ರವಿಚಂದ್ರನ್ ಆತ್ಮಹತ್ಯೆ ಸುದ್ದಿಯನ್ನು ಯಾರು ತಾನೇ ನಂಬುತ್ತಾರೆ?

ಶುಕ್ರವಾರ, 14 ಜೂನ್ 2013 (16:48 IST)
PR
ಸಿಲ್ಕ್ ಸ್ಮಿತಾ, ಕಲ್ಪನಾ, ಮಂಜುಳಾ ಮುಂತಾದ ಘಟಾನುಘಟಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನೂರೊಂದು ಕಾರಣಗಳಿದ್ದವು. ಅವರ ಆತ್ಮಹತ್ಯೆ ಸುದ್ದಿಗಳು ಆ ಕಾಲದಲ್ಲಿ ದೊಡ್ಡ ಆಘಾತ. ಆದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಆತ್ಮಹತ್ಯೆಗೆ ಯತ್ನಿಸಿದರು ಎಂದು ಯಾರಾದರೂ ಹೇಳಿದರೆ ಯಾರು ತಾನೇ ನಂಬುತ್ತಾರೆ?

ನಂಬಿದರೆ ನಂಬಿ, ಬಿಟ್ಟರೆ ಬಿಡಿ ಎಂಬಂತೆ ಅಸಾಮಿಯೊಬ್ಬ ಇಂತಹ ಗಾಸಿಪ್ ಹರಡಲು ಯತ್ನಿಸಿದ್ದಾನೆ. ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಸ್ವತಃ ರವಿಚಂದ್ರನ್ ಟಿವಿ ಚಾನೆಲ್‌ನಲ್ಲಿ ಪ್ರತ್ಯಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ಅಲ್ಲ. ಹಾಗೆ ಮಾಡಿಕೊಳ್ಳುತ್ತಿದ್ದರೆ, ಶಾಂತಿ ಕ್ರಾಂತಿ ಸೋತು ಸುಣ್ಣವಾದಾಗಲೇ ಸಾಯುತ್ತಿದ್ದೆ ಎಂದಿದ್ದಾರೆ.

ಘಟನೆ ವಿವರ:
ಗುರುವಾರ ಬೆಳಗ್ಗೆ ಚಾಮರಾಜಪೇಟೆಯ ಪ್ರಿಂಟಿಂಗ್ ಪ್ರೆಸ್‌ಗೆ ಹನುಮಂತನಗರದ ಶಿವಕುಮಾರ್ ಎಂಬ ವ್ಯಕ್ತಿ ಬಂದು, ರವಿಚಂದ್ರನ್ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ 10,000 ಪಾಂಪ್ಲೆಟ್ ಮುದ್ರಿಸಿಕೊಡಲು ಆರ್ಡರ್ ನೀಡಿದ್ದ. ಈ ಬಗ್ಗೆ ಸಂಶಯಗೊಂಡ ಪ್ರೆಸ್ ಮಾಲಕರು, ಯುವಕನನ್ನು ವಿಚಾರಿಸಿದರು.

ಹಣಕಾಸು ತೊಂದರೆಯಿಂದಾಗಿ ರವಿಚಂದ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ರವಿಚಂದ್ರನ್ ಸಹೋದರ ಬಾಲಾಜಿಯವರೇ ನನಗೆ ಹೇಳಿದ್ದಾರೆ. ಅದರಂತೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರಪತ್ರ ಬೇಕಾಗಿದೆ ಎಂದು ಶಿವಕುಮಾರ್ ವಿವರಣೆ ನೀಡಿದ್ದ.

ರವಿಚಂದ್ರನ್ ಆತ್ಮಹತ್ಯೆ ಮಾಡಿಕೊಳ್ಳುವ ಪಾರ್ಟಿಯಲ್ಲ ಎಂದು ಪ್ರೆಸ್ ಮಾಲಕನಿಗೆ ಗೊತ್ತಿತ್ತು. ಆದರೂ ಪರಿಶೀಲಿಸೋಣ ಎಂದು ಪರಿಚಯದವರ ಜತೆ ವಿಚಾರಿಸಿದಾಗ ಸುಳ್ಳೆಂದು ಗೊತ್ತಾಯಿತು. ಅಷ್ಟರಲ್ಲಿ ಕರಪತ್ರ ಮುದ್ರಣಕ್ಕೆ ಬಂದಿದ್ದ ಶಿವಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದು ಮಾಧ್ಯಮಗಳ ಕಿವಿಗೆ ಬಿದ್ದು, ದೊಡ್ಡ ಸುದ್ದಿಯಾಯಿತು. ಹೀಗೊಂದು ಗಾಸಿಪ್ ಹರಡುತ್ತಿದೆ ಎಂದು ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವು. ಇದಾದ ನಂತರ ರವಿಚಂದ್ರನ್ ಸ್ವತಃ ಸ್ಟುಡಿಯೋಗೆ ಬಂದು ಸ್ಪಷ್ಟನೆ ನೀಡಿದರು.

ಇಂತಹ ರೂಮರ್‌ಗಳು ನನಗೆ ಹೊಸತಲ್ಲ, ಅವುಗಳನ್ನು ನಾನು ಕೇರ್ ಮಾಡಲ್ಲ. ನಾನು ಆತ್ಮಹತ್ಯೆಗೆ ಶರಣಾಗುವಂತಹ ವ್ಯಕ್ತಿಯಲ್ಲ. ನಾನು ಧನಾತ್ಮಕ ಚಿಂತನೆಯ ವ್ಯಕ್ತಿ. ಆದರೆ ಇಂತಹ ರೂಮರ್ ನನ್ನ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಹಿಂದೊಮ್ಮೆ ಹೀಗೆ ಸುದ್ದಿಯಾದದ್ದು ನನ್ನ ತಂದೆಗೆ ಗೊತ್ತಾಗಿತ್ತು. ಅವರು ಅದನ್ನು ನನ್ನ ಕಿವಿಗೆ ಬೀಳಲು ಬಿಟ್ಟಿರಲಿಲ್ಲ. ಈ ಬಾರಿ ನನಗೆ ಗೊತ್ತಾದಾಗ, ಹೆಂಡತಿಯನ್ನು ಕರೆದು ಹೇಳಿದೆ. ಆದರೆ ತಾಯಿಗೆ ಹೇಳಬೇಡ ಎಂದು ತಿಳಿಸಿದ್ದೇನೆ. ಅವರಿಗೆ ಗೊತ್ತಾದರೆ ತುಂಬಾ ಅಪ್‌ಸೆಟ್ ಆಗುತ್ತಾರೆ ಎಂದು ರವಿಚಂದ್ರನ್ ವಿವರಿಸಿದರು.

ವೆಬ್ದುನಿಯಾವನ್ನು ಓದಿ