ವಿಷ್ಣುವಿಗೆ ಯಾರಾದರೂ ಪ್ರಶಸ್ತಿ ಕೊಡುತ್ತಿದ್ದರು: ದ್ವಾರಕೀಶ್

EVENT
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಟನೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಬಾರಿಯ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಿಕೆಯಲ್ಲಿ ಭಾವನಾತ್ಮಕತೆಯೇನಾದರೂ ಕೆಲಸ ಮಾಡಿದೆಯೇ? ಇಂತಹ ಪ್ರಶ್ನೆ ಬಂದದ್ದು, ವಿಷ್ಣು 'ಆಪ್ತಮಿತ್ರ' ದ್ವಾರಕೀಶ್‌ಗೆ. ಯಾಕೆಂದರೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಅವರೂ ಇದ್ದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಶ್ನೆಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಆಯ್ಕೆ ಸಮಿತಿ ಮುಖ್ಯಸ್ಥ ದ್ವಾರಕೀಶ್, ಸ್ನೇಹ ಬೇರೆ, ಪ್ರಶಸ್ತಿ ಬೇರೆ; ವಿಷ್ಣು ನನ್ನ ಗೆಳೆಯ ಹೌದು. ಆದರೆ ಪ್ರಶಸ್ತಿ ನೀಡುವ ವಿಚಾರದಲ್ಲಿ ಇಂತಹ ಭಾವನಾತ್ಮಕ ಅಂಶಗಳು ಕೆಲಸ ಮಾಡಿಲ್ಲ. ಅಷ್ಟಕ್ಕೂ ಆಪ್ತರಕ್ಷಕದಲ್ಲಿನ ನಟನೆಗೆ ಬೇರೆ ಯಾರಾದರೂ ಪ್ರಶಸ್ತಿ ಕೊಟ್ಟೇ ಕೊಡುತ್ತಿದ್ದರು. ಅವನೊಬ್ಬ ಅದ್ಭುತ ನಟ. ಆ ವಯಸ್ಸಲ್ಲಿ ಹಾಗೆ ತ್ರಿಪಾತ್ರಗಳಲ್ಲಿ ನಟಿಸುವುದೆಂದರೆ ಸುಲಭವಲ್ಲ ಎಂದರು.

ಆದರೂ ಪ್ರಶಸ್ತಿ ಮರಣೋತ್ತರವಾಗಿ ಸಲ್ಲಿಕೆಯಾಗುತ್ತಿರುವುದು ಸಂತಸದ ವಿಚಾರವಲ್ಲ ಎನ್ನುವುದರ ಜತೆಗೇ, ಹೀಗೆ ಪ್ರಶಸ್ತಿ ನೀಡಲ್ಪಡುತ್ತಿರುವುದು ಇದೇ ಮೊದಲು ಎಂದು ಕುಳ್ಳ ನೆನಪಿಸಿದರು.

ಬುಧವಾರ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಕಟಿಸಿದ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ವಿಷ್ಣುವರ್ಧನ್ ಅವರು ಶ್ರೇಷ್ಠ ನಟ ಗೌರವಕ್ಕೆ ಪಾತ್ರರಾಗಿದ್ದರು. 'ಆಪ್ತರಕ್ಷಕ'ದ ಅವರ ನಟನೆಗೆ ಈ ಪ್ರಶಸ್ತಿ ಪ್ರಕಟಿಸಲಾಗಿತ್ತು.

ಪ್ರಶಸ್ತಿ ಬಂದಿರುವುದಕ್ಕೆ ಭಾರತಿ ವಿಷ್ಣುವರ್ಧನ್ ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ಜೀವನದಲ್ಲಿ ನಾನು ಸಂಭ್ರಮಿಸಬಹುದಾದ ವಿಶೇಷ ಸಂದರ್ಭವಿದು. ನನ್ನ ಗಂಡ ನಟನೆಯಲ್ಲಿ ಯುವರಾಜ ಮತ್ತು ಎಂತಹ ಕ್ಲಿಷ್ಟಕರ ಪಾತ್ರಗಳನ್ನೂ ನಿಭಾಯಿಸುವ ಸಾಮರ್ಥ್ಯ ಉಳ್ಳವರು ಅನ್ನೋದು ಈ ಪ್ರಶಸ್ತಿಯಿಂದ ಸಾಬೀತಾಗಿದೆ. ಅವರ ಅಭಿಮಾನಿಗಳಿಗೂ ಈ ಪ್ರಶಸ್ತಿ ಕೊಂಚ ಸಮಾಧಾನ ತರಬಹುದು ಎಂದಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ