ಶಿವರಾಜ್ ಕುಮಾರ್‌ಗೆ ಎರಡನೇ ಪತ್ನಿ ಆಗುವಾಸೆ: ಉಪೇಂದ್ರ

PR
ಅದು 'ಟೋಪಿವಾಲ' ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ. ಇಡೀ ಸಮಾರಂಭದಲ್ಲಿ ಆತ್ಮೀಯರೆನಿಸಿಕೊಂಡವರು ಅಕ್ಕಪಕ್ಕ ಕುಳಿತು ಉಭಯ ಕುಶಲೋಪರಿ ನಡೆಸುತ್ತಿದ್ದರು. ವೇದಿಕೆ ಏರಿದವರಂತೂ ಒಬ್ಬರನ್ನೊಬ್ಬರು ಹೊಗಳುವುದು, ಅಪ್ಪಿಕೊಳ್ಳುವುದು ನಡೆದೇ ಇತ್ತು. ಈ ಸಂದರ್ಭ ಹಲವು ಸ್ವಾರಸ್ಯಕರ ಅಂಶಗಳು ಪ್ರಮುಖರ ಬಾಯಿಯಿಂದ ಹೊರ ಬಿತ್ತು.

ಉಪ್ಪಿ ಹುಚ್ಚು ಪ್ರೀತಿ:
ನಾನು ಎಲ್ಲಾದರೂ ಹುಡುಗಿ ಆಗಿರುತ್ತಿದ್ದರೆ ಗೀತಕ್ಕನಿಗೆ ನಾನು ಸವತಿಯಾಗಿರುತ್ತಿದ್ದೆ -- ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ಸಾಕ್ಷಾತ್ ಉಪ್ಪಿ. ಈ ಮಾತು ಕೇಳಿದ ಶಿವಣ್ಣನಿಗೆ ಮಾತೇ ಹೊರಡಲಿಲ್ಲ. ಉಪ್ಪಿಯ ಪ್ರೀತಿಯ ಮಾತಿಗೆ ಮರು ಮಾತಾಡಲಿಲ್ಲ.

ಉಪ್ಪಿ ಜತೆ ನಟಿಸಬೇಕು: ಶಿವಣ್ಣ
ಉಪ್ಪಿ ನಿರ್ದೇಶನದ ಓಂ ನನಗೆ ದೊಡ್ಡ ಬ್ರೇಕ್ ನೀಡಿದ ಚಿತ್ರ. ನಂತರ ಪ್ರೀತ್ಸೆ ಮತ್ತು ಲವಕುಶ ಚಿತ್ರಗಳಲ್ಲಿ ಜತೆಯಾಗಿ ನಟಿಸಿದೆವು. ನಮ್ಮ ನಡುವಿನ ಆತ್ಮೀಯತೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಈಗ ಮತ್ತೆ ಅವರ ಜತೆ ನಟಿಸಬೇಕೆಂಬ ಆಸೆಯಾಗುತ್ತಿದೆ. ಅವರು ಒಳ್ಳೆಯ ನಿರ್ದೇಶಕರು ಮಾತ್ರವಲ್ಲ, ನಟ ಕೂಡ ಹೌದು. ಅವಕಾಶ ಸಿಕ್ಕಿದರೆ ಮತ್ತೆ ನಟಿಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದರು.

ಉಪ್ಪಿ ಫ್ಯಾನ್ ಅಪ್ಪು:
ಇದು ಉಪ್ಪಿಯ ಯಾವುದೇ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇಳುವ ಮಾತು. ಮೊದಲ ಚಿತ್ರದಿಂದಲೂ ನಾನು ಅವರ ಅಭಿಮಾನಿ. ಎ ಚಿತ್ರದಲ್ಲಿ ಬುದ್ಧಿವಂತರಿಗಾಗಿ ಎಂದವರು ಈಗ ಟೋಪಿವಾಲ ಚಿತ್ರದಲ್ಲಿ ತಲೆ ಇಲ್ಲದವರಿಗಲ್ಲ ಎನ್ನುತ್ತಿದ್ದಾರೆ. ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದರು.

ಟೋಪಿ ಹಾಕಲ್ಲ: ಉಪ್ಪಿ
ನಮ್ಮ ಪ್ರೇಕ್ಷಕರಿಗೆ ತಲೆ ಇದೆ. ಹಾಗಾಗಿ ನಿಜವಾದ ಟೋಪಿಯನ್ನು ಸಿನಿಮಾದ ಮೇಲೆ ಹಾಕಲಾರರು ಎಂಬ ಭರವಸೆ ನಮ್ಮದು. ಅದಕ್ಕೆ ಕಾರಣ, ಚಿತ್ರದ ಗುಣಮಟ್ಟ ಮತ್ತು ಕಥೆ ಎಂದ ಉಪ್ಪಿ, ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪ್ಪಿ ಗುರು: ಶ್ರೀನಿ
ಉಪ್ಪಿ ನನ್ನ ಪಾಲಿಗೆ ಗುರು, ಮಾರ್ಗದರ್ಶನಕ ಮತ್ತು ಫಿಲಾಸಫರ್. ಸಿನಿಮಾದ ಬಗ್ಗೆ ಅಪಾರ ಭರವಸೆಯಿದೆ. ಫೆ.13ರಂದೇ ಆಡಿಯೊ ಮಾರುಕಟ್ಟೆಗೆ ಹೋಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಹಾಡಿಗಂತೂ ಯೂಟ್ಯೂಬ್‌ನಲ್ಲಿ 35,000 ಹಿಟ್ ಸಿಕ್ಕಿದೆ. ತುಂಬಾ ಸಂತೋಷವಾಗುತ್ತಿದೆ ಎಂದರು ನಿರ್ದೇಶಕ ಶ್ರೀನಿವಾಸ್.

ಇಷ್ಟೆಲ್ಲ ನಡೆದದ್ದು 'ಟೋಪಿವಾಲ' ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ. ಶಿವರಾಜ್ ಕುಮಾರ್ ಮತ್ತು ಡಿ.ಕೆ. ಶಿವರಾಜ್ ಕುಮಾರ್ ಆಡಿಯೊ ಸಿಡಿ ಬಿಡುಗಡೆ ಮಾಡಿದರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ಮಾಪಕ ಕನಕಪುರ ಶ್ರೀನಿವಾಸ್, ಮುನಿರತ್ನ, ಎಂ.ಎಸ್.ರಮೇಶ್, ನಾಗಶೇಖರ್, ಎ.ಪಿ. ಅರ್ಜುನ್, ಕೆ. ಮಂಜು, ಅರುಣ್ ಸಾಗರ್, ಭಾಷಾ ಮುಂತಾದವರು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ