ಸುದೀಪ್ ಇಮೇಜ್‌ಗೆ ಹೊಂದುವ ಕಥೆ ಬರೀತಿದ್ದಾರಂತೆ ಭಟ್ರು

ಶನಿವಾರ, 27 ಏಪ್ರಿಲ್ 2013 (14:06 IST)
PR
'ರಂಗ ಎಸ್‌ಎಸ್‌ಎಲ್‌ಸಿ' ಚಿತ್ರ ಮಾಡುವಾಗಿನ ಪರಿಸ್ಥಿತಿಯೇ ಬೇರೆ ಇತ್ತು. ಆಗಿನ ಕಿಚ್ಚ ಸುದೀಪ್ ಈಗಿಲ್ಲ, ಆಗ ಯೋಗರಾಜ್ ಭಟ್ ಹೀಗಿರಲಿಲ್ಲ. ಮತ್ತೆ ಈ ಇಬ್ಬರು ಸೇರುತ್ತಿದ್ದಾರೆಂದ ಮೇಲೆ ಕಥೆ ಹೇಗಿರಬಹುದು? ಊಹಿಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಮಾಡಿ ತೋರಿಸುತ್ತೇನೆ ಎನ್ನುತ್ತಿದ್ದಾರೆ ನಿರ್ದೇಶಕ ಯೋಗರಾಜ್ ಭಟ್!

'ರಂಗ ಎಸ್‌ಎಸ್‌ಎಲ್‌ಸಿ' ನಿರ್ಮಾಪಕ ಎನ್.ಕುಮಾರ್ ಮತ್ತು 'ಮಣಿ' ನಿರ್ಮಾಪಕ ಕರಿಸುಬ್ಬು ಅವರಿಗಾಗಿ ಯೋಗರಾಜ್ ಭಟ್ ಚಿತ್ರವೊಂದನ್ನು ನಿರ್ದೇಶಿಸಲು ಹೊರಟಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ನಂತರ ಯಶ್ ಹೆಸರೂ ಕೇಳಿ ಬಂದಿತ್ತು. ಕೊನೆಗೆ ಪ್ರಾಜೆಕ್ಟ್ ಕೈ ಸೇರಿದ್ದು ಸುದೀಪ್‌ಗೆ. ಈ ಬಗ್ಗೆ ಭಟ್ರು ಒಂದಷ್ಟು ಮಾತನಾಡಿದ್ದಾರೆ.

ಜಾಹೀರಾತು ಸ್ಫೂರ್ತಿ:
ಸುದೀಪ್ ಮತ್ತು ನಾನು ದೂರವಾಗಿಲ್ಲ. ಆಗಾಗ ಸಮಾಲೋಚನೆ ನಡೆಸುತ್ತಾ ಇದ್ದೆವು. ಕೆಲವು ಸಮಯದ ಹಿಂದೆ ಸುದೀಪ್ ಚಿನ್ನಾಭರಣ ಸಂಸ್ಥೆಯೊಂದರ ಜಾಹೀರಾತು ನೋಡಿದ್ದೆ. ಅದರಲ್ಲಿನ ಸುದೀಪ್ ವೈಭವೋಪೇತ ಲುಕ್ ನೋಡಿ ಭೇಟಿಯಾಗಲು ನಿರ್ಧರಿಸಿದೆ. ನಮ್ಮ ಪ್ರಾಜೆಕ್ಟ್‌ನ ಕಾನ್ಸೆಪ್ಟ್ ಬಗ್ಗೆ ಚರ್ಚೆ ಮಾಡಿದೆವು. ಓಕೆ ಆಯ್ತು. ಕೆಲವೇ ಸಮಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಇಮೇಜ್ ಗಮನದಲ್ಲಿದೆ:
ನನ್ನ ಚಿತ್ರಗಳ ಶೈಲಿಯೇ ಬೇರೆ, ಸುದೀಪ್ ಇಮೇಜೇ ಬೇರೆ. ಆದರೆ ನನ್ನ ಹೊಸ ಚಿತ್ರದಲ್ಲಿ ಈ ಎರಡೂ ಶೈಲಿಗಳನ್ನು ಕಾಣಬಹುದು. ಸುದೀಪ್ ಬಾಯಲ್ಲಿ ನಾನು ಹಾಸ್ಯದ ಡೈಲಾಗ್ ಹೊಡೆಸುತ್ತೇನೆ. ಜತೆಗೆ ಅವರ ಇಮೇಜ್‌ಗೆ ತಕ್ಕಂತೆ ಬೇಕಾದ ಅಂಶಗಳನ್ನೂ ಸೇರಿಸುತ್ತೇನೆ.

ಟೀಕೆಗಳಿಗೆ ಕಿವುಡ:
ನಾನು ಬರೆಯುವ ಸಾಹಿತ್ಯ, ಸಂಭಾಷಣೆಗಳ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ನನ್ನ ಹಾಡುಗಳು ಜನರಿಗೆ ಇಷ್ಟವಾಗದೇ ಇದ್ದರೆ, ಅದು ಹೇಗೆ ಇಷ್ಟು ದೊಡ್ಡ ಹಿಟ್ ಆಗುತ್ತಿವೆ? ನಾನು ಐಟಮ್ ಬಾಯ್. ಏನು ಬೇಕಾದರೂ ಬರೆಯಬಲ್ಲೆ. ಹಾಗಾಗಿ ಟೀಕೆಗಳಿಗೆ ನಾನು ಕಿವಿ ಮುಚ್ಚಿಕೊಳ್ಳುತ್ತೇನೆ.

ಹಾಟ್ ಪ್ಯಾಂಟ್:
ನನ್ನ ಚಿತ್ರಗಳ ನಾಯಕಿಯರಿಗೆ ಹಾಟ್ ಪ್ಯಾಂಟ್, ಬನೀನು ಹಾಕಿಸುತ್ತೇನೆ ಎಂಬ ಟೀಕೆ ಸರಿಯಲ್ಲ. ಪ್ರೇಕ್ಷಕರು ಅವರ ಮುಖ ನೋಡದೆ ಹಾಟ್ ಪ್ಯಾಂಟ್ ಮಾತ್ರ ನೋಡಿದರೆ ಅದು ನನ್ನ ತಪ್ಪಲ್ಲ. ನಾನು ಕೂಡ 24 ವರ್ಷವಾಗುವ ಮೊದಲು ನಾಯಕಿಯರ ಮುಖ ನೋಡುತ್ತಿರಲಿಲ್ಲ. ಪ್ರೇಕ್ಷಕರಿಗೆ ಏನು ಬೇಕು ಎನ್ನುವುದು ಈಗಿನ ಹುಡುಗಿಯರಿಗೆ ಗೊತ್ತಿದೆ. ಹಾಗಾಗಿ ನಾನು ಮೈಪೂರ್ತಿ ಬಟ್ಟೆ ಹಾಕಿ ಎಂದರೆ ನನಗೆ ಯಾರೂ ಡೇಟ್ಸ್ ಕೊಡಲಾರರು.

ವೆಬ್ದುನಿಯಾವನ್ನು ಓದಿ