ಯಶ್-ರಾಧಿಕಾ ಲವ್ವಂತೆ, ಮದುವೆ ಆಗ್ತಾರಂತೆ?!

ಸೋಮವಾರ, 27 ಫೆಬ್ರವರಿ 2012 (11:37 IST)
PR
ಆ ಭಟ್ರು ಇದ್ದಾರಲ್ಲ, ಎಲ್ಲವೂ ಅವರದ್ದೇ ಕಿತಾಪತಿ. ದಿಗಂತ್-ಐಂದ್ರಿತಾ ನಡುವೆಯೂ 'ಮನಸಾರೆ' ಮೊದಲು ಏನೂ ಇರಲಿಲ್ಲ. 'ಮೊಗ್ಗಿನ ಮನಸು' ಶೂಟಿಂಗ್‌ನಲ್ಲಿ ಯಶ್-ರಾಧಿಕಾ ಪಂಡಿತ್ ನಡುವೆ ಏನೇನೂ ಇರಲಿಲ್ಲ. ಆದ್ರೆ ಈಗ 'ಡ್ರಾಮಾ' ಶುರು ಮಾಡ್ಕೊಂಡಿದ್ದಾರೆ ನೋಡಿ, ಆಗ್ಲೇ ಶುರುವಾಗಿದೆ ಯಶ್-ರಾಧಿಕಾ ಲವ್ ಸ್ಟೋರಿ!

ನಾವು ಹೇಳ್ತಿರೋದು ಖಂಡಿತಾ ರೀಲ್ ಸುದ್ದಿಯಲ್ಲ, ಇದು ರಿಯಲ್ ಸುದ್ದಿ. ಯಶ್ ಮತ್ತು ರಾಧಿಕಾ ಪಂಡಿತ್ ನಡುವೆ ಕುಚ್ ಕುಚ್ ನಡೀತಿದ್ಯಂತೆ. ಇಬ್ಬರೂ ಕಾಫಿ ಡೇ, ಅಲ್ಲಿ ಇಲ್ಲಿ ಸುತ್ತಾಡ್ತಿದ್ದಾರಂತೆ. ಹೋದಲ್ಲೆಲ್ಲ ಒರಿಜಿನಲ್ ಪ್ರೇಮಿಗಳಂತೆ ಗಂಟೆಗಟ್ಟಲೆ ಕಳೀತಾರಂತೆ. ಹೀಗಂತ 'ವಿಜಯ ಕರ್ನಾಟಕ' ಪತ್ರಿಕೆ ವರದಿ ಮಾಡಿದೆ.

ರಾಧಿಕಾ-ಯಶ್ ಎಲ್ಲೆಲ್ಲ ಸುತ್ತಾಡಿದ್ದಾರೆ ಅನ್ನೋದು ಪೂರ್ತಿಯಾಗಿ ಯಾವುದೂ ಖಾತ್ರಿಯಿಲ್ಲ. ಆದ್ರೆ ವಾರಕ್ಕೆರಡು ಬಾರಿ ಮಲ್ಲೇಶ್ವರಂನ ಎಂಇಎಸ್ ಕಾಲೇಜು ಸಮೀಪದ ಕಾಫಿ ಡೇಯಲ್ಲಿ ಇಬ್ರೂ ಸೇರ್ತಿದ್ದಾರೆ. ಅಲ್ಲಿ ನೋಡಿದವರಿಗೆ ಅವರಿಬ್ಬರು ಫ್ರೆಂಡ್ಸು ಅನ್ನೋ ಭಾವನೆ ಬರೋದಿಕ್ಕೆ ಸಾಧ್ಯನೇ ಇಲ್ಲ. ಪಕ್ಕಾ ಜೋಡಿಯಂತಿದ್ದಾರೆ ಅಂತ ಪ್ರತ್ಯಕ್ಷದರ್ಶಿಗಳೇ ಹೇಳಿದ್ದಾರಂತೆ.

ಕೆಲವರ ಪ್ರಕಾರ, ಯಶ್ ಸೀದಾ ರಾಧಿಕಾ ಪಂಡಿತ್ ಮನೆಗೇ ಹೋಗುತ್ತಾರೆ. ಹೀಗೆ ಆಗಾಗ ರಾಧಿಕಾ ಮನೆಗೆ ಹೋಗಿ ಭೇಟಿ ಮಾಡುತ್ತಾರೆ. ರಾಧಿಕಾ ಹೆತ್ತವರಿಗೂ ಈ ಸಂಗತಿ ಗೊತ್ತು. ಅವರಿಬ್ರೂ ಮದುವೆಯಾಗ್ತಿದ್ದಾರೆ.

ಇದೆಲ್ಲ ವದಂತಿ ಅಂತಾರೆ ಯಶ್....
ಯಶ್ ಸಿನಿ ಬದುಕಿನಲ್ಲಿ ವದಂತಿಗಳಿಗೆ ಏನೂ ಕಡಿಮೆಯಿಲ್ಲ. ಆದ್ರೆ ಇದುವರೆಗೆ ಪ್ರೀತಿ-ಪ್ರೇಮದ ವದಂತಿಗಳು ಬಂದಿರಲಿಲ್ಲ. ನಿರ್ದೇಶಕರ ಜತೆ ಜಗಳ, ಸಂಭಾವನೆ ಕಿರಿಕ್, ನಾಯಕಿಯರ ಜತೆ ಕಿತ್ತಾಟ ಎಂಬಷ್ಟಕ್ಕೇ ಎಲ್ಲವೂ ಸೀಮಿತವಾಗಿತ್ತು. ಆದ್ರೆ ಈಗ ವದಂತಿಗಳು ಮಗ್ಗುಲು ಬದಲಿಸಿವೆ ಅಂತಾರೆ ಸ್ವತಃ ಯಶ್.

ಅವರ ಪ್ರಕಾರ, ಈಗ ಹುಟ್ಟಿಕೊಂಡಿರುವ ಸುದ್ದಿ ಬರೀ ವದಂತಿ. ಇದನ್ನು ಕೇಳಿ ತುಂಬಾ ಬೇಜಾರಾಗಿದ್ಯಂತೆ. ರಾಧಿಕಾ ಮತ್ತು ನಾನು ಗುಡ್ ಫ್ರೆಂಡ್ಸ್. ಇಷ್ಟು ಬಿಟ್ಟು ಬೇರೇನೂ ಹೇಳಲಾರೆ ಅಂದಿದ್ದಾರೆ.

ಮಗಳಿಗೆ ಮದುವೆ ಮಾಡಲ್ಲಾರೀ...
ಮಗಳ ಬಗ್ಗೆ ವದಂತಿಗಳು ಹುಟ್ಟಿಕೊಂಡ್ರೆ ಯಾವ ಅಪ್ಪ ತಾನೇ ಸುಮ್ನಿರ್ತಾನೆ. ಅದರಂತೆ ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಪಂಡಿತ್ ಕೂಡ ಕೆಂಡಾಮಂಡಲರಾಗಿದ್ದಾರೆ.

ನನ್ನ ಮಗಳು ಯಶ್‌ರನ್ನು ಪ್ರೀತಿಸುತ್ತಿದ್ದಾಳೆ ಎಂಬುದಾಗಲೀ ಅಥವಾ ಅವರನ್ನೇ ಮದುವೆಯಾಗುತ್ತಿದ್ದಾಳೆ ಎಂಬ ಸುದ್ದಿಗಳಾಗಲೀ ನಿಜವಲ್ಲ. ನಾವು ನಮ್ಮ ಸಮಾಜದ ಹುಡುಗನನ್ನು ಬಿಟ್ಟು ಬೇರೆ ಹುಡುಗನಿಗೆ ಮದುವೆ ಮಾಡಿ ಕೊಡೋದಿಲ್ಲ. ಅಷ್ಟಕ್ಕೂ ರಾಧಿಕಾ ಇನ್ನೂ ಎರಡು ವರ್ಷ ಮದುವೆನೇ ಆಗೋದಿಲ್ಲ. ಹುಟ್ಟಿಕೊಂಡಿರುವ ವದಂತಿಗಳು ನಮಗಂತೂ ಬೇಡವಾಗಿರುವ ಸಂಗತಿ ಅಂದಿದ್ದಾರೆ.

ವೆಬ್ದುನಿಯಾವನ್ನು ಓದಿ