'ಸಂಗೊಳ್ಳಿ ರಾಯಣ್ಣ' ಗೆದ್ದರೂ-ಸೋತರೂ ನಿರ್ಮಾಪಕ ಕೂಲ್!

SUJENDRA
ಒಂದೆರಡು ಕೋಟಿ ರೂಪಾಯಿಗಳ ಮಸಾಲೆ ಸಿನಿಮಾವಲ್ಲ, ಬರೋಬ್ಬರಿ 30 ಕೋಟಿ ರೂಪಾಯಿಗಳು. ಇದುವರೆಗೆ ಕನ್ನಡದಲ್ಲಿ ಇಷ್ಟೊಂದು ದೊಡ್ಡ ಬಜೆಟ್‌ನ ಚಿತ್ರವನ್ನು ಯಾರೂ ಮಾಡಿಯೇ ಇಲ್ಲ. ಆದರೂ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರಿಗೆ ಚಿಂತೆಯಿಲ್ಲ. ಸೋತರೂ-ಗೆದ್ದರೂ ನಾನಂತೂ ಕೂಲ್ ಕೂಲ್ ಎಂದು ಹೇಳಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಅಕ್ಟೋಬರ್ 12ರಂದು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಲವು ಅಂಶಗಳನ್ನು ತೆರೆದಿಟ್ಟಿತು.

ಈ ಚಿತ್ರ 100 ಕೋಟಿ ಗಳಿಸಿದರೂ ಉಬ್ಬಲಾರೆ. ಬಾಕ್ಸಾಫೀಸಿನಲ್ಲಿ ಗೋತಾ ಹೊಡೆದರೂ ಚಿಂತೆ ಮಾಡುವುದಿಲ್ಲ. ಸಂಗೊಳ್ಳಿ ರಾಯಣ್ಣನ ಕುರಿತ ಸಿನಿಮಾ ಮಾಡಬೇಕೆಂಬ ನನ್ನ ಕನಸು ಈಡೇರಿದೆ. ಅಷ್ಟು ಸಾಕು. ಈ ಚಿತ್ರ ನಮ್ಮ ದೇಶದ ಯುವ ಜನತೆಗೆ ಸ್ಫೂರ್ತಿಯಾಗಲಿ. ಯುದ್ಧದಂತಹ ಸಂದರ್ಭದಲ್ಲಿ ದೇಶ ರಕ್ಷಣಗೆ ಪ್ರತಿ ಮನೆಯಿಂದ ಒಬ್ಬೊಬ್ಬರು ಹೊರಡುವಂತಾಗಲಿ ಎಂದು ದೇಶಭಕ್ತಿಯ ಮಾತುಗಳನ್ನಾಡಿದರು ನಿರ್ಮಾಪಕ ಅಪ್ಪುಗೋಳ್.

ವಿದೇಶಗಳಲ್ಲೂ ಬಿಡುಗಡೆ...
'ಸಂಗೊಳ್ಳಿ ರಾಯಣ್ಣ' ಕರ್ನಾಟಕದಲ್ಲಿ ಮಾತ್ರವಲ್ಲ, ಮುಂಬಯಿ, ಪುಣೆ, ಗೋವಾಗಳಲ್ಲೂ ಬಿಡುಗಡೆಯಾಗುತ್ತಿದೆ. ಅಪ್ಪುಗೋಳ್ ಗೆಳೆಯರು ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾಗಳಲ್ಲೂ ಬಿಡುಗಡೆ ಮಾಡುತ್ತಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿಗಳಿಗೆ ಡಬ್ ಮಾಡುವ ಯೋಚನೆಯೂ ಇದೆ. ಸದ್ಯ ಅದು ಮಾತುಕತೆಯ ಹಂತದಲ್ಲಷ್ಟೇ ಇದೆ.

ಟಿಕೆಟ್ ದರ ಹೆಚ್ಚಳ...
ಈ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿರುವುದು ವಿತರಕ ಎಚ್.ಡಿ. ಗಂಗರಾಜು. ಚಿತ್ರದ ಬಜೆಟ್ ದೊಡ್ಡದಾಗಿರುವುದರಿಂದ, ಟಿಕೆಟ್ ದರದಲ್ಲಿ ಹತ್ತು ರೂಪಾಯಿ ಏರಿಕೆ ಮಾಡಲಾಗುತ್ತಿದೆ.

ಗಂಗರಾಜು ಇನ್ನೂ ಕೆಲವು ಲೆಕ್ಕಾಚಾರಗಳನ್ನು ಹಾಕಿದ್ದಾರೆ. ಮೊದಲನೆಯದ್ದು, ನಿರ್ಮಾಪಕರಿಗೆ ಲಾಭವಾಗದ ಹೊರತು ಕಮಿಷನ್ ಚಿಂತೆ ಮಾಡದೇ ಇರುವುದು. ಎರಡನೇಯದ್ದು 100ಕ್ಕಿಂತ ಹೆಚ್ಚು ಚಿತ್ರಮಂದಿರಗಳಿಗೆ ಬಿಡುಗಡೆ ಮಾಡದೇ ಇರುವುದು.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಅಕ್ಟೋಬರ್ 4ರ ಹೊತ್ತಿಗೆ ಸೆನ್ಸಾರ್ ಆಗಲಿದೆ. ನಂತರ ಬಿಡುಗಡೆಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ