ಶಿವಣ್ಣ, ರವಿಚಂದ್ರನ್ ಜತೆ ನಟಿಸಲು ನೋ ಅಂದರೇ ಪಾರುಲ್?

ಬುಧವಾರ, 17 ಏಪ್ರಿಲ್ 2013 (10:16 IST)
PR
PR
'ಗೋವಿಂದಾಯ ನಮಃ' ಚಿತ್ರದ ಮೂಲಕ ಹೊಸ ಅಲೆ ಬೀಸಿದ ಪಾರುಲ್ ಯಾದವ್ ಅಷ್ಟು ಸುಲಭದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂಬುದು ಅವರು ನಟಿಸಿರುವ ಚಿತ್ರಗಳನ್ನು ನೋಡಿದಾಗಲೇ ಲೆಕ್ಕಾಚಾರ ಹಾಕಬಹುದು. ಆದರೂ ಇಬ್ಬರು ಹಿರಿಯ ನಟರ ಜತೆ ನಟಿಸಲು ಅವರು ನಿರಾಕರಿಸಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗುತ್ತಿದೆ.

ಮೂಲಗಳ ಪ್ರಕಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗುವ ಅವಕಾಶ ಪಾರುಲ್ ಯಾದವ್ ಅವರನ್ನು ಹುಡುಕಿಕೊಂಡು ಬಂದಿತ್ತು. ಆದರೆ ಇಬ್ಬರು 50 ವರ್ಷ ಕಳೆದಿರುವ ನಾಯಕ ನಟರು ಎಂಬ ಕಾರಣಕ್ಕೆ ಪಾರುಲ್ ಬೇಡ ಎಂದು ಹೇಳಿದ್ದಾರಂತೆ.

ಪಾರುಲ್ ನಟಿಸಿದ ಮೊದಲ ಕನ್ನಡ ಚಿತ್ರ 'ಗೋವಿಂದಾಯ ನಮಃ'. ಎರಡನೇ ಚಿತ್ರ ಕಿಚ್ಚ ಸುದೀಪ್ ನಾಯಕನಾಗಿರುವ 'ಬಚ್ಚನ್'. ಈ ನಡುವೆ ಹಂಗಿಗೆ ಬಿದ್ದು ಕೋಮಲ್ ಜತೆ ಎರಡನೇ ಬಾರಿ 'ನಂದೀಶ' ಚಿತ್ರದಲ್ಲಿ ನಟಿಸಿದ್ದರು. ಇಷ್ಟು ಬಿಟ್ಟರೆ ಪಾರುಲ್ ಹೆಸರಲ್ಲಿ ಬೇರೆ ಯಾವುದೇ ಕನ್ನಡ ಚಿತ್ರಗಳಿಲ್ಲ.

ಇತ್ತೀಚೆಗಷ್ಟೇ ಶಿವಣ್ಣ ನಾಯಕನಾಗಿರುವ ಡಿ. ರಾಜೇಂದ್ರ ಬಾಬು ನಿರ್ದೇಶನದ 'ಆರ್ಯನ್' ಚಿತ್ರಕ್ಕೆ ನಾಯಕಿಯಾಗುವ ಆಫರನ್ನು ಪಾರುಲ್‌ಗೂ ನೀಡಲಾಗಿತ್ತು. ಆಗ ಪಾರುಲ್ ನೀಡಿದ ಉತ್ತರ, ಬ್ಯುಸಿಯಾಗಿದ್ದೇನೆ.

ನಂತರ ರವಿಚಂದ್ರನ್ ನಾಯಕನಾಗಿರುವ 'ಅಪೂರ್ವ' ಆಫರ್ ಕೂಡ ಬಂದಿತ್ತು. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಚುಂಬಿಸುವ ದೃಶ್ಯಗಳೂ ಇದ್ದವು. ಹಾಗಾಗಿ ಯೋಚನೆ ಮಾಡಲು ಕಾಲಾವಕಾಶ ನೀಡಿ ಎಂದು ಪಾರುಲ್ ಬೇಡಿಕೆ ಇಟ್ಟರಂತೆ. ಇದು ರವಿಚಂದ್ರನ್‌ಗೆ ಇಷ್ಟವಾಗಿರಲಿಲ್ಲ. ಸಹವಾಸವೇ ಬೇಡ ಎಂದು ಬೇರೆ ನಾಯಕಿಯ ಮೊರೆ ಹೋಗಿದ್ದಾರೆ.

ವಾಸ್ತವದಲ್ಲಿ ಹೀಗೆ ಇಬ್ಬರು ಹಿರಿಯ ನಟರ ಚಿತ್ರಗಳನ್ನು ನಿರಾಕರಿಸಲು ಕಾರಣ, ಅವರಿಗೆ ವಯಸ್ಸಾಗಿದೆ ಎನ್ನುವುದು. 50 ಕಳೆದಿರುವ ನಟರು ಆಗಿರುವುದರಿಂದ ಅವರ ಜತೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಸಹಜವಾಗಿರುವುದು ಕಷ್ಟ ಎಂಬ ಕಾರಣಕ್ಕೆ ಆ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ ಎನ್ನುವುದು ಗಾಂಧಿನಗರದ ಗಲ್ಲಿಯಲ್ಲಿ ಹರಡಿರುವ ಗುಸುಗುಸು.

ವೆಬ್ದುನಿಯಾವನ್ನು ಓದಿ