ಯೋಗಿಗೆ ಸುದೀಪ್ ಸಪೋರ್ಟ್; ನಿರ್ಮಾಪಕರು ಗರಂ

SUJENDRA


ನಾವೇನು ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿ ಸಿನಿಮಾ ಮಾಡಿ ಅಂತ ಕೇಳ್ತೀವಾ? ಯಾವ ನಾಯಕನೂ ಬಿಕಾರಿಯಲ್ಲ. ಎಲ್ಲರಿಗೂ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ತಾಕತ್ತು ಇದೆ. ಹೀಗಂತ ಲೂಸ್ ಲೂಸಾಗಿ ಮಾತನಾಡಿದ್ದ ಯೋಗೀಶ್ ಹೇಳಿಕೆಯನ್ನು ಬೆಂಬಲಿಸಿರುವುದು ಕಿಚ್ಚ ಸುದೀಪ್!

ಇದರೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿನ ಬೆರಳೆಣಿಕೆಯ ನಿರ್ಮಾಪಕರು-ಕಲಾವಿದರ ಸಮರ ಇನ್ನೊಂದು ಮಜಲನ್ನು ತಲುಪಿದೆ. ನಿರ್ಮಾಪಕರ ಹೇಳಿಕೆಯನ್ನು ವಿರೋಧಿಸುವ ಗುಂಪು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ, ಅತ್ತ ನಿರ್ಮಾಪಕರೂ ಒಂದೆಡೆ ಸೇರಿ ತಮ್ಮ ಅಳಿವು-ಉಳಿವಿನ ಬಗ್ಗೆ ಚರ್ಚಿಸುತ್ತಿದ್ದಾರೆ.

PR


ನಿರ್ಮಾಪಕರು ಭಿಕ್ಷುಕರು!
ಹೀಗಂತ ಹೇಳಿರುವುದು ಲೂಸ್ ಮಾದ ಯೋಗೀಶ್. ನಾವೇನೂ ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿ ಸಿನಿಮಾ ಮಾಡಿ ಎಂದು ಹೇಳುತ್ತಿಲ್ಲ. ಅವರೇ ಭಿಕ್ಷುಕರಂತೆ ಬರುತ್ತಾರೆ ಎಂಬರ್ಥದ ಹೇಳಿಕೆಯನ್ನು ಅವರು ನೀಡಿದ್ದರು.

ಇಲ್ಲಿ ಯೋಗೀಶ್ ಬಳಸಿರುವ ಭಿಕ್ಷುಕ ಎಂಬ ಪದ ನಿರ್ಮಾಪಕರನ್ನು ಕೆರಳಿಸಿದೆ. ಮೊನ್ನೆ ಮೊನ್ನೆ ಬಂದ ಯೋಗಿಯಂತಹ ನಟ ನಿರ್ಮಾಪಕರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವಷ್ಟು ಎತ್ತರಕ್ಕೆ ಬೆಳೆದರೇ ಅನ್ನೋದು ಅವರ ಪ್ರಶ್ನೆ. ಈ ಸಂಬಂಧ ನಿರ್ಮಾಪಕರ ಸಂಘವು ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದೆ.

ಯೋಗಿ ಕ್ಷಮೆ ಕೇಳಿದರಂತೆ...
ನಿರ್ಮಾಪಕರ ಸಂಘವು ಯೋಗಿಯ ಸಿನಿಮಾಗಳನ್ನು ಬೆಂಬಲಿಸದೇ ಇರಲು, ಅಂದರೆ ನಿರ್ಮಾಣ ಮಾಡದೇ ಇರುವ ನಿರ್ಧಾರಕ್ಕೆ ನಿನ್ನೆ ಬಂದಿತ್ತು. ಆದರೆ ಅಷ್ಟರಲ್ಲೇ, ಯೋಗಿ ಕ್ಷಮೆ ಕೇಳಿದರೆಂಬ ಸುದ್ದಿಯಾಯ್ತು. ಆಗ ತಮ್ಮ ನಿರ್ಧಾರವನ್ನು ಕೈ ಬಿಟ್ಟ ನಿರ್ಮಾಪಕರು, ಕೆಲ ಹೊತ್ತಿನಲ್ಲೇ ಅವಕ್ಕಾದರು. ಕಾರಣ, ನಾನು ಕ್ಷಮೆ ಕೇಳಿಯೇ ಇಲ್ಲ ಎಂದು ಯೋಗಿ ಹೇಳಿದ್ದು.

PR


ಕ್ಷಮೆ ಕೇಳೋದಿಲ್ಲ: ಯೋಗಿ
ನಾನ್ಯಾಕ್ರೀ ಕ್ಷಮೆ ಕೇಳಬೇಕು? ನಾನು ಅಂತಹ ಯಾವುದೇ ತಪ್ಪು ಮಾಡಿಲ್ಲ. ನಿರ್ಮಾಪಕರನ್ನು ಭಿಕ್ಷುಕರು ಎಂದು ಹೇಳಿಲ್ಲ. ಅದು ಪತ್ರಿಕೆಯೊಂದರ ಅವಾಂತರ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ನೀಡಿರುವ ಹೇಳಿಕೆ ನನಗೆ ಗೊತ್ತೇ ಇರಲಿಲ್ಲ. ನಾನು ದುಬೈಯಲ್ಲಿದ್ದೆ. ವಾಪಸ್ ಬರುತ್ತಿದ್ದಂತೆ ಪ್ರಶ್ನೆ ಕೇಳಿದಾಗ ಏನೋ ಹೇಳಿದ್ದೆ. ಅದನ್ನು ತಪ್ಪಾಗಿ ವರದಿ ಮಾಡಲಾಗಿದೆ.

ಮುನಿರತ್ನ ನೀಡಿರುವ ಹೇಳಿಕೆಗೂ ನನಗೂ ಸಂಬಂಧವೇ ಇಲ್ಲ. ನಾನು ಅಂತಹ ನಟ ಅಲ್ಲ. ನಾನು ನಟಿಸಿದ ಚಿತ್ರಗಳಿಂದ ನಿರ್ಮಾಪಕರಿಗೆ ನಷ್ಟವೂ ಆಗುತ್ತಿಲ್ಲ. ಹೀಗೆಂದು ಸ್ಪಷ್ಟನೆ ನೀಡಿರುವುದು ಯೋಗಿ.

ಯೋಗಿಗೆ ಅಶೋಕ್ ಬೆಂಬಲ...
ಸಿನಿಮಾ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ-ನಟ ಅಶೋಕ್ ಕೂಡ ಯೋಗಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಿರ್ಮಾಪಕರ ರಕ್ತವನ್ನು ಕಲಾವಿದರು ಹೀರುತ್ತಿಲ್ಲ. ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ, ಅಷ್ಟೇ. ಈ ಬಗ್ಗೆ ಅಂಬರೀಷ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಜತೆ ಮಾತನಾಡಿದ ನಂತರ ಮುಂದಿನ ಹೆಜ್ಜೆ ಇಡುತ್ತೇವೆ ಎಂದಿದ್ದಾರೆ.

PR


ಯೋಗಿಗೆ ಸುದೀಪ್ ಸಪೋರ್ಟ್...
ನಾವೇನೂ ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿ ಸಿನಿಮಾ ಮಾಡಿ ಅಂಥ ಕೇಳ್ತೀವಾ? ಅವರೇ ಬಂದು ಡೇಟ್ಸ್ ಕೇಳುತ್ತಾರೆ. ಯಾವ ನಾಯಕನೂ ಬಿಕಾರಿಯಲ್ಲ. ಆತ ದುಡಿಯುವ ಹಣದಲ್ಲಿ ಬೇಕಾದ ಸೌಲಭ್ಯಗಳನ್ನು ಮಾಡಿಕೊಳ್ಳುವ ತಾಕತ್ತು ಅವನಿಗಿದೆ. ಅದಕ್ಕೆ ನಿರ್ಮಾಪಕರ ಹಣವೇ ಬೇಕಿಲ್ಲ. ಕಲಾವಿದರು ಎಂದರೆ ಅವರಿಗೆ ಸಮಾಜದಲ್ಲಿ ಗೌರವ ಇದೆ. ನಾನಂತೂ ಕಲಾವಿದರು ಮೇಲು, ನಿರ್ಮಾಪಕರು ಕೀಳು ಎಂದು ಭಾವಿಸಿಲ್ಲ. ಇಬ್ಬರೂ ಸಮಾನರು. ಸಹಕಾರ ಮನೋಭಾವ ಅಗತ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯೋಗಿ ಹೇಳಿಕೆಯನ್ನು ಕಿಚ್ಚ ಸುದೀಪ್ ಬೆಂಬಲಿಸಿದ್ದಾರೆ.

ಜಗ್ಗೇಶ್ ಅಸಮಾಧಾನ...
ಯೋಗಿ ನೀಡಿರುವ ಹೇಳಿಕೆಯ ಬಗ್ಗೆ ಆರಂಭದಲ್ಲಿ ನವರಸ ನಾಯಕ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ಬೆಳೆಯುತ್ತಿರುವ ಹುಡುಗ ಇಷ್ಟು ದೊಡ್ಡ ದೊಡ್ಡ ಮಾತುಗಳನ್ನು ಆಡಬಾರದಿತ್ತು ಎಂದರು. ಆದರೆ ಇದಿಷ್ಟಕ್ಕೇ ವಿಷಯ ಮುಗಿಯುವುದಿಲ್ಲ, ಇನ್ನೂ ಏನೋ ಇದ್ದಂತಿದೆ. ಹಾಗಾಗಿ ಸದ್ಯಕ್ಕೆ ನಾನು ಇದರ ಬಗ್ಗೆ ಏನೂ ಹೇಳಲಾರೆ ಎಂದರು.

ವೆಬ್ದುನಿಯಾವನ್ನು ಓದಿ