ಸಂಗೊಳ್ಳಿ ರಾಯಣ್ಣ: ದರ್ಶನ್‌ಗೆ ಮೆಚ್ಚುಗೆಯ ಸುರಿಮಳೆ

SUJENDRA
ಕಿಚ್ಚ ಸುದೀಪ್, ಶಶಿಕುಮಾರ್, ಜಯಪ್ರದಾ, ಆನಂದ್ ಅಪ್ಪುಗೋಳ್, ನಾಗಣ್ಣ, ಕೇಶವಾದಿತ್ಯ -- ಹೀಗೆ ದಶದಿಕ್ಕುಗಳಿಂದಲೂ ಮೆಚ್ಚುಗೆ. ನಿಜಕ್ಕೂ ದರ್ಶನ್ ಚಾಲೆಂಜಿಂಗ್ ಸ್ಟಾರ್ ಎಂಬ ಹೊಗಳಿಕೆ. ಇಷ್ಟವಿದ್ದುದರಿಂದ ಕಷ್ಟಪಟ್ಟಾದರೂ ಕೊಟ್ಟ ಭರವಸೆಯನ್ನು ಈಡೇರಿಸಿದ ಭಾವ ದರ್ಶನ್ ಮುಖದಲ್ಲಿ ಲಾಸ್ಯವಾಡುತ್ತಿತ್ತು. ಇನ್ನೇನಿದ್ದರೂ ಫಲಿತಾಂಶಕ್ಕಾಗಿ ಕಾಯುವ ತಪ. ಅದೂ ಅಕ್ಟೋಬರ್‌ನಲ್ಲಿ ನಡೆದು ಹೋಗಲಿದೆ!

ಆನಂದ್ ಅಪ್ಪುಗೋಳ್ ನಿರ್ಮಾಣದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳು ನಡೆದಿವೆ. ವಿತರಣೆ ಜವಾಬ್ದಾರಿಯನ್ನು 'ಶಿವಾಜಿ' ನಂತರ ಮತ್ತೆ ಫೀಲ್ಡಿಗಿಳಿದಿರುವ ಎಚ್.ಡಿ. ಗಂಗಾರಾಜು ವಹಿಸಿಕೊಂಡಿದ್ದಾರೆ. ನಿರ್ಮಾಪಕರಿಂದ ಹಿಡಿದು ಪ್ರತಿಯೊಬ್ಬರಲ್ಲೂ ಸೇವಾಗುಣ, ಯಾರಲ್ಲೂ ಲಾಭದ ಲೆಕ್ಕಾಚಾರಗಳಿಲ್ಲ. ಇವೆಲ್ಲವೂ ಒಂದು ವೇದಿಕೆಯಲ್ಲಿ ಏಕಧ್ವನಿಯಾಗಿ ಹೊರ ಹೊಮ್ಮಿದ್ದು, ಮೊನ್ನೆ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ.

32 ದಿನ ಡಬ್ಬಿಂಗ್ ಮಾಡಿದೆ...
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕೆ ಪ್ರಮುಖ ಕಾರಣರು ಆನಂದ್ ಅಪ್ಪುಗೋಳ್, ನಿರ್ದೇಶಕ ನಾಗಣ್ಣ ಮತ್ತು ಕಥೆಗಾರ ಕೇಶವಾದಿತ್ಯ. ಪ್ರತಿಯೊಬ್ಬ ಕಲಾವಿದನೂ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾನೆ. ಯಶೋವರ್ಧನ್ ಸಂಗೀತದ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ನಾಯಕ ದರ್ಶನ್.

ಸಂಗೊಳ್ಳಿ ರಾಯಣ್ಣನ ಪಾತ್ರವನ್ನು ಮಾಡಿರುವ ದರ್ಶನ್, ಆ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಬರೋಬ್ಬರಿ 32 ದಿನ ಕಷ್ಟಪಟ್ಟರಂತೆ. ಅದೂ ಆರಂಭದಲ್ಲಿ, ಇದು ನನ್ನಿಂದ ಆಗುವ ಕೆಲಸವಲ್ಲ. ಬೇರೆ ಯಾರಿಂದಲಾದರೂ ಮಾಡಿಸಿ ಅಂತ ನಾಗಣ್ಣರಿಗೆ ಹೇಳಿದ್ದರಂತೆ ದರ್ಶನ್. ಆದರೆ ನಾಗಣ್ಣ ಬಿಡಬೇಕಲ್ಲ? ಪಾತ್ರದ ಮಹತ್ವವನ್ನು ವಿವರಿಸಿದ ನಂತರ ದರ್ಶನ್ ಡಬ್ ಮಾಡಿದರಂತೆ.

ದರ್ಶನ್ ಶಿಸ್ತಿನ ಸಿಪಾಯಿ..
ಚಿತ್ರದಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ಪಾತ್ರ ಮಾಡಿರುವ ಹಿರಿಯ ನಟಿ ಜಯಪ್ರದಾ ಕೂಡ ದರ್ಶನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಿತ್ರದಲ್ಲಿ ಒಬ್ಬ ಸಿಪಾಯಿಯಾಗಿ ದರ್ಶನ್ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.

ನಿಜವಾದ ಚಾಲೆಂಜಿಂಗ್ ಸ್ಟಾರ್..
ಹೀಗೆಂದಿರುವುದು ಈ ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಶಶಿಕುಮಾರ್. ದರ್ಶನ್ ಈ ಹಿಂದೆ ಇಂತಹ ಪಾತ್ರವನ್ನು ಮಾಡಿಯೇ ಇಲ್ಲ. ನಿಜಕ್ಕೂ ಅದ್ಭುತ ನಟನೆ ಅವರಿಂದ ಇಲ್ಲಿ ಹೊರ ಬಂದಿದೆ. ಇದನ್ನು ನಾನು ಡಬ್ಬಿಂಗ್ ಸಂದರ್ಭದಲ್ಲಿ ನೋಡಿ ಹೇಳುತ್ತಿದ್ದೇನೆ. ಅದರಲ್ಲೂ ಉತ್ತರ ಕರ್ನಾಟಕ ಭಾಷೆಯ ಏರಿಳಿತಗಳನ್ನು ತುಂಬಾ ಚೆನ್ನಾಗಿಯೇ ಬಳಸಿದ್ದಾರೆ ಎಂದು ಪ್ರಶಂಸಿಸಿದರು.

ಅಕ್ಟೋಬರ್‌ನಲ್ಲೇ ಬಿಡುಗಡೆ..
ದಸರಾ ಹಬ್ಬದ ಸಂಭ್ರಮದ ಸಂದರ್ಭದಲ್ಲೇ ಸುಮಾರು 30 ಕೋಟಿ ರೂಪಾಯಿ ವೆಚ್ಚದ ಅದ್ಧೂರಿ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ತೆರೆಗೆ ಬರಲಿದೆ. ಈ ಚಿತ್ರಕ್ಕೆ ಪ್ರೇಕ್ಷಕರು, ಮಾಧ್ಯಮಗಳು ಸಹಕಾರ ನೀಡಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿತು.

125 ಚಿತ್ರಮಂದಿರಗಳಿಗಿಂತ ಹೆಚ್ಚು ಕಡೆ ಬಿಡುಗಡೆ ಮಾಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ವಿತರಕ ಗಂಗಾರಾಜು ಸ್ಪಷ್ಟಪಡಿಸಿದರು. ಚಿತ್ರದ ಅವಧಿ ತುಂಬಾ ದೀರ್ಘವೇನಿಲ್ಲ, ಮೂರು ಗಂಟೆ ಅವಧಿಯಷ್ಟೇ ಇದೆ ಎಂದು ನಾಗಣ್ಣ ಹೇಳಿದರು. ನಾನು ಹಣದ ಆಸೆಗೆ ಈ ಚಿತ್ರ ಮಾಡಿಲ್ಲ, ಲಾಭದ ಉದ್ದೇಶ ನನ್ನದಲ್ಲ ಎಂದರು ನಿರ್ಮಾಪಕ ಆನಂದ್ ಅಪ್ಪುಗೋಳ್.

ಆಡಿಯೋ ಬಿಡುಗಡೆಗೆ ಬಂದಿದ್ದ ಸುದೀಪ್ ಮಾತಿಗಿಳಿಯಲಿಲ್ಲ. ನಾಯಕಿ ನಿಖಿತಾ ಕೂಡ ಒಂದೆರಡು ಅಣಿಮುತ್ತುಗಳನ್ನುದುರಿಸಿ ಸುಮ್ಮನಾದರು.

ವೆಬ್ದುನಿಯಾವನ್ನು ಓದಿ