ಮರಿ ಸರ್ಜಾ 'ಪುಲಕೇಶಿ' ಜತೆ ರೇಖಾ ಮತ್ತೆ ಬಂದ್ರು

SUJENDRA
ಎಲ್ಲೋ ಮಾಯವಾಗಿ ಹೋಗಿದ್ದ ಜಿಂಕೆ ಮರಿ ರೇಖಾ ವೇದವ್ಯಾಸ್ ಮತ್ತೆ ಬಂದಿದ್ದಾರೆ. ಈ ಹಿಂದಿನ ಚಾರ್ಮನ್ನು ಮರಳಿ ಪಡೆಯಲು ಸಾಧ್ಯವಿಲ್ಲದ ಸ್ಥಿತಿಗೆ ಅವರು ತಲುಪಿದ್ದರೂ, ಹೊಸ ನಾಯಕನೊಬ್ಬನಿಗೆ ನಾಯಕಿಯಾಗುವಷ್ಟು ಚಿಕ್ಕವರಾಗಿದ್ದಾರೆ!

ರೇಖಾರಿಗೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ವೇದಿಕೆ ಕಲ್ಪಿಸುತ್ತಿರುವ ಚಿತ್ರ 'ಪುಲಕೇಶಿ'. ಇಲ್ಲಿ ಸರ್ಜಾ ಕುಟುಂಬದ ಇನ್ನೊಂದು ಕುಡಿ ಭರತ್ ಸರ್ಜಾ ನಾಯಕ. ಅಂದರೆ ಚಿರಂಜೀವಿ ಸರ್ಜಾ, ಧ್ರುವ ಸರ್ಜಾರ ಸಹೋದರ. ಅರ್ಜುನ್ ಸರ್ಜಾ ಸಹೋದರಿಯ ಮಕ್ಕಳಿವರು.

ಇದರೊಂದಿಗೆ ಸರ್ಜಾ ಕುಟುಂಬದ ಕುಡಿಗಳ ಪದಾರ್ಪಣೆ ಚಿತ್ರಗಳಲ್ಲಿ ಚೆಂದುಳ್ಳಿ ಚೆಲುವೆಯರೇ ನಾಯಕಿಯರಾದಂತಾಗಿದೆ. ಚಿರಂಜೀವಿ ಸರ್ಜಾ ಮೊದಲ ಚಿತ್ರ 'ವಾಯುಪುತ್ರ'ದಲ್ಲಿ ಐಂದ್ರಿತಾ ರೇ, ಧ್ರುವ ಸರ್ಜಾರಿಗೆ 'ಅದ್ದೂರಿ'ಯಲ್ಲಿ ರಾಧಿಕಾ ಪಂಡಿತ್ ನಾಯಕಿಯರಾಗಿದ್ದರು.

ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕಳೆದುಕೊಂಡಿರುವ ರೇಖಾ ಬಣ್ಣದ ಲೋಕದ ಅಪರೂಪದ ಚಿಟ್ಟೆಯಾಗಿದ್ದಾರೆ. ಆದರೂ ಕೋಮಲ್ ಕುಮಾರ್ ನಾಯಕನಾಗಿದ್ದ 'ಗೋವಿಂದಾಯ ನಮಃ'ದಲ್ಲಿ ಬಂದು ಹೋಗಿದ್ದರು. ಈಗ ಹೊಸ ಅವಕಾಶ ಸೃಷ್ಟಿಯಾಗಿರೋದಕ್ಕೆ ಕಾರಣ ಅದೇ.

ಗಿರೀಶ್ ಮತ್ತು ವೀರೇಶೇ ನಿರ್ಮಿಸುತ್ತಿರುವ 'ಪುಲಕೇಶಿ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾ.ಭಾ. ಅವರದ್ದು. ರಾಜೇಶ್ ರಾಮನಾಥ್ ಸಂಗೀತ, ಬಿ. ಗೌಡ ಛಾಯಾಗ್ರಹಣವಿದೆ. ರವಿಶಂಕರ್, ಅವಿನಾಶ್, ರಾಜು ತಾಳಿಕೋಟೆ, ಪದ್ಮಾ ವಾಸಂತಿ, ಹೊನ್ನವಳ್ಳಿ ಕೃಷ್ಣ ಮುಂತಾದವರೂ ಪಾತ್ರವರ್ಗದಲ್ಲಿದ್ದಾರೆ.

'ಪುಲಕೇಶಿ' ಹೆಸರೇನೋ ಚೆನ್ನಾಗಿದೆ. ಆದರೆ ಇದರಲ್ಲಿರುವ ಕಥೆ ಯಾವುದು? ಐತಿಹಾಸಿಕ ಸಿನಿಮಾವನ್ನೇನಾದರೂ ಮಾಡುತ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ, ಇಲ್ಲ ಅನ್ನೋದು. ಇಲ್ಲಿ ಇತಿಹಾಸಕ್ಕೆ ಜಾಗವೇ ಇಲ್ಲ. ಏನಿದ್ದರೂ ಎನ್‌ಕೌಂಟರ್. ಹಾಗಿದ್ದರೂ ಇಂತಹ ಹೆಸರೊಂದಕ್ಕೆ ಸರ್ಜಾ ಫ್ಯಾಮಿಲಿ ಸೈ ಎಂದಿದೆ.

ವೆಬ್ದುನಿಯಾವನ್ನು ಓದಿ