ಸುದೀಪ್ 2ನೇ ಕಥೆಯೂ ಶಿವಣ್ಣನಿಗೆ ಇಷ್ಟವಾಗಲಿಲ್ವೇ?

SUJENDRA
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್‌ಗಾಗಿ ಕಿಚ್ಚ ಸುದೀಪ್ ರೆಡಿ ಮಾಡಿದ್ದ ಮೊದಲನೇ ಕಥೆ ರಿಜೆಕ್ಟ್ ಆಗಿತ್ತು. ನಿರಾಸೆಯಾಗದ ಸುದೀಪ್ ಇನ್ನೊಂದು ಕಥೆಯನ್ನು ಶಿವಣ್ಣನಿಗೆ ಒಪ್ಪಿಸಿದ್ದಾರೆ. ಆದರೆ ಇನ್ನೂ ಆ ಕಡೆಯಿಂದ ಗ್ರೀನ್ ಸಿಗ್ನಲ್ ಬಂದಿಲ್ಲ. ಇತ್ತ ಸುದೀಪ್ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಶಿವಣ್ಣನಿಗೆ ಕಥೆ ಕೊಟ್ಟಿದ್ದೇನೆ. ಅವರಿನ್ನೂ ಓಕೆ ಅಂದಿಲ್ಲ. ಅವರಿಗಾಗಿ ಕಾಯುತ್ತಿದ್ದೇನೆ. ಆ ಕಡೆಯಿಂದ ಗ್ರೀನ್ ಸಿಗ್ನಲ್ ಬಂದರೆ ನಮ್ಮ ಚಿತ್ರ ಯಾವತ್ತು ಬೇಕಾದರೂ ಶುರುವಾಗಬಹುದು ಎಂದು ಸುದೀಪ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆರಂಭದಲ್ಲಿ ಶಿವಣ್ಣರನ್ನು '1993' ಎಂಬ ಆಕ್ಷನ್ ಚಿತ್ರದಲ್ಲಿ ನಿರ್ದೇಶಿಸಲು ಸುದೀಪ್ ಹೊರಟಿದ್ದರು. ಅದರಂತೆ ಶಿವಣ್ಣನ ಜತೆ ಸುದೀಪ್ ಮತ್ತು ಲೂಸ್ ಮಾದ ಯೋಗೀಶ್ ಕೂಡ ನಟಿಸಬೇಕಿತ್ತು. ಆದರೆ ಈ ಕಥೆಗೆ ಶಿವಣ್ಣ ನೋ ಅಂದರು. ಈಗ ಅವರ ಕೈ ಸೇರಿರುವ ಕಥೆಯೂ ಆಕ್ಷನ್. ಆದರೆ ಇಲ್ಲಿ ಲೂಸ್ ಮಾದ ಇರೋದಿಲ್ಲ. ಶಿವಣ್ಣ ಮತ್ತು ಸುದೀಪ್ ಜೋಡಿ ಇರುತ್ತದೆ. ಆದರೆ ಇದಕ್ಕೂ ಶಿವಣ್ಣ ಪ್ರತಿಕ್ರಿಯೆ ನೀಡಿಲ್ಲ.

ರಾಜ್ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವರಾಜ್ ಕುಮಾರ್ ವಿರುದ್ಧ ಸುದೀಪ್ ಎಗರಾಡಿದ್ದಾರೆ ಅನ್ನೋದು ದೊಡ್ಡ ಸುದ್ದಿಯಾದ ನಂತರ ರಾಜ್ ಕುಟುಂಬದ ಜತೆಗಿನ ಸಂಬಂಧಕ್ಕೆ ಯಾವುದೇ ಧಕ್ಕೆಯಾಗಿಲ್ಲ ಅನ್ನೋದನ್ನು ತೋರಿಸಿಕೊಳ್ಳಲು ಸುದೀಪ್ ಯತ್ನಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಶಿವಣ್ಣ ಜತೆಗಿನ ಚಿತ್ರವೂ ಒಂದು ಎಂದು ಹೇಳಲಾಗುತ್ತಿದೆ.

ಕೈಯಲ್ಲಿ ಎರಡೆರಡು ರಿಮೇಕ್...
ಈ ನಡುವೆ ಸುದೀಪ್ ಎರಡೆರಡು ರಿಮೇಕ್ ಚಿತ್ರಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಒಂದು ಚಿರಂಜೀವಿ ಸರ್ಜಾ-ನಿಕಿಶಾ ಪಟೇಲ್ ನಾಯಕ-ನಾಯಕಿಯರಾಗಿರುವ 'ವರದನಾಯಕ'. ಇದು ತೆಲುಗಿನ 'ಲಕ್ಷ್ಯಂ' ರಿಮೇಕ್. ಸುದೀಪ್ ಇಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶಂಕರೇಗೌಡರ ನಿರ್ಮಾಣದ ಚಿತ್ರವನ್ನು ಅಯ್ಯಪ್ಪ ನಿರ್ದೇಶಿಸುತ್ತಿದ್ದಾರೆ.

ಭೂಮಿಕಾ ಚಾವ್ಲಾ ನೋ ಅಂದ ನಂತರ ಸುದೀಪ್ ನಾಯಕಿಯಾಗಿ ತೆಲುಗಿನ ಕಮಲಿನಿ ಮುಖರ್ಜಿ ಆಯ್ಕೆಯಾಗಿದ್ದಾರೆ ಎಂಬ ಲೇಟೆಸ್ಟ್ ಸುದ್ದಿಯೂ ಬಂದಿದೆ. ಈ ಹಿಂದೆ 'ಸವಾರಿ' ಚಿತ್ರದಲ್ಲಿ ಕಮಿಲಿನಿ ಅಭಿನಯಿಸಿದ್ದರು. ಹಾಗಾಗಿ ಅವರಿಗೆ ಕನ್ನಡ ಹೊಸತೇನಲ್ಲ.

ಇನ್ನೊಂದು ತೆಲುಗಿನ 'ಕಿಕ್' ರಿಮೇಕ್. ಕನ್ನಡದಲ್ಲಿ ಇನ್ನೂ ಹೆಸರಿಟ್ಟಿಲ್ಲ. ಎನ್. ಕುಮಾರ್ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು 'ಚಿಂಗಾರಿ' ಹರ್ಷ. ಇನ್ನೂ ನಾಯಕಿಯ ಆಯ್ಕೆಯಾಗಿಲ್ಲ. ಮಾರ್ಚ್ 24ರಂದು ಚಿತ್ರೀಕರಣ ಶುರು ಅಂತಿದೆ ಚಿತ್ರತಂಡ.

ವೆಬ್ದುನಿಯಾವನ್ನು ಓದಿ