ಮಾರ್ಚ್‌ 11ಕ್ಕೆ ಬರಲಿದೆ ಶ್ರಾವಣ

PR
'ಶ್ರಾವಣ' ಚಿತ್ರಕ್ಕೆ ಆವರಿಸಿದ್ದ ಆಷಾಢದ ಕರಿನೆರಳು ಸರಿದಿದೆ. ಈ ಚಿತ್ರದ ಶೂಟಿಂಗ್ ಆರಂಭಗೊಂಡು ಒಂದು ವರ್ಷ ಕಳೆದು ಹೋಗಿದೆ. ಆದರೂ ಬಿಡುಗಡೆಗೆ ಒಂದಲ್ಲ ಒಂದು ಅಡಚಣೆ ದೆಸೆಯಿಂದಾಗಿ ಕಾಲ ಕೂಡಿ ಬಂದಿರಲಿಲ್ಲ.

ಕಷ್ಟದ ಸಂಕೇತವಾದ ಆಷಾಢ ಮುಗಿದಿದ್ದು ಸುಖ ಸಂಭ್ರಮದ ಸೂಚಕವಾದ ಶ್ರಾವಣ ಬಂದಿದೆ. ಹಾಗೆಂದೇ 'ಶ್ರಾವಣ' ಚಿತ್ರ ಶುಕ್ರವಾರ (ಮಾ.11) ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಕಷ್ಟದ ಕಾಲ ಕಳೆದು ಸಂತೋಷದ ದಿನ ಬರುವ ಜೀವನದ ಈ ಸಹಜ ಬೆಳವಣಿಗೆಯನ್ನು 'ಶ್ರಾವಣ'ದ ಚಿತ್ರ ಕಥೆ ಹೊಂದಿದೆ ಎಂದಿದ್ದಾರೆ ನಿರ್ದೇಶಕ ಬಿ.ಎಸ್.ರಾಜಶೇಖರ್.

ವಿಜಯ ರಾಘವೇಂದ್ರ ನಾಯಕನಾಗಿರುವ ಈ ಚಿತ್ರದಲ್ಲಿ ಮುಂಬಯಿ ಮೂಲದ ರೂಪದರ್ಶಿ ಗಾಯತ್ರಿ ಅಯ್ಯರ್ ನಾಯಕಿ. ಮೂಲ ವೃತ್ತಿ ಮಾಡೆಲಿಂಗ್‌ ಆದರೂ ಈಕೆಗೆ ಪಂಜಾಬ್, ತೆಲುಗು ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.

ಭುವನಚಂದ್ರ ಮತ್ತು ಸಂದೀಪ್ ನಾಯಕನ ಮಿತ್ರರು. ಇವರಿಗೆಲ್ಲ ನಿರುದ್ಯೋಗಿಗಳ ಪಾತ್ರ. ನಮಗಿಂತ ಮಿಗಿಲಾಗಿ ನಮ್ಮನ್ನು ಪ್ರೀತಿಸಿದವರಿಗೆ ನಾವು ಏನನ್ನು ನೀಡುತ್ತೇವೆ ಎಂಬ ಕಥೆಯ ಎಳೆಯನ್ನು ಹೊಂದಿರುವ ಹಳ್ಳಿಯ ಸೊಗಡಿನ 'ಶ್ರಾವಣ'ವನ್ನು ಕುಟುಂಬ ಸಮೇತ ನೋಡಬಹುದೆನ್ನುತ್ತಾರೆ ನಿರ್ದೇಶಕರು.

ಜವಾಬ್ದಾರಿ ಇಲ್ಲದೆ ಬೇಕಾಬಿಟ್ಟಿ ಸುತ್ತುವ ಮೂವರು ನಿರುದ್ಯೋಗಿ ಯುವಕರ ಬಾಳಿನಲ್ಲಿ ಎಂಟ್ರಿ ಕೊಡುವ ಯುವತಿಯೊಬ್ಬಳು ಮುಂದೆ ಹೇಗೆ ಆ ಯುವಕರ ಬಾಳಿಗೆ ದಾರಿ ದೀಪವಾಗುತ್ತಾಳೆ ಎಂಬುದೇ ಒಟ್ಟು ಕಥಾ ಹಂದರ.

ಕಷ್ಟದಲ್ಲಿರುವ ಮೂವರು ಯುವಕರಿಗೆ ಸಹಾಯ ಮಾಡಿ ಅವರಿಗೆ ಜೀವನದ ದಾರಿ ತೋರಿಸಿ ಕೊಡುವ ಯುವತಿಯ ಪಾತ್ರದಲ್ಲಿ ಗಾಯತ್ರಿ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಆರ್.ಮಲ್ಲಿಕಾರ್ಜುನಯ್ಯ ಹಾಗೂ ಕೆ.ಎನ್. ವೆಂಕಟೇಶ್ ನಿರ್ಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ