ಸಾರಿ, ಪ್ರಿಯಾಮಣಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

PR


ತಮಿಳು, ತೆಲುಗಿನಲ್ಲಿ ಚಾರುಲತಾ ಮತ್ತೆ ಮಿಂಚು ಹರಿಸಲಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಪ್ರಿಯಾಮಣಿ ಕೂಡ ತಾನು ಅಂದಕಾಲತ್ತಿಲ್ ಹೆಸರು ಮಾಡಿದ ಚಿತ್ರರಂಗಕ್ಕೆ ಮತ್ತೆ ಹೋಗುವ ಖುಷಿಯಲ್ಲಿದ್ದರು. ಅಷ್ಟರಲ್ಲೇ ಬಂದಿದೆ ಬ್ಯಾಡ್ ನ್ಯೂಸ್. ಪ್ರಿಯಾಮಣಿ ತೆಲುಗಿಗೆ ಹೋಗುತ್ತಿಲ್ಲ!

ಇದು 'ಚಾರುಲತಾ' ಚಿತ್ರದ ಲೇಟೆಸ್ಟ್ ಬೆಳವಣಿಗೆ. ಸಿನಿಮಾ ಶೂಟಿಂಗ್ ಹಂತದಲ್ಲಿರುವಾಗಲೇ ಬಂದಿದ್ದ ತಮಿಳಿನ ರಮೇಶ್ ಕೃಷ್ಣಮೂರ್ತಿ ಮತ್ತು ತೆಲುಗಿನ ಅಲ್ಲು ಅರವಿಂದ್, ತಾವು ಈ ಚಿತ್ರವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದಿದ್ದರು. ನೀವೇ ನಮ್ಮ ಸಿನಿಮಾಗಳಲ್ಲೂ ಹೀರೋಯಿನ್ ಎಂದೂ ಹೇಳಿದ್ದರು.

ಸಹಜವಾಗಿಯೇ ಪ್ರಿಯಾಮಣಿ ಗೇಣುದ್ದ ಬೆಳೆದಿದ್ದರು. ಕನ್ನಡದ ನಿರ್ಮಾಪಕ ನಿರ್ಮಾಪಕ ದ್ವಾರಕೀಶ್ ರಿಮೇಕ್ ಹಕ್ಕು ಸಿಕ್ತು ಎಂಬ ಖುಷಿಯಲ್ಲಿದ್ದರೆ, ಇನ್ನೂ ಎರಡು ಚಿತ್ರಗಳ ನಿರ್ದೇಶನ ಅವಕಾಶದ ಸಂತಸ ನಿರ್ದೇಶಕ ಪೊನ್ ಕುಮಾರನ್ (ಪಿ. ಕುಮಾರ್) ಅವರಲ್ಲಿತ್ತು. ಆದರೆ ಅಷ್ಟರಲ್ಲೇ ಎರಡರಲ್ಲೊಂದು ಠುಸ್ಸಾಗಿದೆ. ರಿಮೇಕ್ ಮಾಡುವ ಐಡಿಯಾದಿಂದ ತೆಲುಗು ನಿರ್ಮಾಪಕರು ಹಿಂದಕ್ಕೆ ಸರಿದಿದ್ದಾರೆ.

ಆಸಕ್ತಿ ತೋರಿಸಿದ್ದ ಗೀತಾ ಆರ್ಟ್ಸ್‌ನ ಅಲ್ಲು ಅರವಿಂದ್‌ಗೆ ('ಬದ್ರಿನಾಥ್' ಖ್ಯಾತಿಯ ನಾಯಕ ಅಲ್ಲು ಅರ್ಜುನ್ ತಂದೆ) ಏನಾಯ್ತು ಅನ್ನೋದು ಗೊತ್ತಾಗಿಲ್ಲ. ಆದರೆ ಬೇಡವೇ ಬೇಡ ಎಂದು ಅರವಿಂದ್ ದೂರ ಸರಿದಿರುವುದು ಹೌದು. ಹಾಗಾಗಿ 'ಚಾರುಲತಾ' ಕನ್ನಡದಲ್ಲಿ ಬಿಡುಗಡೆಯಾದ ನಂತರ ತಮಿಳಿಗೆ ಮಾತ್ರ ರಿಮೇಕ್ ಆಗುತ್ತಿದೆ.

ಸಯಾಮಿ ಅವಳಿ ಪಾತ್ರ ಮಾಡುತ್ತಿರುವ ಪ್ರಿಯಾಮಣಿಯ 'ಚಾರುಲತಾ' ಹಾಲಿವುಡ್‌ನ 'ಅಲೋನ್' ಚಿತ್ರದ ಅನಧಿಕೃತ ರಿಮೇಕ್. ಇಲ್ಲಿ ಪ್ರಿಯಾಮಣಿಗೆ ಸ್ಕಂದ ನಾಯಕ. ಉಳಿದಂತೆ ತಮಿಳಿನ ಸೀತಾ, ಶರಣ್ಯ ಪೊನ್ವಾನನ್, ಸಾಯಿ ಶಶಿ, ರವಿಶಂಕರ್, ಮಾ. ಮಂಜುನಾಥ್, ಸುನೇತ್ರಾ, ಸುದರ್ಶನ್ ಮುಂತಾದವರ ತಾರಾ ಬಳಗ ಚಿತ್ರಕ್ಕಿದೆ. ಸುಂದರ್ ಸಿ ಬಾಬು ಸಂಗೀತ, ಪನೀರ್ ಸೆಲ್ವಂ ಛಾಯಾಗ್ರಹಣವಿದೆ.

ತೆಲುಗು ಕೈ ತಪ್ಪಿದರೂ ಪ್ರಿಯಾಮಣಿ ಭರವಸೆಗಳು ಕಡಿಮೆಯಾಗಿಲ್ಲ. ಕಷ್ಟಪಟ್ಟು ನಟಿಸಿದ್ದೇನೆ, ಕನ್ನಡದಲ್ಲಿ ಡಬ್ಬಿಂಗ್ ಕೂಡ ಮಾಡುತ್ತಿದ್ದೇನೆ. ಇಂತಹ ಚಿತ್ರ ಭಾರತದಲ್ಲಿ ಇದುವರೆಗೆ ಬಂದೇ ಇಲ್ಲ. ಹೊಸ ಸಬ್ಜೆಕ್ಟು ಎನ್ನುತ್ತಾ ಮತ್ತೆ ರಾಷ್ಟ್ರಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ