ರಮ್ಯಾ ರಾಜಕೀಯದಿಂದ ಸಿನೆಮಾಗಳಿಗೆ ಏಟು?

ಮಂಗಳವಾರ, 13 ಆಗಸ್ಟ್ 2013 (15:04 IST)
PR
ಉಪಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಾರೆ ಎಂಬುದು ಕನ್ಫರ್ಮ ಆಗುತ್ತಿದ್ದಂತೆ ಅವರ ಸಿನೆಮಾ ಬದುಕಿನ ಭವಿಷ್ಯವೇನು ಎಂಬ ಬಗ್ಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದವು. ಅವರ ರಾಜಕೀಯ ಕನವರಿಕೆ ಚಿತ್ರಗಳಲ್ಲಿ ನಟಿಸಲು ಅಡ್ಡಿಯಾಗಲಿಕ್ಕಿಲ್ಲವೇ ಎಂಬುದು ಬಹುತೇಕರ ಪ್ರಶ್ನೆಯಾಗಿತ್ತು. ಈಗ ಅದಕ್ಕೆ ಉತ್ತರ ಲಭಿಸಿದ್ದು ಅವರ ರಾಜಕಾರಣದ ಮೊದಲ ಕಲ್ಲು ಒಂದು ಚಿತ್ರದ ಬಲಿ ಪಡೆದುಕೊಂಡಿದೆ. ಸುದೀಪ್ ನಿರ್ದೇಶನದ ರಿಮೇಕ್ ಚಿತ್ರ ಮಿರ್ಚಿ ಆಗಸ್ಟ್ 19ರಂದು ಮುಹೂರ್ತ ಕಾಣುತ್ತಿದೆ. ಅದರಲ್ಲಿ ನಾಯಕಿಯಾಗಿ ರಮ್ಯಾ ನಟಿಸಬೇಕಿತ್ತು. ರಾಜಕೀಯ ಪ್ರಚಾರದ ಕಾರಣದಿಂದ ಅವರು ಚಿತ್ರದಿಂದ ಹೊರಗುಳಿದಿದ್ದಾರೆ.

ಈ ಸುದ್ದಿಯನ್ನು ನಿರ್ಮಾಪಕ ಎನ್ ಕುಮಾರ್ ಕನ್ಫರ್ಮ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಸುದ್ದಿ ಸಖತ್ ನೋವು ಕೊಟ್ಟಿರುವ ಬೆನ್ನಲ್ಲೇ ಆ ಜಾಗಕ್ಕೆ ಕೇರಳದ ಇಲ್ಲವೇ ಮೈಸೂರು ಮೂಲದ ನಟಿಯೊಬ್ಬರು ಬರಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇತ್ತ ರಮ್ಯಾ ಅಭಿನಯದ ನೀರ್ದೋಸೆ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಮುಂದಿನ ತಿಂಗಳು ಮೊದಲ ವಾರದಿಂದ ಚಿತ್ರೀಕರಣಗೊಳ್ಳಬೇಕಿದ್ದ ದಿಲ್ ಕಾ ರಾಜಾ ಚಿತ್ರಕ್ಕೂ ಶೂಟಿಂಗ್ ನಡೆಯುತ್ತದೋ ಇಲ್ಲವೋ ಎಂಬ ಭಯ ಆವರಿಸಿದೆಯಂತೆ.

ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಮುಂದಕ್ಕೆ ಹೋಗಿದೆ. ಶಿವಣ್ಣ ಜೊತೆ ನಟಿಸಲಿರುವ ಆರ್ಯನ್ ಚಿತ್ರಕ್ಕೂ ಈ ಚುನಾವಣೆಯ ಬಿಸಿ ತಟ್ಟಿದೆ ಎನ್ನಲಾಗುತ್ತಿದೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಚುನಾವಣೆ ಮುಗಿಯುವವರೆಗೂ ಮೂರನೇ ಹಂತದ ಚಿತ್ರೀಕರಣಕ್ಕೆ ಕಾಯಬೇಕಾದೀತು. ಒಟ್ಟಿನಲ್ಲಿ ರಮ್ಯಾ ಅವರನ್ನು ಆಧರಿಸಿದ ನಾಲ್ಕೈದು ಚಿತ್ರಗಳ ನಿರ್ದೇಶಕರು ತಲೆ ಮೇಲೆ ಕೈಹೊತ್ತು ಕೂರಬೇಕಾದ ಅನಿವಾರ್ಯತೆ ಬಂದೊದಗಿದೆ. ಇಷ್ಟಕ್ಕೂ ಸಾಕು ತಂದೆ ತೀರಿಹೋದ ನೋವಿನಲ್ಲಿ ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದ ರಮ್ಯಾ ಗಣ್ಯರ ಒತ್ತಾಯದ ಮೇರೆಗೆ ಪ್ರಚಾರಕ್ಕೆ ಬರಲು ಒಪ್ಪಿಕೊಂಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ