ರಾಜ್ ಹಾಡುಗಳ ರಿಮಿಕ್ಸ್‌ಗೆ ಆಕ್ಷೇಪ: ಕ್ಷಮೆ ಯಾಚಿಸಿದ ಗುರುಕಿರಣ್

ಶುಕ್ರವಾರ, 26 ಏಪ್ರಿಲ್ 2013 (13:52 IST)
PR
ಕನ್ನಡದ ಹಲವು ಹಳೆಯ ಹಾಡುಗಳನ್ನು ರಿಮಿಕ್ಸ್ ಹೆಸರಿನಲ್ಲಿ ಕೆಡಿಸಿ ಈಗಿನ ನಾಯಕರು ಕುಣಿಯುವಂತೆ ಮಾಡಿದವರಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮುಂಚೂಣಿಯವರು. ಆದರೆ ಅವರ ಪ್ರಯೋಗಕ್ಕೆ ನೇರಾನೇರ ವಿರೋಧ ವ್ಯಕ್ತವಾಗಿದ್ದು ವರನಟ ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ಸಮಾರಂಭದಲ್ಲಿ. ಕೊನೆಗೆ ಗುರುಕಿರಣ್ ಕ್ಷಮೆ ಯಾಚಿಸಬೇಕಾಯಿತು!

ವಾರ್ತಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ಗುರುಕಿರಣ್ ಅವರದ್ದಾಗಿತ್ತು. ಅಭಿಮಾನಿಗಳಿಗೆ ರಾಜ್ ಹಾಡುಗಳನ್ನು ನೆನಪು ಮಾಡಲು ಅವರು ಹೊರಟಿದ್ದರು. ಆದರೆ ಹಾಡಿನ ಮೂಲ ಸ್ವರೂಪವನ್ನು ಬದಲಾಯಿಸಿ, ತನ್ನದೇ ಶೈಲಿಯಲ್ಲಿ ಹಾಡಿದ್ದರು. ಒಂದು ಹಾಡಿಗೆ ಇರಲಿ ಬಿಡಿ ಎಂಬಂತೆ ಸುಮ್ಮನಿದ್ದ ಅಭಿಮಾನಿಗಳು, ಎರಡನೇ ಹಾಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಜ್ ಅವರೇ ಹಾಡಿದ್ದ ಲವ್ ಮೀ ಆರ್ ಹೇಟ್ ಮೀ, ಎಂದೆಂದೂ ನಿನ್ನನು ಮರೆತು ಹಾಡುಗಳನ್ನು ಗುರುಕಿರಣ್ ರಿಮಿಕ್ಸ್ ಮಾಡಿ ಹಾಡಿದ್ದರು. ರಿಮಿಕ್ಸ್ ಬೇಡ, ಹೇಗೆ ಇದೆಯೋ ಹಾಗೆಯೇ ಹಾಡಿ ಎಂದು ಅಭಿಮಾನಿಗಳು ಗದ್ದಲ ಎಬ್ಬಿಸಿದರು. ರಿಮಿಕ್ಸ್ ಹೆಸರಿನಲ್ಲಿ ಹಾಡುಗಳನ್ನು ವಿರೂಪಗೊಳಿಸುತ್ತಿದ್ದೀರಿ. ಅದೂ ರಾಜ್ ಹುಟ್ಟುಹಬ್ಬದಂದೇ ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಗುರುಕಿರಣ್ ಕಕ್ಕಾಬಿಕ್ಕಿಯಾಗಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಶಿವರಾಜ್ ಕುಮಾರ್ ಪರಿಸ್ಥಿತಿ ತಿಳಿಗೊಳಿಸಿದರು. ಗುರುಕಿರಣ್ ಅವರು ಹಾಡನ್ನು ವಿರೂಪಗೊಳಿಸಿಲ್ಲ. ಅವರ ಶೈಲಿಯಲ್ಲಿ ಹಾಡಿದ್ದಾರೆ. ಒಂದು ಹೊಸ ಪ್ರಯೋಗ ಮಾಡಿದ್ದಾರೆ. ದಯವಿಟ್ಟು ಸುಮ್ಮನಿದ್ದು, ಸಹಕರಿಸಿ. ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ಹೇಳಿದರು.

ನಂತರ ಸ್ವತಃ ಗುರುಕಿರಣ್ ರಾಜ್ ಅಭಿಮಾನಿಗಳ ಕ್ಷಮೆ ಯಾಚಿಸಿದರು.

ನಾನು ಯಾವತ್ತೂ ಹೊಸ ಪ್ರಯೋಗಕ್ಕೆ ಹೋಗುತ್ತೇನೆ. ರಾಜ್ ಮೇಲೆ ನನಗೆ ಅಪಾರ ಗೌರವವಿದೆ. ನನ್ನ ಶೈಲಿಯಲ್ಲಿ ಹಾಡಲು ಯತ್ನಿಸಿದೆ. ಇದರಿಂದ ಅಭಿಮಾನಿಗಳಿಗೆ ಬೇಸರವಾಗಿದ್ದರೆ ಕ್ಷಮಿಸಬೇಕು. ನಾನು ಖಂಡಿತಾ ರಾಜ್ ಹಾಡುಗಳನ್ನು ಕೆಡಿಸಲು ಯತ್ನಿಸಿಲ್ಲ. ಆ ಉದ್ದೇಶನ ನನ್ನದಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ