ಹರ್ಷಿಕಾ ಪೂಣಚ್ಚ ಭವಿಷ್ಯದ ಲೇಡಿ ಡೈರೆಕ್ಟರ್ ?

SUJENDRA
ಕನ್ನಡ ಚಿತ್ರರಂಗದಲ್ಲೇ ಯಾಕೆ, ಇಡೀ ಭಾರತೀಯ ಸಿನಿಮಾದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರಾ ವಿರಳ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಕಾಣಿಸಿಕೊಂಡರೂ, ಯಶಸ್ವಿಯಾದವರು ಕಡಿಮೆಯೇ. ಹೀಗಿದ್ದಾಗ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ನಟನೆಯ ಜತೆ ನಿರ್ದೇಶನದ ಕಲೆಯನ್ನೂ ಕಲಿಯುತ್ತಿದ್ದಾರೆ.

ಕನ್ನಡದ ಮೊದಲ ಮಹಿಳಾ ನಿರ್ದೇಶಕಿ ಎಂಬ ಖ್ಯಾತಿ ಪ್ರೇಮಾ ಕಾರಂತ್ ಅವರದ್ದು. ಆ ನಂತರ ಅವರಂತೆ ಆಕ್ಷನ್ ಕಟ್ ಹೇಳಲು ಹೋದವರ ಸಂಖ್ಯೆ ದೊಡ್ಡದೇನಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಮಂದಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರಾದರೂ, ಕಮರ್ಷಿಯಲ್ ಚಿತ್ರಗಳಲ್ಲಿ ಸೈ ಎನಿಸಿಕೊಳ್ಳುವುದು ಸಾಧ್ಯವಾಗಿಲ್ಲ.

ಈ ಸಾಲಿಗೆ ಪೂರ್ಣಿಮಾ ಮೋಹನ್, ಪ್ರಿಯಾ ಭಾರತಿ, ಪ್ರಿಯಾ ಹಾಸನ್, ರೂಪಾ ಅಯ್ಯರ್, ಸುಮನಾ ಕಿತ್ತೂರು, ಕವಿತಾ ಲಂಕೇಶ್ ಮುಂತಾದವರು ಸೇರುತ್ತಾರೆ. ಇವರು ನಿರ್ದೇಶಿಸಿದ ಕೆಲವು ಚಿತ್ರಗಳು ಹಿಟ್ ಎನಿಸಿಕೊಂಡರೂ, ಪುರುಷ ಪ್ರಧಾನವಾಗಿ ಕಾಣಿಸುವ ಬಣ್ಣದ ಲೋಕದಲ್ಲಿ ಇನ್ನೂ ಮಿಂಚುವುದು ಸಾಧ್ಯವಾಗಿಲ್ಲ.

ಹೀಗಿರುವಾಗ ಹರ್ಷಿಕಾ ಪೂಣಚ್ಚ ನಿರ್ದೇಶಕಿಯಾಗಲು ಹೊರಟಿದ್ದಾರೆ. ಹಾಗೆ ಹೊರಟಿರುವುದು ಕೂಡ ಮಹಿಳಾ ನಿರ್ದೇಶಕಿಯ ಚಿತ್ರದಲ್ಲಿ ಅನ್ನೋದು ವಿಶೇಷ. ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿ ಲೋಕ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ಮಾಡುತ್ತಿರುವ ಹರ್ಷಿಕಾ, ಇಲ್ಲಿ ಸಹಾಯಕ ನಿರ್ದೇಶಕಿಯೂ ಹೌದು.

ಕವಿತಾ ಲಂಕೇಶ್ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಖುಷಿಯನ್ನು ಹರ್ಷಿಕಾ ಹಂಚಿಕೊಂಡಿದ್ದಾರೆ. "ಕವಿತಾ ಜತೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಅನುಭವವನ್ನು ವಿವರಿಸಲು ಸಾಧ್ಯವಿಲ್ಲ; ನಿರ್ದೇಶನದ ಸೂಕ್ಷ್ಮತೆಗಳನ್ನು ಅವರು ನವಿರಾಗಿ ವಿವರಿಸಿದರು. ಯಾವ ದೃಶ್ಯವನ್ನು ಹೇಗೆ ಚಿತ್ರೀಕರಿಸಬೇಕು ಎಂಬುದನ್ನೂ ಬಿಡಿಬಿಡಿಯಾಗಿ ಹೇಳಿಕೊಟ್ಟರು. ನಿಜಕ್ಕೂ ಇದು ನನಗೆ ತುಂಬಾ ಸಹಾಯವಾಗಿದೆ" ಎಂದಿದ್ದಾರೆ.

ಅಂದ್ರೆ ಮುಂದಿನ ದಿನಗಳಲ್ಲಿ ನಾಯಕಿಯೊಬ್ಬಳು ನಿರ್ದೇಶಕಿಯಾಗುವುದನ್ನು ಕನ್ನಡ ಚಿತ್ರರಂಗ ಎದುರು ನೋಡಬಹುದೇ? ಗೊತ್ತಿಲ್ಲ. ಇದನ್ನು ಕಾಲವೇ ಹೇಳಬೇಕು.

ಅಂದ ಹಾಗೆ, ಕ್ರೇಜಿ ಲೋಕ ಚಿತ್ರದಲ್ಲಿ ರವಿಚಂದ್ರನ್ ನಾಯಕ, ಡೈಸಿ ಬೋಪಣ್ಣ ನಾಯಕಿ. ಹೊಸ ಹುಡುಗ ಸೂರ್ಯನಿಗೆ ಹರ್ಷಿಕಾ ಜೋಡಿ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಕ್ರೇಜಿ ಲೋಕ ಶೀಘ್ರದಲ್ಲೇ ತೆರೆಗೆ ಬರಲಿದೆ.

ವೆಬ್ದುನಿಯಾವನ್ನು ಓದಿ