ಶರ್ಟು ಬಿಚ್ಚುವ 'ಆ ದಿನಗಳ' ಚೇತನ್ ಎಂಬ 'ಕನ್ನಡದ ಸಲ್ಮಾನ್'!

MOKSHA
'ಆ ದಿನಗಳು' ಚಿತ್ರದ ಚೇತನ್ ಎಂಬ ಚೆಂದದ ಯುವಕ ಬಹುತೇಕ ಎಲ್ಲರನ್ನು ತನ್ನ ಸಹಜಾಭಿನಯದಿಂದ ಮೋಡಿ ಮಾಡಿದ್ದು ಸುಳ್ಳಲ್ಲ. ಸ್ವಲ್ಪ ನಾಚಿಕೆಯ ಸ್ವಭಾವದ ಹಿತ-ಮಿತ ಭಾಷಿ ಚೇತನ್ 'ಕನ್ನಡದ ಸಲ್ಮಾನ್ ಖಾನ್' ಪಟ್ಟವೇರಿದ್ದಾರೆಯೇ ಎಂಬ ಗುಮಾನಿ ಬಾರದಿರದು. ಯಾಕೆಂದರೆ ಇವರು ಈವರೆಗೆ ನಟಿಸಿದ ಎರಡೂ ಚಿತ್ರಗಳಲ್ಲಿ ತಮ್ಮ ಶರ್ಟು ಬಿಚ್ಚಿದ್ದಾರೆ. ಈಗ ಮುಂದೆ ಬರಲಿರುವ ಸೂರ್ಯಕಾಂತಿಯಲ್ಲೂ ಶರ್ಟು ಬಿಚ್ಚಿದ್ದಾರೆ ಎಂಬ ಅಂತೆಕಂತೆಗಳಿವೆ!

ಇಷ್ಟು ಚೆಂದನೆಯ ಹುಡುಗ ಶರ್ಟು ಬಿಚ್ಚಿದರೇನು ಮಹಾ ಬಿಡಿ ಎಂದು ಅತ್ತ ಹುಡುಗರೂ ಸೇರಿದಂತೆ ಹುಡುಗಿಯರು ಮುಸಿ ಮುಸಿ ನಗುತ್ತಾ ಉಗುರು ಕಚ್ಚುತ್ತಿದ್ದರೆ, ಇತ್ತ ಚೇತನ್ ಮಾತ್ರ, ನಾನು ಕನ್ನಡದ ಸಲ್ಮಾನ್ ಖಾನ್ ಖಂಡಿತ ನಾನಲ್ಲ. ಸಲ್ಮಾನ್‍ನಂತಹ ದೊಡ್ಡ ಸ್ಟಾರ್ ಎಲ್ಲಿ? ನಾನೆಲ್ಲಿ? ಎಂದಿದ್ದಾರೆ. ಅಷ್ಟೇ ಅಲ್ಲ. ನಾನು ಶರ್ಟು ಬಿಚ್ಚಿದ್ದು ನನ್ನ ಪಾತ್ರಗಳಿಗೆ ಅಗತ್ಯವಿದ್ದಾಗ ಮಾತ್ರ. ಹಾಗಾಗಿ ಶರ್ಟು ಬಿಚ್ಚುವ ಹೀರೋ ಎಂಬ ಹಣೆಪಟ್ಟಿ ನನಗ ಬೇಕಾಗಿಲ್ಲ ಎಂಬಂತೆ ನಿಧಾನವಾಗಿ ಉತ್ತರಿಸುತ್ತಾರೆ ಚೇತನ್.

ಆ ದಿನಗಳು ತಂದ ಯಶಸ್ಸನ್ನು ಬಿರುಗಾಳಿ ತರದಿದ್ದರೂ, ಖಂಡಿತವಾಗಿಯೂ ಸೂರ್ಯಕಾಂತಿ ತರುತ್ತೆ ಅನ್ನೋ ವಿಶ್ವಾಸ ಚೇತನ್‌ದು. ಉಜ್ಬೇಕಿಸ್ತಾನ, ಉತ್ತರಾಂಚಲಗಳಲ್ಲಿ ಶೂಟಿಂಗ್ ಮುಗಿಸಿದ್ದಾಗಿದೆ. ಚಿತ್ರ ತಾಂತ್ರಿಕವಾಗಿ ಖಂಡಿತ ಉತ್ತಮವಾಗಿ ಮೂಡಿಬರಲಿದೆ. ಇಳಯರಾಜಾ ಅವರ ಸಂಗೀತವೂ ಚಿತ್ರದ ಪ್ರಮುಖ ಹೈಲೈಟ್. ವೇಣು ಅವರ ಛಾಯಾಗ್ರಹಣವೂ ಚಿತ್ರಕ್ಕಿದೆ. ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ನಿಜಕ್ಕೂ ಇದು ಉತ್ತಮ ಯಶಸ್ಸನ್ನೇ ತರಲಿದೆ ಎನ್ನುತ್ತಾರೆ ಚೇತನ್.
MOKSHA


ಸೂರ್ಯಕಾಂತಿ ಚಿತ್ರ ತೆಲುಗಿನ ಅತಡು ಚಿತ್ರದ ರಿಮೇಕ್ ಅನ್ನೋ ಗಾಳಿಸುದ್ದಿಯಿದೆಯಲ್ಲಾ ಅಂದರೆ, ಚೇತನ್ ಬಲವಾಗಿ ನಿರಾಕರಿಸುತ್ತಾರೆ. ಖಂಡಿತಾ ಸೂರ್ಯಕಾಂತಿ ಯಾವುದೇ ಚಿತ್ರದ ರಿಮೇಕ್ ಅಲ್ಲ. ಇದು ಪಕ್ಕಾ ಸ್ವಮೇಕ್. ಕೆ.ವೈ.ನಾರಾಯಣಸ್ವಾಮಿ ಅವರು ಬರೆದ ಕಥೆಯೇ ಈ ಚಿತ್ರ. ನನಗೆ ರಿಮೇಕ್ ಚಿತ್ರಗಳಲ್ಲೆಲ್ಲಾ ನಂಬಿಕೆಯಿಲ್ಲ ಎಂದು ಹೇಳುತ್ತಾರೆ ಚೇತನ್.

ಚೇತನ್ ಆ ದಿನಗಳು ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು ಎರಡು ವರ್ಷವೇ ಕಳೆದಿದೆ. ಆದರೂ ಈವರೆಗೆ ನಟಿಸಿದ್ದೇ ಎರಡು ಚಿತ್ರ. ಯಾಕೆ ಹೀಗೆ? ಎಂದರೆ, ನಾನು ಚಿತ್ರ ಒಳ್ಳೆಯದಿದೆ ಅನಿಸಿದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಇಲ್ಲವಾದರೆ ಇಲ್ಲ. ನಾನು ತುಂಬಾ ಚ್ಯೂಸಿ. ನಾನು ಎಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ ಎಂಬುದಕ್ಕೆ ಮಹತ್ವ ನೀಡಲ್ಲ. ಎಂಥಾ ಚಿತ್ರಗಳಲ್ಲಿ ನಟಿಸಿದ್ದೇನೆ ಅನ್ನೋದಷ್ಟೆ ನನಗೆ ಮುಖ್ಯ ಎಂದು ಅಷ್ಟೇ ಸ್ಪಷ್ಟವಾಗಿ ಉತ್ತರಿಸುತ್ತಾರೆ ಚೇತನ್.

ಸದ್ಯಕ್ಕೆ ಚೇತನ್‌ಗೆ ಸುನಿಲ್ ಕುಮಾರ್ ದೇಸಾಯಿ ಅವರ ಮುಂದಿನ ಚಿತ್ರದಲ್ಲಿ ನಾಯಕ ನಟನ ಅವಕಾಶ ಸಿಕ್ಕಿದೆ. ಅದಕ್ಕಾಗಿ 60 ದಿನಗಳಿಗಾಗಿ ಯುರೋಪ್‌ಗೆ ಶೂಟಿಂಗ್‌ಗಾಗಿ ತೆರಳುತ್ತಿದ್ದಾರೆ ಚೇತನ್. ಚಿತ್ರದಲ್ಲಿ ಟೆನಿಸ್ ಆಟಗಾರನ ಪಾತ್ರ ನಿರ್ವಹಿಸಲಿರುವ ಚೇತನ್, ಇದೊಂದು ತುಂಬಾ ಡಿಫರೆಂಟ್ ಆದ ಚಿತ್ರ ಎನ್ನುತ್ತಾರೆ. 18ರಿಂದ 20ರ ಹರೆಯದ ಟೆನಿಸ್ ಆಡಿ ಅಭ್ಯಾಸವಿದೆ ಎನ್ನುವ ಚೇತನ್ ಅವರ ಈ ಹೊಸ ಹೆಸರಿಡದ ಚಿತ್ರದ ಶೂಟಿಂಗ್ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. ಚೇತನ್‌ಗೆ 'ಗುಡ್ ಲಕ್' ಎನ್ನದಿರೋದು ಹೇಗೆ?

ವೆಬ್ದುನಿಯಾವನ್ನು ಓದಿ