'ಸಮುದಾಯ'ದಿಂದ ಇಂದಿನಿಂದ ಕಲಾತ್ಮಕ ಚಿತ್ರಗಳನ್ನು ಪ್ರದರ್ಶನ

ಕಲಾತ್ಮಕ ಚಿತ್ರಗಳೆಂದರೆ ಕೇವಲ ಪ್ರಶಸ್ತಿಗಾಗಿಯೇ ನಿರ್ಮಿಸಲ್ಪಡುತ್ತದೆ ಎಂಬ ಅಲಿಖಿತ ಮಾತು ಸಿನಿಮಾ ವಲಯವೂ ಸೇರಿದಂತೆ ಸಾರ್ವಜನಿಕರಲ್ಲಿದೆ. ಹಾಗಾಗಿ ಕಲಾತ್ಮಕ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣದೆ ಸದ್ದಿಲ್ಲದೆ ಪ್ರಶಸ್ತಿ, ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಸುಮ್ಮನೆ ಕೂತು ಬಿಡುತ್ತವೆ. ಇಂತಹ ಚಿತ್ರಗಳು ಪ್ರದರ್ಶನ ಭಾಗ್ಯ ಕಾಣೋದು ಅಪರೂಪವೇ.

ಹೀಗೆ ಸದ್ದಿಲ್ಲದೇ ಚಿತ್ರೀಕರಣಗೊಂಡು ಪ್ರಶಸ್ತಿಯನ್ನು ಸ್ವೀಕರಿಸಿ, ರಾಷ್ಟ್ತ್ರ-ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಖ್ಯಾತಿಪಡೆದರೂ ಅಂಥಾ ಚಿತ್ರಗಳ ವೀಕ್ಷಣಾಭಾಗ್ಯವು ಪ್ರೇಕ್ಷಕರಿಗೆ ಸಿಗುವುದು ದುರ್ಲಭವೆಂದೇ ಹೇಳಬೇಕು. ಅಂಥಾದ್ದೊಂದು ಪ್ರಯತ್ನಕ್ಕೆ ಸಮುದಾಯ ಬೆಂಗಳೂರು ಎಂಬ ಕೂಟ ಮುಂದೆ ಬಂದು ನಿಂತಿದೆ.

ಇಂದಿನಿಂದ ನವೆಂಬರ್ 5ರವರೆಗೆ ನಡೆಯಲಿರುವ ಈ ಚಿತ್ರೋತ್ಸವಕ್ಕೆ ಸಮುದಾಯ ಚಿತ್ರೋತ್ಸವ-2009 ಎಂದು ಹೆಸರಿಡಲಾಗಿದ್ದು, ಕೈಲಾಷ್ ಚಿತ್ರಮಂದಿರದಲ್ಲಿ ಆಯೋಜಿತವಾಗಿರುವ ಈ ಉತ್ಸವದಲ್ಲಿ ದಾಟು, ಗುಬ್ಬಚ್ಚಿಗಳು, ಬನದ ನೆರಳು ಹಾಗೂ ಅರ್ಥ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನವೆಂಬರ್ 5ರಂದು ಒಂದು ಚರ್ಚಾಗೋಷ್ಠಿಯನ್ನೂ ನಡೆಸಲು ಉದ್ದೇಶಿಸಲಾಗಿದ್ದು, ಕಾವೇರಿ ನೀರು ಹಂಚಿಕೆ ಕುರಿತು ಪ್ರಜ್ಞಾವಂತರು-ವಿದ್ಯಾರ್ಥಿಗಳ ನಡುವೆ ಅಂದು ಮುಖಾಮುಖಿ ಚರ್ಚೆ ನಡೆಯಲಿದೆ. ಪ್ರಥಮ ಬಾರಿಗೆ ಇಂಥಾದ್ದೊಂದು ಪ್ರಯತ್ನಕ್ಕೆ ಈ ಕೂಟವು ಮುಂದಾಗಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಉತ್ತಮ ಅಭಿರುಚಿಯ ಚಿತ್ರಗಳನ್ನು ನೋಡುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ ಎಂದಿದೆ.

ವೆಬ್ದುನಿಯಾವನ್ನು ಓದಿ