ಸುದೀಪ್‌ರಲ್ಲಿ ವಿಷ್ಣುವರ್ಧನ್‌ರನ್ನು ಕಾಣಲು ಸಾಧ್ಯವೇ?

SUJENDRA
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಎಲ್ಲಿ? ಕಿಚ್ಚ ಸುದೀಪ್ ಎಲ್ಲಿ? ಎಲ್ಲಿಂದೆಲ್ಲಿಯ ಹೋಲಿಕೆ ಅಂತೀರಾ? ಆದ್ರೆ ನಿಜ. ವಿಷ್ಣುವರ್ಧನ್ ಅವರ ಹೆಸರಿನ ಮಸಾಲೆ ಚಿತ್ರದಲ್ಲಿ ಸುದೀಪ್ ಅಭಿನಯಿಸಿದ ನಂತರ ಕನ್ನಡ ಚಿತ್ರರಂಗ ಸುದೀಪ್‌ರಲ್ಲಿಯೇ ವಿಷ್ಣುವರ್ಧನ್‌ರನ್ನು ಕಾಣಲು ಶುರು ಮಾಡಿದೆ. ಇದಕ್ಕೆ ಇತ್ತೀಚಿನ ಉದಾಹರಣೆ, 'ಕೋಟಿಗೊಬ್ಬ-II'.

ಹೌದು, ಮೊನ್ನೆಯಷ್ಟೇ 'ವಿಷ್ಣುವರ್ಧನ' ಮಾಡಿ ಸಾಹಸ ಸಿಂಹನನ್ನು ನೆನಪಿಸಿದ ಕಿಚ್ಚ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಿಷ್ಣುವರ್ಧನ್ ನಾಯಕರಾಗಿದ್ದ 'ಕೋಟಿಗೊಬ್ಬ' ಚಿತ್ರದ ಮುಂದುವರಿದ ಭಾಗದಲ್ಲಿ ಅವರೇ ನಾಯಕರಾಗಲು ಹೊರಟಿದ್ದಾರೆ. ಇದಕ್ಕೆ ಸಾಥ್ ನೀಡುತ್ತಿರುವುದು ಮೂಲ ಚಿತ್ರ 'ಬಾಷಾ' ನಿರ್ದೇಶಕ ಸುರೇಶ್ ಕೃಷ್ಣ!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ 'ಬಾಷಾ' 1995ರಲ್ಲಿ ಬಿಡುಗಡೆಯಾಗಿತ್ತು. ಸುರೇಶ್ ಕೃಷ್ಣ ನಿರ್ದೇಶನದ ಆ ಚಿತ್ರ ದೇಶದಾದ್ಯಂತ ಭಾರೀ ಧೂಳೆಬ್ಬಿಸಿತ್ತು. ಅದೇ ಚಿತ್ರವನ್ನು ನಿರ್ದೇಶಕ ನಾಗಣ್ಣ 2001ರಲ್ಲಿ ಕನ್ನಡಕ್ಕೆ ಭಟ್ಟಿ ಇಳಿಸಿದ್ದರು. 'ಕೋಟಿಗೊಬ್ಬ' ಹೆಸರಿನ ಇದರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಾಯಕರಾಗಿದ್ದರು.

ಅದಾಗಿ ಹತ್ತು ವರ್ಷಗಳೇ ಕಳೆದಿವೆ. ಈಗ ಸುರೇಶ್ ಕೃಷ್ಣ ತನ್ನ ಹಳೆಯ ಚಿತ್ರಕ್ಕೆ ಮತ್ತೆ ಜೀವನ ನೀಡಲು ಮುಂದಾಗಿದ್ದಾರೆ. ವಿಷ್ಣು ನಟಿಸಿದ್ದ ಕೋಟಿಗೊಬ್ಬ ರಿಮೇಕ್, ಆದರೆ ಕೋಟಿಗೊಬ್ಬ ಭಾಗ ಎರಡು ಕನ್ನಡದ್ದೇ ಚಿತ್ರ. ಇದು ರಿಮೇಕ್ ಅಲ್ಲ. ಕನ್ನಡಕ್ಕಾಗಿಯೇ ಸುರೇಶ್ ಕೃಷ್ಣ ಕಥೆ ಹೆಣೆದಿದ್ದಾರೆ.

'ಕೋಟಿಗೊಬ್ಬ' ನಿರ್ಮಾಪಕರಾಗಿದ್ದ ಸೂರಪ್ಪ ಬಾಬು ಇಲ್ಲೂ ನಿರ್ಮಾಪಕರು. ಚಿತ್ರಕ್ಕೆ 'ಕೋಟಿಗೊಬ್ಬ-II' ಎಂದು ಹೆಸರಿಡಲಾಗಿದೆ.

ಸೂರಪ್ಪ ಬಾಬು ಪ್ರಕಾರ, ಇದು ಸುದೀರ್ಘಾವಧಿಯಿಂದ ಯೋಚನೆಯಲ್ಲಿದ್ದ ಚಿತ್ರ. ಕಥೆ ಸಿದ್ಧವಾಗುತ್ತಿತ್ತು. ವಿಷ್ಣುವರ್ಧನ್ ಇಂದು ಬದುಕಿರುತ್ತಿದ್ದರೆ ಅವರಲ್ಲದೆ ಬೇರೆ ಯಾರೂ ನಾಯಕರಾಗುತ್ತಿರಲಿಲ್ಲ. ಆದರೆ ಈಗ ನಾವು ಸುದೀಪ್‌ರಲ್ಲಿ ಹೊಸ ವಿಷ್ಣುವರ್ಧನ್‌ರನ್ನು ಕಾಣುತ್ತಿದ್ದೇವೆ ಎಂದಿದ್ದಾರೆ.

ಸುದ್ದಿಯನ್ನು ಸುದೀಪ್ ಕೂಡ ಖಚಿತಪಡಿಸಿದ್ದಾರೆ. ಈ ವರ್ಷಾಂತ್ಯದೊಳಗೆ ಚಿತ್ರಕ್ಕೆ ಚಾಲನೆ ಸಿಗಬಹುದು. ನನಗೂ ಇಷ್ಟವಾಗಿದೆ. ಬಾಷಾ ಚಿತ್ರದ ನಿರ್ದೇಶಕರೇ ಇಲ್ಲೂ ಇರುತ್ತಾರೆ ಎಂಬುದನ್ನು ಕೇಳಿದ್ದೇನೆ. ಮೊದಲಿನಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವುದರಿಂದ ಈ ಬಗ್ಗೆ ಖುಷಿಯಿದೆ ಎಂದಿದ್ದಾರೆ.

ಪ್ರಸಕ್ತ ಸುರೇಶ್ ಕೃಷ್ಣ ಕನ್ನಡದ ಇನ್ನೊಂದು ಚಿತ್ರ 'ಕಠಾರಿ ವೀರ ಸುರಸುಂದರಾಂಗಿ'ಯಲ್ಲಿ ಬ್ಯುಸಿ. ಉಪೇಂದ್ರ - ರಮ್ಯಾ ತಾರಾಗಣದ ಈ 3ಡಿ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ನಂತರದ ಕೆಲಸಗಳು ಭರದಿಂದ ಸಾಗುತ್ತಿವೆ.

ವೆಬ್ದುನಿಯಾವನ್ನು ಓದಿ