ರೆಡಿಯಾಗ್ತಿದೆ 'ಸಂಗೊಳ್ಳಿ ರಾಯಣ್ಣ'; ಸೆ.12ಕ್ಕೆ ಆಡಿಯೋ

PR
ಸಿಕ್ಕಾಪಟ್ಟೆ ಹೈಪ್ ಸೃಷ್ಟಿಯಾಗಲು ಇಲ್ಲಿ ಪ್ರೇಮ್‌‌ರಂತಹ ಯಾವುದೇ ಗಿಮಿಕ್ ಇಲ್ಲ. ಆದರೂ ಕುತೂಹಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾ ವರ್ಷಗಳ ನಂತರ ರೌಡಿಸಂ ಹೊರತುಪಡಿಸಿದ, ಅದರಲ್ಲೂ ಐತಿಹಾಸಿಕ ಚಿತ್ರವೊಂದರಲ್ಲಿ ನಟಿಸುವ ಅವಕಾಶವನ್ನು ಮೈಮೇಲೆಳೆದುಕೊಂಡವರು. ಹೇಗೆ ಮಾಡಿದ್ದಾರೋ? 30 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಚಿತ್ರ ಹೇಗಿದೆಯೋ?

ಆನಂದ್ ಅಪ್ಪುಗೋಳ್ ಅವರ ಕನಸಿನ ಕಲಾಕೃತಿಯಿದು. ಲಾಭ-ನಷ್ಟದ ಲೆಕ್ಕಾಚಾರ ಅವರಲ್ಲಿಲ್ಲ. ಅಂದುಕೊಂಡಂತೆ ಚಿತ್ರ ಬಿಡುಗಡೆಯಾಗಬೇಕು, ಜನ ಮೆಚ್ಚಬೇಕು, ಅದಕ್ಕೆ ಮೋಸವಾಗದಿದ್ದರೆ ಸಾಕು ಅನ್ನೋದಷ್ಟೇ ಅವರ ನಿರೀಕ್ಷೆ. ಸರಿಯೆಂಬಂತೆ ವರ್ಷಗಟ್ಟಲೆ ರಾತ್ರಿ-ಹಗಲು ತಪಸ್ಸು ಮಾಡಿದಂತೆ ಶ್ರಮಿಸುತ್ತಿದೆ ತಂತ್ರಜ್ಞರ ಟೀಮ್. ಇನ್ನೇನು ಅಂತಿಮ ಹಂತಕ್ಕೆ ಬಂದಿದೆ.

ಅದರ ಕುರುಹೆಂಬಂತೆ ಈಗ ಆಡಿಯೋ ಬಿಡುಗಡೆಯ ಪರ್ವಕಾಲ. ಸೆಪ್ಟೆಂಬರ್ 12ರಂದು ಧ್ವನಿಸುರುಳಿ ಗಣ್ಯರ ಸಮ್ಮುಖದಲ್ಲಿ ಅರ್ಪಣೆ. ಕಾರ್ಯಕ್ರಮಕ್ಕೆ ಯಾರೆಲ್ಲ ಬರುತ್ತಾರೆ ಅನ್ನೋದು ಖಾತ್ರಿಯಾಗಿಲ್ಲ. ಆದರೆ ರೆಬೆಲ್ ಸ್ಟಾರ್ ಅಂಬರೀಷ್ ಸೇರಿದಂತೆ ಚಿತ್ರರಂಗದ ಪ್ರಮುಖರು ಆ ದಿನ ಅಲ್ಲಿರುತ್ತಾರೆ. ಕಿಚ್ಚ ಸುದೀಪ್ ಹಾಜರಿಯಂತೂ ಪೂರ್ವಲಿಖಿತ.

ಇನ್ನು ರಿಯಲ್ ಸ್ಟಾರ್ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಇತರೆ ಅತಿಥಿಗಳನ್ನು ಕರೆಸುವ ಯತ್ನ ನಡೆಯುತ್ತಿದೆ. ದರ್ಶನ್ ಅನಾದಿಕಾಲದ ಸ್ನೇಹಿತರೂ ಸಮಾರಂಭವನ್ನು ರಂಗೇರಿಸಲಿದ್ದಾರೆ.

ಆರಂಭದಲ್ಲಿ ಸುದ್ದಿಯಾಗಿದ್ದ ಪ್ರಕಾರ, 'ಸಂಗೊಳ್ಳಿ ರಾಯಣ್ಣ'ದ ಆಡಿಯೋ ಹಕ್ಕುಗಳನ್ನು ಬರೋಬ್ಬರಿ 64 ಲಕ್ಷ ರೂಪಾಯಿಗಳಿಗೆ ಅಶ್ವಿನಿ ಆಡಿಯೋ ಖರೀದಿಸಿದೆ. ಈಗ ಸಮರ್ಥ ವೆಂಚರ್ಸ್ ಪ್ರಸಾದ್ ತೆಕ್ಕೆಯಲ್ಲಿರುವ ಆಡಿಯೋ ಕಂಪನಿ, ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದೆ.

ಕೇಶವಾದಿತ್ಯ ಬರೆದಿರುವ ಕಥೆ, ಸಂಭಾಷಣೆಯ ಚಿತ್ರವನ್ನು ನಿರ್ದೇಶಿಸಿರುವುದು ನಾಗಣ್ಣ. ಯಶೋ ವರ್ಧನ್ ಸಂಗೀತ, ಹರಿಕೃಷ್ಣ ಹಿನ್ನೆಲೆ ಸಂಗೀತ, ರಮೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ.

ಇನ್ನು ಕೆಲವು ಮೂಲಗಳ ಪ್ರಕಾರ, 'ಸಂಗೊಳ್ಳಿ ರಾಯಣ್ಣ' ಚಿತ್ರ ತೆರೆಗೆ ಬರುವ ಸಂದರ್ಭದಲ್ಲಿ ನಿರ್ಮಾಪಕರಿಗೆ ನಷ್ಟವಾಗದಂತೆ ಇಡೀ ಚಿತ್ರರಂಗ ಬೆಂಬಲ ನೀಡುವ ಯೋಜನೆಯೊಂದನ್ನು ಹಾಕಿಕೊಂಡಿದೆ. ಈ ಚಿತ್ರ ಬಿಡುಗಡೆಯ ಆಚೀಚೆ ಕೆಲವು ವಾರಗಳ ಕಾಲ ಬೇರೆ ಯಾವುದೇ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡದೇ ಇರಲು ನಿರ್ಧರಿಸಿತ್ತು. ಈ ಸಂಬಂಧ ಕೆಲವು ತಿಂಗಳುಗಳ ಹಿಂದೆಯೇ ಮಾತುಕತೆ ನಡೆದಿದೆಯಂತೆ. ಹಲವು ನಿರ್ಮಾಪಕರು ಈ ಸೂತ್ರಕ್ಕೆ ಬದ್ಧರಾಗಿದ್ದಾರೆ ಎಂದು ಆಗ ಹೇಳಲಾಗಿತ್ತು. ಈಗ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ವೆಬ್ದುನಿಯಾವನ್ನು ಓದಿ