'ರಾಧನ ಗಂಡ' ಕದ್ದಿರೋದು ಕೇರಳದಿಂದಲ್ಲ, ಫ್ರಾನ್ಸ್‌ನಿಂದ!

PR
ತುಂಬಾ ಆಸಕ್ತಿ ಹುಟ್ಟಿಸುವ ಸಂಗತಿಯಿದು. ಕದ್ದಿರುವ ಸರಕು ಯಾರದ್ದು ಅನ್ನೋದಷ್ಟೇ ವಿಷಯ. ಮಲಯಾಳಿಗಳು ನಮ್ಮದು ಎನ್ನುತ್ತಿದ್ದಾರೆ, ಕನ್ನಡದವರು ಅದು ಸುಳ್ಳು ಎನ್ನುತ್ತಿದ್ದಾರೆ. ಆದರೆ ವಾಸ್ತವ ಸಂಗತಿ ಬೇರೆಯೇ ಇದೆ. ಇಲ್ಲಿ ಮಲಯಾಳ ಮತ್ತು ಕನ್ನಡ -- ಇಬ್ಬರೂ ಕದ್ದಿರುವವರೇ. ಇದರ ಮೂಲ ಫ್ರಾನ್ಸ್!

ಇದೇನು ಒಂಚೂರು ಅರ್ಥವಾಗುತ್ತಿಲ್ಲ ಅಂತ ನೋಡುತ್ತಿದ್ದೀರಾ? ಹೇಳ್ತೀವಿ ಕೇಳಿ. ಚಿತ್ರದ ಹೆಸರು 'ರಾಧಿಕನ್ ಗಂಡ' ಎಂದು ಆರಂಭದಲ್ಲಿ ಹೇಳಲಾಗಿತ್ತು. ರಾಧಿಕಾ ಕುಮಾರಸ್ವಾಮಿ ಮತ್ತು ಸ್ವತಃ ಎಚ್.ಡಿ. ಕುಮಾರಸ್ವಾಮಿ ತಗಾದೆ ಎತ್ತಿದ ನಂತರ ಚಿತ್ರವನ್ನು 'ರಾಧನ ಗಂಡ' ಎಂದು ಬದಲಾವಣೆ ಮಾಡಲಾಯಿತು. ಈ ನಡುವೆ ಚಿತ್ರದ ನಾಯಕ ಕೋಮಲ್ ಕುಮಾರ್ ಮತ್ತು ರಾಧಿಕಾ ಮಾಧ್ಯಮಗಳ ಮೂಲಕ ಸಾಕಷ್ಟು ಕಿತ್ತಾಡಿಕೊಂಡದ್ದೂ ಆಯ್ತು.

ಈಗ 'ರಾಧನ ಗಂಡ' ಚಿತ್ರ ಮಲಯಾಳಂನ 'ಮೇಕಪ್ ಮ್ಯಾನ್' ಚಿತ್ರದ ರಿಮೇಕ್ ಎಂದು ಆ ಚಿತ್ರದ ನಿರ್ಮಾಪಕ ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್, 'ರಾಧನ ಗಂಡ' ಚಿತ್ರದ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ರಿಮೇಕ್ ಹಕ್ಕುಗಳನ್ನು ಪಡೆದುಕೊಳ್ಳದೆ ನಮ್ಮ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ. ಚಿತ್ರವನ್ನು ನಕಲು ಮಾಡಿರುವುದು ಕಾಪಿ ರೈಟ್ ಕಾಯ್ದೆಯ ಉಲ್ಲಂಘನೆ ಎಂದು ಎಂ. ರಂಜಿತ್ ಎಂಬವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಆದರೆ ಮಲಯಾಳಂ ಚಿತ್ರ ನಿರ್ಮಾಪಕರ ವಾದವನ್ನು ಕನ್ನಡದಲ್ಲಿ 'ರಾಧನ ಗಂಡ' ಚಿತ್ರದ ನಿರ್ಮಾಪಕ ಎನ್.ರವಿಕುಮಾರ್ ಸೇರಿದಂತೆ ಯಾರೊಬ್ಬರೂ ಒಪ್ಪುತ್ತಿಲ್ಲ. ಇದು ನಮ್ಮದೇ ಸ್ವಂತ ಕಥೆ ಎಂದು ವಾದ ಮಾಡುತ್ತಿದ್ದಾರೆ.

ಇಲ್ಲಿ ವಾಸ್ತವ ಸಂಗತಿ ಬೇರೆಯೇ ಇದೆ. ಮಲಯಾಳಂನಲ್ಲಿ 2011ರಲ್ಲಿ ಬಿಡುಗಡೆಯಾಗಿದ್ದ 'ಮೇಕಪ್ ಮ್ಯಾನ್' ಚಿತ್ರ ವಾಸ್ತವವಾಗಿ ಕದ್ದಮಾಲು. 2001ರಲ್ಲಿ ಫ್ರೆಂಚ್-ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗಿದ್ದ 'ಮೈ ವೈಫ್ ಈಸ್ ಆನ್ ಆಕ್ಟ್ರೆಸ್' ಚಿತ್ರದ ನಕಲು. ಅದನ್ನೇ ಭಾರತೀಕರಣಗೊಳಿಸಿ 'ಮೇಕಪ್ ಮ್ಯಾನ್' ಮಾಡಲಾಗಿತ್ತು. ಅಲ್ಲಿಂದ ಎಗರಿಸಿ 'ರಾಧನ ಗಂಡ' ಮಾಡಲಾಗಿದೆ.

ಮಲಯಾಳಂ ಚಿತ್ರದ ನಿರ್ಮಾಪಕರೂ ಮೂಲ ಚಿತ್ರದ ನಿರ್ಮಾಪಕರಿಂದ ರಿಮೇಕ್ ಹಕ್ಕುಗಳನ್ನು ಖರೀದಿಸಿಲ್ಲ. ಇತ್ತ ಕನ್ನಡ ನಿರ್ಮಾಪಕರು ಕೂಡ ಅದೇ ಹಾದಿ ತುಳಿದಿದ್ದಾರೆ. ಅಷ್ಟಾದರೂ ಕೋರ್ಟ್, ಕಚೇರಿ ಅಲೆದಾಟ. ಈಗ ಕನ್ನಡದ ನಿರ್ಮಾಪಕರಿಗೆ 'ರಾಧನ ಗಂಡ' ರಿಮೇಕ್ ಅಲ್ಲ ಎನ್ನುವುದನ್ನು ಸಾಬೀತುಪಡಿಸುವ ಅನಿವಾರ್ಯತೆ. ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕು.

ಅಂದ ಹಾಗೆ, 'ರಾಧನ ಗಂಡ' ಚಿತ್ರದಲ್ಲಿ ಕೋಮಲ್‌ಗೆ ಪೂರ್ಣ ಹೀರೋಯಿನ್. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ