ಸುದೀಪ್-ದರ್ಶನ್: ಪ್ರೀತಿಯ ಗೆಳೆಯನಿಗೆ ಮಾತಿನ ಉಡುಗೊರೆ

PR
ದಶಕದ ಹಿಂದೆ ಇಬ್ಬರೂ ಎರಡು-ಮೂರು ವರ್ಷಗಳ ಅಂತರದಲ್ಲಿ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಸಮಕಾಲೀನರಾಗಿದ್ದರಿಂದ ಅಭಿಮಾನಿಗಳೂ ಹಂಚಿ ಹೋಗಿದ್ದರು. ಒಂದೇ ರೀತಿಯ ಚಿತ್ರಗಳು ಬೇರೆ. ಸೀಮಿತ ಮಾರುಕಟ್ಟೆಯಲ್ಲಿ ಅವರ ಚಿತ್ರಗಳ ಬಿಡುಗಡೆಯೆಂದರೆ ಯುದ್ಧದ ದಿನವೋ ಎಂಬಂತಹ ಆತಂಕ. ಅದಕ್ಕೆ ತಕ್ಕ ಡೈಲಾಗುಗಳು ಬೇರೆ. ಇಬ್ಬರೂ ದುಷ್ಮನ್‌ಗಳಂತಾಗಿದ್ದರು. ಆ ಇಬ್ಬರು ಬೇರೆ ಯಾರೂ ಅಲ್ಲ, ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್!

ನಿಜ ಜೀವನದಲ್ಲಿ ಅವರಿಬ್ಬರು ಪರಸ್ಪರ ಸ್ಪರ್ಧಿಗಳು ಎಂದು ಭಾವಿಸಿದ್ದರೋ ಅಥವಾ ಇಲ್ಲವೋ? ಅಂತೂ ಈಗ ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದ ಆಪ್ತಮಿತ್ರರು. ಆಡಿಯೋ ಬಿಡುಗಡೆ, ಮುಹೂರ್ತ, ಸಂತೋಷ ಕೂಟ ಹೀಗೆ ಇಬ್ಬರಿಗೆ ಸಂಬಂಧಪಟ್ಟ ಯಾವ ಕಾರ್ಯಕ್ರಮವಿದ್ದರೂ ಅಲ್ಲಿ ಸುದೀಪ್-ದರ್ಶನ್ ಜತೆಯಾಗಿರುತ್ತಾರೆ ಅನ್ನೋದೀಗ ಮಾಮೂಲಿ.

ಈಗೇನೋ ಅವರಿಬ್ಬರು ಜತೆಯಾಗಿ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೇನೋ ಎಂದೆಲ್ಲ ಕಲ್ಪಿಸಿಕೊಳ್ಳಬೇಡಿ. ಅದಕ್ಕಿನ್ನೂ ಅಭಿಮಾನಿಗಳು ಕಾಯಬೇಕು. ಸದ್ಯ ದರ್ಶನ್ ಚಿತ್ರವೊಂದಕ್ಕೆ ಸುದೀಪ್ ತನ್ನ ಆಕರ್ಷಕ ಕಂಠದಾನ ಮಾಡಿದ್ದಾರೆ. ಚಿತ್ರದ ಹಿನ್ನೆಲೆ-ಮುನ್ನೆಲೆಗೆ ದನಿಯಾಗಿದ್ದಾರೆ.

PR
ಸುದೀಪ್ ಹೀಗೆ ಹಿನ್ನೆಲೆಯಾಗಿ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿದ್ದ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದಲ್ಲೂ ಕಿಚ್ಚನ ದನಿಯಿತ್ತು. ಈಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಪಾತ್ರವಲ್ಲದ ಪಾತ್ರಕ್ಕೆ ಕಂಠದಾನ ಮಾಡಿದ್ದಾರೆ. ಅಂದರೆ ಕಾಮೆಂಟರಿ ಕೊಟ್ಟಿದ್ದಾರೆ.

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಗೊತ್ತೇ ಇದೆ, ಆನಂದ್ ಅಪ್ಪುಗೋಳ್ ನಿರ್ಮಾಣದ ಬಹುಕೋಟಿ ಸಿನಿಮಾ. ಇದರಲ್ಲಿ ರಾಯಣ್ಣನ ಪಾತ್ರವನ್ನು ದರ್ಶನ್ ಮಾಡಿದ್ದಾರೆ. ನಿರ್ದೇಶನದ ಹೊಣೆ ನಾಗಣ್ಣ ಅವರದ್ದು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಗೆಳೆಯ ದರ್ಶನ್ ಮಾತಿಗೆ ಕಟ್ಟುಬಿದ್ದು ಸೋಮವಾರ ಕರಿಸುಬ್ಬು ಅವರ ಸ್ಟುಡಿಯೋಗೆ ಹೋಗಿರುವ ಸುದೀಪ್, ಹಿನ್ನೆಲೆ ಧ್ವನಿ ಕೊಟ್ಟಿದ್ದಾರೆ. ಸುಮಾರು ಎರಡು ನಿಮಿಷಗಳ ಸಂಭಾಷಣೆಯದು. ಚಿತ್ರ ಆರಂಭವಾಗುವ ಮೊದಲು ಮತ್ತು ಮುಗಿಯುವ ಮೊದಲು ಹಿನ್ನೆಲೆಯಾಗಿ ಕೇಳುವ ಮಾತು. ಅದಕ್ಕೆ ಸುದೀಪ್ ಧ್ವನಿ ಚೆನ್ನಾಗಿ ಹೊಂದುತ್ತದೆ ಎಂಬ ಕಾರಣಕ್ಕೆ ದರ್ಶನ್ ಅವರನ್ನೇ ಕರೆಸುವ ಮನಸ್ಸು ಮಾಡಿದ್ದರಂತೆ.

ಸುದೀಪ್ ತನ್ನ ಧ್ವನಿ ಡಬ್ ಮಾಡುವಾಗ ದರ್ಶನ್, ನಿರ್ಮಾಪಕ ಆನಂದ್ ಅಪ್ಪುಗೋಳ್, ನಿರ್ದೇಶಕ ನಾಗಣ್ಣ, ಕಥೆಗಾರ ಕೇಶವಾದಿತ್ಯ, ವಿತರಕ ಎಚ್.ಡಿ. ಗಂಗರಾಜು, ಸಾಧುಕೋಕಿಲಾ, ನಿರ್ದೇಶಕ ದಿನಕರ್ ತೂಗುದೀಪ್ ಮುಂತಾದವರಿದ್ದರು. ಹಿಂದಿನ ದಿನವೇ ಹುಟ್ಟುಹಬ್ಬವಾಗಿದ್ದರೂ ಸ್ಟುಡಿಯೋದಲ್ಲೇ ದರ್ಶನ್ ಸಮ್ಮುಖದಲ್ಲಿ ಇನ್ನೊಮ್ಮೆ ಕೇಕ್ ಕಟ್ ಮಾಡಿ ಕಿಚ್ಚನ ಬರ್ತ್‌ಡೇ ಸಂಭ್ರಮಿಸಲಾಯಿತು.

ವೆಬ್ದುನಿಯಾವನ್ನು ಓದಿ