ಶುಭ 'ಮುಂಜಾನೆ' ನಿರೀಕ್ಷೆಯಲ್ಲಿ ಭಗ್ನಪ್ರೇಮಿ ಗಣೇಶ್

SUJENDRA
ಗೋಲ್ಡನ್ ಸ್ಟಾರ್ ಗಣೇಶ್ ನಿಜ ಜೀವನದಲ್ಲೂ ಭಗ್ನಪ್ರೇಮಿಯೇ? ಗೊತ್ತಿಲ್ಲ. ಅದ್ಯಾಕೋ ಅವರಿಗೆ ಸಿನಿಮಾಗಳಲ್ಲಿ ಮಾತ್ರ ಭಗ್ನಪ್ರೇಮಿಯ ಪಾತ್ರಗಳೇ ಸಿಗುತ್ತಿವೆ. ದುಃಖಾಂತ್ಯದ ಚಿತ್ರಗಳೇ ಕೈ ಹಿಡಿಯುತ್ತಿವೆ. ಆ ಸಾಲಿಗೆ ಇನ್ನೊಂದು ಸೇರ್ಪಡೆ ಎಸ್. ನಾರಾಯಣ್ 'ಮುಂಜಾನೆ'.

ರಿಮೇಕ್ ಅಲ್ಲ ಎಂದು ಹೇಳಿರುವ ನಾರಾಯಣ್ 'ಮುಂಜಾನೆ' ಮಾರ್ಚ್ 2ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ರಿಮೇಕ್ 'ಶೈಲೂ'ವಿನಲ್ಲಿ ಹೇಳಿಕೊಳ್ಳುವ ಯಶಸ್ಸು ಪಡೆಯದ ಗಣೇಶ್‌ಗೆ ಇದು ಮತ್ತೊಂದು ನಿರೀಕ್ಷೆಯ ಸಿನಿಮಾ.

ಗಣೇಶ್ ನಿರೀಕ್ಷೆಗಳೀಗ ದಿನೇದಿನೇ ಬೇಡಿಕೆಯನ್ನೇ ಕಳೆದುಕೊಳ್ಳುತ್ತಿವೆ. ಕಾರಣ, ಸಿನಿಮಾ ಚೆನ್ನಾಗಿದ್ದರೂ ಪ್ರೇಕ್ಷಕರು ಇಷ್ಟಪಡುತ್ತಿಲ್ಲ. ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರದ ನಂತರ ಒಂದಷ್ಟು ಕೆಟ್ಟ ಚಿತ್ರಗಳಲ್ಲಿ ಅಭಿನಯಿಸಿದ್ದು ನಿಜವಾದರೂ, ಸುನಿಲ್ ಕುಮಾರ್ ಸಿಂಗ್‌ರ 'ಮದುವೆ ಮನೆ' ಚೆನ್ನಾಗಿತ್ತು. ಅದರ ನಂತರ ಬಂದ ತಮಿಳಿನ 'ಮೈನಾ' ರಿಮೇಕ್ 'ಶೈಲೂ' ಕೂಡ ಪ್ರೇಕ್ಷಕರ ಮನಕಲುಕುವ ಸ್ಟೋರಿ. ಆದರೆ ಅಭಿಮಾನಿಗಳು ಎಲ್ಲೋ ಕಳೆದು ಹೋಗಿದ್ದಾರೆ, ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಲೇ ಇಲ್ಲ.

ಸಹಜವಾಗಿಯೇ ಗಣೇಶ್ ಸಿನಿ ಜೀವನ ಅಪಾಯಕ್ಕೆ ಸಮೀಪದಲ್ಲಿದೆ. ಇದರಿಂದ ಪಾರಾಗಲು ಗಣೇಶ್‌ಗೆ ಒಂದು ದೊಡ್ಡ ಹಿಟ್ ಬೇಕು. ಅದು ಮಂಜರಿ ಪದ್ನಿಸ್ ನಾಯಕಿಯಾಗಿರುವ 'ಮುಂಜಾನೆ'ಯಲ್ಲಿ ಸಿಗಬಹುದು ಅನ್ನೋದು ಗಣೇಶ್ ಆಸೆ. ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಇದು ಭಿನ್ನವಾಗಿದೆ, ಇಲ್ಲಿ ನಾನು ಭಗ್ನಪ್ರೇಮಿ ಮನುಮೂರ್ತಿಯ ಪಾತ್ರದಲ್ಲಿ ನಟಿಸಿದ್ದೇನೆ. ಖಂಡಿತಾ ಹಿಟ್ಟಾಗುತ್ತೆ ಅಂತಾರೆ.

ಸದಾ ರಿಮೇಕ್ ಸುತ್ತುವ ನಾರಾಯಣ್ ಈ ಬಾರಿ ಸ್ವಮೇಕ್ ಮಾಡಿದ್ದಾರೆ. ಎಲ್ಲೋ ತಾನೇ ಕಂಡ ಪ್ರಸಂಗಗಳನ್ನು ಹೆಣೆದು ಕಥೆ ಮಾಡಿದ್ದಾರಂತೆ.

ಗಣೇಶ್ ಜತೆಗಿನ ಚೆಲುವಿನ ಚಿತ್ತಾರ ಮತ್ತು ಶೈಲೂ ಚಿತ್ರಗಳಿಗಿಂತ ಮುಂಜಾನೆ ತುಂಬಾನೇ ಡಿಫರೆಂಟ್. ಇದು ಸೂಕ್ಷ್ಮ ದೃಷ್ಟಿಕೋನದ ಚಿತ್ರ. ಹೊಸ ಸಂದೇಶವಿದೆ. ನಿರೀಕ್ಷೆಗಳನ್ನು ತಲುಪಿದ ಖುಷಿಯಿದೆ ಎನ್ನುವ ನಾರಾಯಣ್, ಜಸ್ಟ್ ಫೀಲ್ ಇಟ್ ಎಂದು ಸಲಹೆ ನೀಡುತ್ತಾರೆ.

ಭಗ್ನಪ್ರೇಮಿಯ ಪಾತ್ರದಲ್ಲಿ ನಟಿಸಿರುವ ಗಣೇಶ್ ಅಭಿನಯವನ್ನು ನೋಡುವುದೇ ಸೊಬಗು. ಅವರ ಎದೆಯಲ್ಲೊಂದು ನೋವು, ತುಟಿಯಲ್ಲೊಂದು ಮಾತು, ಕಣ್ಣಲ್ಲೊಂದು ಭಾವನೆ. ಇದನ್ನು ಬೇರೆ ಯಾವ ನಟರಲ್ಲೂ ಕಾಣಲಾಗದು. ಒಂದೇ ಫ್ರೇಮಿನಲ್ಲಿ ಇಷ್ಟೆಲ್ಲವನ್ನೂ ನೋಡಬೇಕೆಂದರೆ ಅದೃಷ್ಟ ಮಾಡಿರಬೇಕು. ನನಗಂತೂ ಅಚ್ಚರಿಯಾಗಿದೆ. ನವಿರು ಪ್ರೇಮಕಥೆಯ ಮುಂಜಾನೆಯ ಸೊಬಗನ್ನು, ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಪ್ರಸಂಗಗಳನ್ನು ನೀವು ನೋಡಿ ಆನಂದಿಸಿ ಅಂತಾರವರು.

ನಾರಾಯಣ್ ಮತ್ತು ಗಣೇಶ್‌ಗೆ ಶುಭ 'ಮುಂಜಾನೆ' ಹೇಳಿ!

ವೆಬ್ದುನಿಯಾವನ್ನು ಓದಿ