ಸಿಲ್ಕ್ ಸಖತ್ ಮಗಾ: ಸೆನ್ಸಾರ್ ಮಂಡಳಿಗೂ HOT ಮೂಡ್!

ಮಂಗಳವಾರ, 21 ಮೇ 2013 (13:39 IST)
PR
ಪ್ರೇಕ್ಷಕರಾಗಿ ಚಿತ್ರಮಂದಿರಕ್ಕೆ ಹೋದರೆ ಯಾವುದೋ ದೃಶ್ಯ ಇಷ್ಟವಿಲ್ಲವೆಂದರೆ ಎದ್ದು ಹೋಗಬಹುದು, ಇಲ್ಲವೇ ಕಣ್ಣಾದರೂ ಮುಚ್ಚಿಕೊಳ್ಳಬಹುದು. ಮನೆಯಲ್ಲೇ ಆದರೆ ರಿಮೋಟ್ ಕೈಗೆತ್ತಿಕೊಂಡು ಚಾನೆಲ್ ಬದಲಾಯಿಸಬಹುದು. ಆದರೆ ಸೆನ್ಸಾರ್ ಮಂಡಳಿ ಸದಸ್ಯರು ಹಾಗೆ ಮಾಡುವಂತಿಲ್ಲ. ಎಷ್ಟೇ ಕೆಟ್ಟ ಸನ್ನಿವೇಶವಿರಲಿ, ಅವರು ನೋಡಲೇಬೇಕು!

ಈಗ ಅಂತಹದ್ದೊಂದು ಸಂದಿಗ್ಧ ಪರಿಸ್ಥಿತಿ ಬೆಂಗಳೂರಿನಲ್ಲಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಎದುರಾಗಿದೆ. ಕಾರಣವಾಗಿರುವುದು 'ಸಿಲ್ಕ್ ಸಖತ್ ಮಗಾ' ಎಂಬ ಸಿನಿಮಾ. ಈ ಚಿತ್ರ ಆರಂಭದಿಂದ ಇದುವರೆಗೆ ಯಾವ ರೀತಿಯಲ್ಲಿ ಬಿಂಬಿಸಲ್ಪಟ್ಟಿದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಪರಿಸ್ಥಿತಿ ಹೀಗಿರುವಾಗ ಇಂತಹ ನಿರೀಕ್ಷೆಯೊಂದಿಗೆ ಸೆನ್ಸಾರ್ ಮಂಡಳಿ ಸದಸ್ಯರು ಚಿತ್ರವನ್ನು ವೀಕ್ಷಿಸಬೇಕು.

ಚಿತ್ರದಲ್ಲಿ ಮಿತಿ ಮೀರಿದ ಹಾಟ್ ದೃಶ್ಯಗಳಿರುವುದು ನಿರೀಕ್ಷೆ. ಹಾಗೇನಾದರೂ ಇದ್ದಲ್ಲಿ, ಕತ್ತರಿ ಪ್ರಯೋಗಕ್ಕೂ ನಿಲುಕದೇ ಇರುವ ಸಿನಿಮಾವಾಗಿದ್ದರೆ, ಎ ಪ್ರಮಾಣ ಪತ್ರಕ್ಕೂ ಲಾಯಕ್ ಇಲ್ಲದೇ ಇದ್ದರೆ, ಚಿತ್ರಕ್ಕೆ ಪ್ರಮಾಣ ಪತ್ರ ನಿರಾಕರಿಸುವ ಅಧಿಕಾರ ಸೆನ್ಸಾರ್ ಮಂಡಳಿಗಿದೆ. ನಂತರ ಟ್ರಿಬ್ಯುನಲ್‌ಗೆ ಹೋಗಿ ಅಲ್ಲಿ ಚಿತ್ರದ ನಿರ್ಮಾಪಕರು ಅದೃಷ್ಟ ಪರೀಕ್ಷೆ ಮಾಡಬೇಕಾಗುತ್ತದೆ. ಇಂತಹ ಸಾಧ್ಯತೆಗಳೇ ಚಿತ್ರತಂಡಕ್ಕೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಈ ಹಿಂದೆ 'ಬಾಬಾ' ಎಂಬ ಚಿತ್ರ ನಿರ್ದೇಶಿಸಿದ್ದ ತ್ರಿಶೂಲ್ ಆಕ್ಷನ್ ಕಟ್ ಹೇಳಿರುವ 'ಸಿಲ್ಕ್ ಸಖತ್ ಮಗಾ' ಚಿತ್ರದಲ್ಲಿ ಅಕ್ಷಯ್ ನಾಯಕ, ಪಾಕಿಸ್ತಾನದ ಸೆಕ್ಸ್ ಬಾಂಬ್ ವೀಣಾ ಮಲಿಕ್ ನಾಯಕಿ. ನಾಯಕನ ತಂದೆ ವೆಂಕಟಪ್ಪ ನಿರ್ಮಾಪಕರು. ಸಾನಾ ಖಾನ್, ಸ್ಟಿಫಾನಿಯೇ ಸಿರಿವರ್ದನ, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲಾ ಮುಂತಾದವರು ನಟಿಸಿದ್ದಾರೆ.

ಬಾಲಿವುಡ್‌ನಲ್ಲಿ ಬಂದಿದ್ದ 'ಡರ್ಟಿ ಪಿಕ್ಚರ್'ನ ರಿಮೇಕ್ ಎಂದು ಆರಂಭದಲ್ಲಿ ವಿವಾದವಾಗಿತ್ತು. ಆಗ ಚಿತ್ರಕ್ಕೆ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಎಂದು ಹೆಸರಿಡಲಾಗಿತ್ತು. ಆದರೆ ನ್ಯಾಯಾಲಯದ ಆದೇಶದಂತೆ ಡರ್ಟಿ ಪಿಕ್ಚರ್ ಎಂಬುದನ್ನು ತೆಗೆಯಲಾಗಿದೆ. ಸಿಲ್ಕ್ ಸ್ಮಿತಾ ಜೀವನದ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ, ಸ್ಪಷ್ಟತೆಯಿಲ್ಲ. ಪೂರ್ತಿ ಕಾಲ್ಪನಿಕ ಕಥೆಯನ್ನಷ್ಟೇ ತಾವು ಅಳವಡಿಸಿದ್ದೇವೆ ಎಂದು ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇವೆಲ್ಲಕ್ಕಿಂತಲೂ ನಾಯಕ ಮತ್ತು ನಾಯಕಿಯ ರೊಮ್ಯಾನ್ಸ್ ದೃಶ್ಯಗಳು ಭಾರಿ ಸುದ್ದಿ ಮಾಡಿವೆ. ಇಬ್ಬರೂ ತೀರಾ ಹಾಟ್ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು, ಪಡ್ಡೆ ಹುಡುಗರನ್ನು ಚಿತ್ರಮಂದಿರದತ್ತ ಸೆಳೆಯುವ ಯತ್ನವನ್ನು 'ಸಿಲ್ಕ್ ಸಖತ್ ಮಗಾ' ಟೀಮ್ ಮಾಡಿದೆ. ಆದರೆ ಈಗ ಎಲ್ಲವೂ ಸೆನ್ಸಾರ್ ಮಂಡಳಿ ನೀಡುವ ಪ್ರಮಾಣಪತ್ರವನ್ನು ಆಧರಿಸಿದೆ.

ವೆಬ್ದುನಿಯಾವನ್ನು ಓದಿ