ತಿದ್ದರು, ಎಡಿಟಿಂಗ್ ಮುಗಿದ ನಂತರ ನೋಡಿದಾಗ ಅಷ್ಟೊಂದು ಭಾವುಕರಾಗಿದ್ದರು ಅಂತ ನಿರ್ದೇಶಕರು ಹೇಳಿಕೊಂಡಿದ್ದಾರೆ.

ಅಂದ ಹಾಗೆ ನಿರ್ಮಾಪಕ ರೆಹಮಾನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ರಕ್ಷಣೆಗೆ ಬಂದದ್ದು ಇನ್ನೊಬ್ಬ ನಿರ್ಮಾಪಕ ಕೆ. ಮಂಜು ಅನ್ನೋದು ನಿಮಗೂ ಗೊತ್ತಿರಬೇಕು. ಐದು ಕೋಟಿ ರೂಪಾಯಿ ಹೂಡಿಕೆ ಮಾಡಿದ ನಂತರ ಅವರು ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲದೆ, ಇನ್ನು ಚಿತ್ರ ನಿರ್ಮಿಸದಂತೆ ರೆಹಮಾನ್ ಅವರಿಗೆ ಸಲಹೆಯನ್ನೂ ನೀಡಿದ್ದಾರೆ.

ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದಲ್ಲಿ ಅವಿನಾಶ್, ತಬಲ ನಾಣಿ, ಶರಣ್, ಅರವಿಂದ್ ಮುಂತಾದವರಿದ್ದಾರೆ.

ಅಂತೂ ದೀಪಾವಳಿ ಬೆನ್ನಿಗೆ ಬಿಡುಗಡೆಯಾಗಲಿರುವ ಚಿತ್ರದ ಮೂಲಕವಾದ್ರೂ ಗಣೇಶ್‌ಗೆ ಬ್ರೇಕ್ ಸಿಗುವ ನಿರೀಕ್ಷೆ ಇಡೀ ಕರ್ನಾಟಕಕ್ಕಿದೆ. ಆ ನಿರೀಕ್ಷೆ ಸುಳ್ಳಾಗದಿರಲಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ