'ಶಿವಾಜಿನಗರ'ದಲ್ಲಿ ದುನಿಯಾ ವಿಜಿ ಜತೆ ಪಾರುಲ್ ರೊಮ್ಯಾನ್ಸ್

ಶುಕ್ರವಾರ, 24 ಮೇ 2013 (14:01 IST)
PR
PR
'ಬಚ್ಚನ್' ಚಿತ್ರ ಮುಗಿಯದೆ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ಪಾರುಲ್ ಯಾದವ್ ಕೊನೆಗೂ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. 'ಶಿವಾಜಿನಗರ' ಚಿತ್ರದಲ್ಲಿ ನಾಯಕ ದುನಿಯಾ ವಿಜಯ್ ಜತೆ ಅವರು ರೊಮ್ಯಾನ್ಸ್ ಮಾಡಲಿದ್ದಾರೆ!

ಆದರೆ ಪಾರುಲ್ ಆಯ್ಕೆ ಗಾಂಧಿನಗರಿಯಲ್ಲಿ ಅಚ್ಚರಿ ಹುಟ್ಟು ಹಾಕಿದೆ. ಕಾರಣ, ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿರುವ ಪಾರುಲ್ ರೌಡಿಸಂ ಕಥೆಯ ಸಿನಿಮಾ ಒಪ್ಪಿಕೊಂಡಿರುವುದು. ರೌಡಿಸಂ ಚಿತ್ರಗಳಲ್ಲಿ ಸಾಮಾನ್ಯವಾಗಿ ನಾಯಕಿಯರಿಗೆ ಕೆಲಸವೇ ಇರುವುದಿಲ್ಲ. ಎರಡನೇಯದಾಗಿ, ಮಾರ್ಕೆಟ್ ಕಳೆದುಕೊಂಡಿರುವ ವಿಜಿಗೆ ನಾಯಕಿಯಾಗುತ್ತಿರುವುದು.

ಕೋಟಿ ರಾಮು ನಿರ್ಮಾಣದ 'ಶಿವಾಜಿನಗರ' ಚಿತ್ರವನ್ನು ನಿರ್ದೇಶಿಸುತ್ತಿರುವುದು ಪಿ.ಎನ್. ಸತ್ಯ. ಚಿತ್ರ ಶೀಘ್ರದಲ್ಲೇ ಸೆಟ್ಟೇರುತ್ತಿದೆ.

ಇದೇ ಪಾರುಲ್ ಯಾದವ್ ಈ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರಗಳ ಆಫರ್ ತಿರಸ್ಕರಿಸಿದ್ದರು. ಕಾರಣ, ಅವರು ಹಿರಿಯ ನಾಯಕರು ಎನ್ನುವುದು. 50 ದಾಟಿದ ನಾಯಕರ ಜತೆ ಅಭಿನಯಿಸುವುದಿಲ್ಲ ಎಂಬ ಅಲಿಖಿತ ನಿಯಮವೊಂದನ್ನು ಪಾರುಲ್ ಹಾಕಿಕೊಂಡಿದ್ದಾರೆ ಎಂದು ಆಗ ಸುದ್ದಿಯಾಗಿತ್ತು.

ಇಂತಹ ಪಾರುಲ್ ಇದುವರೆಗೆ ನಟಿಸಿರುವ ಒಟ್ಟು ಚಿತ್ರಗಳು ಮೂರೇ ಮೂರು. ಮೊದಲನೆಯದ್ದು ಎಲ್ಲರಿಗೂ ಗೊತ್ತಿರುವಂತೆ ಗೋವಿಂದಾಯ ನಮಃ. ಎರಡನೇಯದ್ದು ಬಚ್ಚನ್. ಇವೆರಡರ ನಡುವೆ ಮುಲಾಜಿಗೆ ಬಿದ್ದು ಕೋಮಲ್ ನಾಯಕನಾಗಿರುವ 'ನಂದೀಶ' ಚಿತ್ರದಲ್ಲೂ ನಟಿಸಿದ್ದರು. ಈಗ ಒಪ್ಪಿಕೊಂಡಿರುವ 'ಶಿವಾಜಿನಗರ' ನಾಲ್ಕನೇ ಚಿತ್ರ.

'ಶಿವಾಜಿನಗರ' ಚಿತ್ರಕ್ಕೆ ಗ್ಲಾಮರ್ ನಾಯಕಿಯ ಅಗತ್ಯವಿತ್ತು. ಅದಕ್ಕೆ ಪಾರುಲ್ ಹೊಂದುತ್ತಾರೆ ಎಂದು ಅವರನ್ನೇ ಆಯ್ಕೆ ಮಾಡಿದ್ದೇವೆ ಎಂದು ನಿರ್ಮಾಪಕ ರಾಮು ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಜೆಸ್ಸಿ ಗಿಫ್ಟ್. ಸದ್ಯ ಜಯಮ್ಮನ ಮಗ ಚಿತ್ರದ ಬಿಡುಗಡೆ ಲೆಕ್ಕಾಚಾರದಲ್ಲಿರುವ ವಿಜಯ್ ಶೀಘ್ರದಲ್ಲೇ ಹೊಸ ಚಿತ್ರದತ್ತ ಹೊರಳಲಿದ್ದಾರೆ.

'ಶಿವಾಜಿನಗರ' ಚಿತ್ರದಲ್ಲಿ ನನಗೆ ನಟನೆಗೆ ಅವಕಾಶವಿದೆ. ನೃತ್ಯಕ್ಕೂ ಅವಕಾಶವಿದೆ. ನನ್ನ ಪಾತ್ರಕ್ಕೆ ಎರಡು ಶೇಡ್‌ಗಳಿವೆ. ಕಥೆ ತುಂಬಾ ಇಷ್ಟವಾಗಿದೆ. ಬಚ್ಚನ್ ಚಿತ್ರದಂತೆ ಇದೂ ಭಿನ್ನವಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಪಾರುಲ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ