ಸಿನಿ ಜೀವನದಲ್ಲಿ ಸಂತೃಪ್ತಿಯಿದೆ: ರಾಧಿಕಾ ಪಂಡಿತ್

SUJENDRA
ಕೆಲವರಿರುತ್ತಾರೆ, ಅವರಿಗೆ ತೃಪ್ತಿ ಅನ್ನೋದೇ ಇರೋದಿಲ್ಲ. ಅದೆಷ್ಟೇ ಚಿತ್ರಗಳು ಹಿಟ್ಟಾಗಲಿ, ಇನ್ನೂ ಏನಾದರೂ ಮಾಡಬೇಕೆಂಬ ತಪ. ಇದುವರೆಗೆ ಮಾಡಿದ್ದು ಏನೂ ಅಲ್ಲ, ಸಾಧನೆಯ ಹಾದಿಯಲ್ಲಿ ಕ್ರಮಿಸಿಯೇ ಇಲ್ಲ, ಇನ್ನೂ ತುಂಬಾ ದೂರ ಸಾಗಬೇಕಿದೆ ಅನ್ನೋದಷ್ಟೇ ಗುರಿ. ಹೆಚ್ಚು ಕಡಿಮೆ ಅದೇ ಸಾಲಿಗೆ ಸೇರುವ ಹುಡುಗಿ ರಾಧಿಕಾ ಪಂಡಿತ್.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶಶಾಂಕ್ 'ಮೊಗ್ಗಿನ ಮನಸು' ಚಿತ್ರದ ಮೂಲಕ ತಾನೆಂತಹ ಕಲಾವಿದೆ ಅನ್ನೋದನ್ನು ಸಾಬೀತು ಮಾಡಿದ ರಾಧಿಕಾ ಪಂಡಿತ್, ನಂತರ ತಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆ, ಉದಯ ಟಿವಿ ಅತ್ಯುತ್ತಮ ನಟಿ ಪ್ರಶಸ್ತಿ.

ಹೀಗಿರುವಾಕೆಗೆ ಏನೋ ಸಾಧಿಸಬೇಕೆಂಬ ಬೆಟ್ಟದಷ್ಟು ಹಂಬಲವಿದೆ. ಅಂತಹ ಅಶಾವಾದವನ್ನು ಜತನವಾಗಿಟ್ಟುಕೊಂಡಿದ್ದಾರೆ. ಹಾಗೆಂದು ಈಗ ಇರುವುದರಲ್ಲಿ ಸಮಾಧಾನ ಇಲ್ಲವೆಂದಲ್ಲ. ಆ ಬಗ್ಗೆ ಅತೀವ ಸಂತಸವಿದೆ, ಸಂತೃಪ್ತಿಯಿದೆ. ಸಿನಿಮಾ ಜೀವನ ನೆಮ್ಮದಿ ಕೊಟ್ಟಿದೆ. ಎಲ್ಲವೂ ಖುಷಿಖುಷಿಯಿಂದಲೇ ಸಾಗುತ್ತಿದೆ. ಯಾವುದೇ ಬೇಸರವೂ ಅವರಿಗಿಲ್ಲ. ಗುದ್ದಾಟ, ಸಮರ, ಪೈಪೋಟಿಗಳ ಪಟ್ಟಿಯಲ್ಲಂತೂ ರಾಧಿಕಾ ಹೆಸರೇ ಇಲ್ಲ.

ಹತ್ತರಲ್ಲಿ ಹನ್ನೊಂದು ಎಂಬಂತಿರುವ ನಟಿ ರಾಧಿಕಾ ಪಂಡಿತ್ ಅಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ. ಆಕೆ ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಬೇಟೆಗೆ ಹೆಸರಾದವರು. ಹೀಗಿರುವಾಕೆಯ ಕೈಯಲ್ಲೀಗ ಅಲೆಮಾರಿ, ಬ್ರೇಕಿಂಗ್ ನ್ಯೂಸ್, ಸಾಗರ್ ಮತ್ತು ಅದ್ಧೂರಿಗಳೆಂಬ ನಾಲ್ಕು ಸಿನಿಮಾಗಳಿವೆ. ಎಲ್ಲವೂ ಮುಂದಿನ ವರ್ಷ ಬಿಡುಗಡೆಯಾಗಲಿವೆ. ಈ ಪ್ರತಿಯೊಂದು ಪಾತ್ರಗಳೂ ಭಿನ್ನವಂತೆ. ಎಲ್ಲದರಲ್ಲೂ ಹೊಸತನವಿದೆಯಂತೆ.

ಮಸಾಲೆ ಚಿತ್ರಗಳೇನೋ ಓಕೆ, ಅಲ್ಲಿ ಹೆಚ್ಚು ಕಷ್ಟಗಳಿರುವುದಿಲ್ಲ. ಆದರೆ ಹೀಗೆ ಕಠಿಣ ಪಾತ್ರಗಳಿಗೆ ಜೀವ ತುಂಬುವುದೆಂದರೆ ಹೇಳಿದಷ್ಟು ಸುಲಭವಲ್ಲ. ಆದರೆ ರಾಧಿಕಾ ಪಂಡಿತ್ ಮಾತ್ರ ಅದನ್ನು ತಪವೆಂದು ಪರಿಗಣಿಸುತ್ತಾರೆ. ಹಾಗೆ ಸವಾಲುಗಳನ್ನು ಮೆಟ್ಟಿ ನಿಲ್ಲುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿ.

ಅಲೆಮಾರಿಯಲ್ಲಿ ನನ್ನದು ಬ್ರಾಹ್ಮಣ ಹುಡುಗಿಯ ಪಾತ್ರ. ತಾಯಿಯಿಲ್ಲದ ತಬ್ಬಲಿ, ಮೌನಿ, ಸಮಾಧಾನಿ, ಅಂತರ್ಮುಖಿ ಬೇರೆ. ಆದರೆ ಬ್ರೇಕಿಂಗ್ ನ್ಯೂಸ್ ಇದಕ್ಕೆ ತದ್ವಿರುದ್ಧ. ಶ್ರದ್ಧಾ ಹೆಸರಿನ ನಾನಿಲ್ಲಿ ಶ್ರೀಮಂತೆ, ಹಠಮಾರಿ, ಮುಂಗೋಪಿ. ಇನ್ನೆರಡು ಚಿತ್ರಗಳದ್ದೂ ಅಷ್ಟೇ. ಇವುಗಳಿಗಿಂತ ಭಿನ್ನ ಕತೆ, ಪಾತ್ರ ಅಲ್ಲಿದೆ ಎನ್ನುತ್ತಾರವರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ