'ರಾಧಿಕಾ-ಕುಮಾರಸ್ವಾಮಿ ವಿಷ್ಯಕ್ಕೆ ನಾನು ಹೋಗಲ್ಲ'

SUJENDRA
'ರಾಧಿಕನ್ ಗಂಡ' ಸಿನಿಮಾವನ್ನು ಹಾಸ್ಯನಟ ಕೋಮಲ್ ಕುಮಾರ್ ಎತ್ತಿಕೊಂಡು ವಿವಾದಕ್ಕೆ ತುತ್ತಾಗಿದ್ದು ಗೊತ್ತೇ ಇದೆ. ಆದರೆ ವಿವಾದ ತಾನೇ ಬೇಕೆಂದು ಸೃಷ್ಟಿಸಿದ್ದು ಎಂಬುದನ್ನು ಸ್ವತಃ ಕೋಮಲ್ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ, ಪ್ರಚಾರ. ಆದರೂ ನಟಿ ರಾಧಿಕಾ ಮತ್ತು ಅವರ ಗಂಡ ಎಚ್.ಡಿ. ಕುಮಾರಸ್ವಾಮಿಯವರಿಗೆ ನೋವಾಗುವಂತಹ ಅಥವಾ ಸಂಬಂಧಪಟ್ಟ ಯಾವುದೇ ದೃಶ್ಯಗಳು ನನ್ನ ಚಿತ್ರದಲ್ಲಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಾಧಿಕಾ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಗೋಜಿಗೆ ನಾನು ಹೋಗುವುದಿಲ್ಲ. ನಾನು ನಿರ್ಮಿಸುತ್ತಿರುವ 'ರಾಧಿಕನ್ ಗಂಡ' ಅವರ ಜೀವನದ ಕುರಿತ ಸಿನಿಮಾ ಅಲ್ಲ. ಇಲ್ಲಿ ಅವರ ಯಾವುದೇ ಉಲ್ಲೇಖಗಳೂ ಇರುವುದಿಲ್ಲ ಎಂದು ಭರವಸೆ ನೀಡಿದ ಹೊರತಾಗಿಯೂ ಆಕ್ಷೇಪಗಳು ಬಂದಿವೆ ಎಂದರು.

ಕೋಮಲ್ ನಿರ್ಮಿಸಿ, ನಟಿಸುತ್ತಿರುವ 'ರಾಧಿಕನ್ ಗಂಡ'ನನ್ನು ನಿರ್ದೇಶಿಸುತ್ತಿರುವುದು ತಮಿಳಿನ ಮುರುಗನ್. ಜೋಶ್ ಖ್ಯಾತಿಯ ಪೂರ್ಣಾ ಇಲ್ಲಿ ನಾಯಕಿ.

ಕುಮಾರಸ್ವಾಮಿ ಮತ್ತು ರಾಧಿಕಾರಿಗೆ ಸಂಬಂಧವೇ ಇಲ್ಲದ ಚಿತ್ರವಾದರೇ, ವಿವಾದಿತ ಹೆಸರೇ ಯಾಕೆ ಬೇಕು? ಇದು ಪ್ರಶ್ನೆ. ಆದರೆ ಇದಕ್ಕೆ ಕೋಮಲ್ ತನ್ನದೇ ಉತ್ತರ ನೀಡುತ್ತಾರೆ. ಈ ಹಿಂದೆ ಡಾ. ಕೃಷ್ಣ ಅಂತ ಚಿತ್ರ ಬಂದಿತ್ತು. ವಿಶಾಲಕ್ಷಮ್ಮನ್ ಗಂಡ ಅನ್ನೋ ಚಿತ್ರವೂ ಬಂದಿತ್ತು. ಆದರೆ ಅವುಗಳು ಹಿಟ್ಟೇ ಆಗಿರಲಿಲ್ಲ. ಕಾರಣ, ಶೀರ್ಷಿಕೆಗಳು ಗಮನ ಸೆಳೆಯುವಂತಿರಲಿಲ್ಲ. ನಮಗೆ ಜನಪ್ರಿಯ ವ್ಯಕ್ತಿಗಳ ಹೆಸರು ಬೇಕಿತ್ತು. ಹಾಗಾಗಿ 'ರಾಧಿಕನ್ ಗಂಡ' ಎಂಬ ಹೆಸರಿಟ್ಟಿದ್ದೇವೆ ಎನ್ನುತ್ತಾರೆ.

ಹೀಗೆ ಹೇಳುತ್ತಲೇ, ರಾಧಿಕಾಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಕೋಮಲ್, ಇದು ಚಿತ್ರನಟಿ ರಾಧಿಕಾರೇ ಆಗಿರಬೇಕಾಗಿಲ್ಲ. ರಾಧಿಕಾ ಪಂಡಿತ್ ಕೂಡ ಆಗಿರಬಹುದು. ಬೇರೆ ರಾಧಿಕಾಗಳೂ ನಮ್ಮಲ್ಲಿ ಸಾಕಷ್ಟಿದ್ದಾರೆ. ನಾವಂತೂ ಚಿತ್ರನಟಿ ರಾಧಿಕಾ ಅಥವಾ ಅವರ ಗಂಡನ ಕುರಿತು ಚಿತ್ರ ಮಾಡುತ್ತಿಲ್ಲ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

ಕೋಮಲ್ ಅವರಿಗಂತೂ ಕುಮಾರಸ್ವಾಮಿ ಮೇಲೆ ಅಪಾರ ಗೌರವ. ಹಾಗಾಗಿ ಅವರ ಹೆಸರನ್ನು ಕೆಡಿಸುವ ಯತ್ನ ಖಂಡಿತಾ ಅವರಿಂದ ನಡೆಯುವುದಿಲ್ಲ. ಹಾಗೂ ಸಂಶಯಗಳಿದ್ದರೆ, ಚಿತ್ರ ಸಿದ್ಧವಾದ ಮೇಲೆ ಒಮ್ಮೆ ನೋಡಿ ಖಾತರಿ ಮಾಡಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

ಅಂದ ಹಾಗೆ, ಈ ಚಿತ್ರ 'ಮೈ ವೈಫ್ ಈಸ್ ಆನ್ ಆಕ್ಟ್ರೆಸ್' ಎಂಬ ಹಾಲಿವುಡ್ ಸಿನಿಮಾಧರಿತ ಚಿತ್ರವಂತೆ. ನಾಯಕಿ ಪೂರ್ಣಾ ಸಿನಿಮಾದೊಳಗೂ ನಾಯಕಿಯಾಗಿಯೇ ಇರುತ್ತಾರೆ. ಆಕೆಯ ಗಂಡನಾಗಿ ಕೋಮಲ್ ಕೀಳರಿಮೆಗೊಳಗಾಗುವ ಕಥೆಯನ್ನು ಚಿತ್ರ ಹೊಂದಿದೆ. ಅದು ಎಲ್ಲಿಗೆ ತಲುಪುತ್ತದೆ ಅನ್ನೋದು ತಿರುಳಂತೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ